January 18, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಜಾಲ್‍ನಲ್ಲಿ ಸಡಗರದ ಸೌಹಾರ್ದ ಕ್ರಿಸ್‍ಮಸ್ ಕಾರ್ಯಕ್ರಮ

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಬಜಾಲ್‍ನ ಪಕ್ಕಲಡ್ಕದಲ್ಲಿ ಡಿಸೆಂಬರ್ 20ರಂದು ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್‍ಮಸ್ ಆಚರಣೆ ಸಡಗರದಿಂದ ನೆರವೇರಿತು. ಸ್ಥಳೀಯ ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಹೋಲಿ ಸ್ಪಿರಿಟ್ ಚರ್ಚ್, ಮೊಹಿಯುದ್ದೀನ್ ಜುಮ್ಮಾ ಮಸೀದಿ, ಪಕ್ಕಲಡ್ಕ, ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ ವ್ಯಾಯಾಮ ಶಾಲೆ ಇವುಗಳ ಸಂಯುಕ್ತ ಭಾಗೀದಾರಿಕೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ದೈಯ್ಜಿ ವರ್ಲ್ಡ್‍ನ ಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಮಾನವೀಯತೆಯೇ ಶ್ರೇಷ್ಠ ಧರ್ಮ, ಇತರರು ಬದಲಾಗಬೇಕೆಂದು ಬಯಸುವ ಬದಲು ನಾವು ಮೊದಲು ಬದಲಾಗಬೇಕೆಂದು ಕರೆ ನೀಡಿದರು. ಇತರ ಧರ್ಮಗಳಿಗೆ ಸೂಕ್ತ ಗೌರವ ನೀಡುವುದು ಅಗತ್ಯವೆಂದ ಅವರು, ಬೇರೆ ಧರ್ಮೀಯರನ್ನು ಕೇವಲವಾಗಿ ನೋಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಜಾಲ್ ಚರ್ಚ್‍ನ ಧರ್ಮಗುರು ವಂದನೀಯ ಫಾದರ್ ಆಂಡ್ರ್ಯೂ ಡಿಸೋಜ, ನಾವೆಲ್ಲರೂ ದೇವರ ಮಕ್ಕಳು, ಯಾರೂ ವೈರಿಗಳಲ್ಲ ಬದಲಾಗಿ ನಾವೆಲ್ಲರೂ ಮಿತ್ರರು, ಪ್ರೀತಿಯೇ ಎಲ್ಲಾ ಧರ್ಮಗಳ ತತ್ವ, ಎಲ್ಲರೂ ಒಂದಾಗಿ ಪ್ರೀತಿಯಿಂದ ಬಾಳಬೇಕೆಂದು ಪ್ರವಚನ ನೀಡಿದರು.

ಕಾರ್ಯದ್ರಮದ ಅಧ್ಯಕ್ಷರಾಗಿ ಆಗಮಿಸಿದ ಮದರ್ ತೆರೆಸಾ ವೇದಿಕೆಯ ಅಧ್ಯಕ್ಷ ರೊಯ್ ಕಾಸ್ತೆಲಿನೊ ಮಾತನಾಡಿ, ಎಲ್ಲಾ ಧರ್ಮಗಳನ್ನು ಗೌರವಿಸುವ, ಪರ ಧರ್ಮಗಳನ್ನು ಅರ್ಥ ಮಾಡಿಕೊಳ್ಳುವ ಕೈಂಕರ್ಯವನ್ನು ವೇದಿಕೆ ಮಾಡುತ್ತಾ ಬಂದಿದೆ. ಮದರ್ ತೆರೆಸಾರವರು ತೋರಿಸಿದ ದಾರಿಯಲ್ಲಿ ಮುನ್ನಡೆಯುತ್ತಾ ಎಲ್ಲೆಡೆ ಪ್ರೀತಿಯನ್ನು ಹರಡುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದರು. ಕಳೆದ ವರ್ಷಗಳಲ್ಲಿ ವೇದಿಕೆ ನಡೆಸಿದ ಒಳ್ಳೆಯ ಕಾರ್ಯಗಳನ್ನು ಮೆಚ್ಚಿ ಸಹಕಾರ ನೀಡುತ್ತಿರುವವರ, ಬೆಂಬಲಿಗರ ಸಂಖ್ಯೆ ಹೆಚ್ಚುತ್ತಾ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಸ್ಥಳೀಯ ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ ಶುಭ ಹಾರೈಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿ, ವಿಚಾರ ವೇದಿಕೆಯ ಹಿನ್ನೆಲೆ, ಉದ್ದೇಶ ಮತ್ತು ಸಾಗಿ ಬಂದ ಹಾದಿಯನ್ನು ಬಣ್ಣಿಸಿದರು. ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಸ್ವಾಗತಿಸಿದರು.

ಪಕ್ಕಲಡ್ಕ ಮೊಹಿಯುದ್ದೀನ್ ಜಾಮಾ ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ರಿಯಾಜ್, ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಳ್ವ, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಕ್ಷಿತ್ ಭಂಡಾರಿ, ಜನತಾ ವ್ಯಾಯಾಮ ಶಾಲೆಯ ಅಶೋಕ್ ಎನೆಲ್‍ಮಾರ್, ಸೈಂಟ್ ಜೋಸೆಫ್ ಶಾಲೆ ಮತ್ತು ಹೈಸ್ಕೂಲ್‍ನ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಆರಂಭದಲ್ಲಿ ವಂದನೀಯ ಫಾದರ್ ವಾಲ್ಟರ್ ಅಲ್ಬುಕರ್ಕ್ ಕಾಯರ್ ಪಂಗಡದಿಂದ ಹಾಡುಗಾರಿಕೆ ನೆರವೇರಿತು. ಬಜಾಲ್ ಸೈಂಟ್ ಜೋಸೆಫ್ ಶಾಲೆ ಪಂಗಡದಿಂದ ಪ್ರಾರ್ಥನಾ ಗೀತೆ, ಲಿಯೋ ರಾಣಿಪುರ ತಂಡದಿಂದ ಗಾಯನ, ಬಜಾಲ್ ಸೈಂಟ್ ಜೋಸೆಫ್ ಹೈಸ್ಕೂಲ್ ತಂಡದಿಂದ ಕ್ರಿಸ್ಮಸ್ ಟ್ಯಾಬ್ಲೊ, ಪಕ್ಕಲಡ್ಕ ಯುವಕ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಹಾಗೂ ಮಾಂಡ್ ಸೊಭಾಣ್‍ನ ಕಲಾಕುಲ್ ಪಂಗಡದಿಂದ ಕಿರು ನಾಟಕ ಪ್ರದರ್ಶಿಸಲಾಯಿತು.

ಸಂತೋಷ್ ಕುಮಾರ್ ಬಜಾಲ್ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಡೊಲ್ಫಿ ಡಿಸೋಜ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ದೀಪಕ್ ಬಜಾಲ್ ಧನ್ಯವಾದ ಸಮರ್ಪಣೆ ಮಾಡಿದರು.

You may also like

News

ಉಡುಪಿ – ಕಾಸರಗೋಡು – ಕಡಂದಲೆ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ

ಉಡುಪಿ – ಕಾಸರಗೋಡು – ಕಡಂದೆಲೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಕ್ರೀಡಾಕೂಟ 2025
News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ

ಮಂಗಳೂರು : ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಪ್ರಮುಖ ಕ್ರೀಡಾ ಕಾರ್ಯಕ್ರಮವಾದ ಕರ್ನಾಟಕ ಕ್ರೀಡಾಕೂಟ 2025

You cannot copy content of this page