January 18, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಯೇಸು ಕ್ರಿಸ್ತರು ನಮ್ಮ ಹೃದಯಗಳಲ್ಲಿ ಶಾಂತಿ ಹಾಗೂ ಭರವಸೆಯನ್ನು ತರುತ್ತಾರೆ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರವರಿಂದ ಕ್ರಿಸ್ಮಸ್ ಸಂದೇಶ – 2024

 ಪ್ರತೀ ವರ್ಷ ಕ್ರಿಸ್‌ಮಸ್ ನಮಗೆ ಹೊಸ ಸಂದೇಶವನ್ನು ತರುತ್ತದೆ. ಆಯಾಸಗೊಂಡ ಈ ಜಗತ್ತಿಗೆ ಯೇಸು, ಅಚ್ಚರಿಯ ತಾಜಾತನವನ್ನು ನೀಡುವ ಕಾರಂಜಿ ಇದ್ದಂತೆ. ಕ್ರಿಸ್‌ಮಸ್, ದೇವರು ಮತ್ತು ಮನುಷ್ಯರ ನಡುವೆ, ಅಂತೆಯೇ ಮನುಷ್ಯ-ಮನುಷ್ಯರ ನಡುವಿನ ಜೀವನ ಹಾಗೂ ಜೀವ ನೀಡುವ ಸಂಬಂಧಗಳಂನ್ನು ಆಚರಿಸುತ್ತದೆ. ದೇವಪುತ್ರನು ಮಾನವನಾಗಿದ್ದಾನೆ ಎಂಬುದೇ ನಮ್ಮ ಸಂತೋಷದ ಕಾರಣ. ದೇವರು ನಮ್ಮೊಡನೆ ಇದ್ದಾರೆ ಎಂಬ ಭರವಸೆ ನೀಡುವುದಕ್ಕಾಗಿಯೇ ಅವರು ನಮ್ಮ ನಡುವೆ ಇಳಿದು ಬಂದಿದ್ದಾರೆ. ಮೇಲಿನಿಂದ, ಕತ್ತಲ ಮೋಡಗಳ ನಡುವೆ ಬೆಳಕಿನ ಕಿರಣವೊಂದು ಪ್ರಜ್ವಲಿಸುತ್ತಿದೆ ಹಾಗೂ ನಮ್ಮ ಮುರಿದು ಬಿದ್ದ ಮಾನವತೆಯಲ್ಲಿ ಒಂದು ಸಣ್ಣ ಬೆಳಕು ಹೊಳೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕತ್ತಲೆಯ ಮೋಡಗಳು ನಮ್ಮ ಮೇಲಿವೆ. ಹೆಚ್ಚು ಹೆಚ್ಚು ಜನರು ಯುದ್ದ, ಆತಂಕ, ಸ್ಥಳಾಂತರ ಹಾಗೂ ಅತೀವ ದುಃಖದಿಂದ ತತ್ತರಿಸುತ್ತಿರುವುದು ನಮಗೆ ಕಾಣುತ್ತಿದೆ. ದೇವರು ನಮ್ಮೊಡನೆ ಇದ್ದಾರಾದರೆ, ಈ ಮರಣದ ಸಂಸ್ಕೃತಿಯು ಯಾಕಾಗಿ ಪ್ರಭಲವಾಗುತ್ತಿದೆ? ಮಾನವರಲ್ಲಿ ಏಕೆ ಇಷ್ಟೊಂದು ಸಂಘರ್ಷ ಮತ್ತು ವಿಭಜನೆ ಉಂಟಾಗುತ್ತಿದೆ ಹಾಗೂ ದಿನ ಹೋದಂತೆ ಪರಿಸ್ಥಿತಿ ಹದೆಗೆಡುತ್ತಿದೆ? ಈ ಪ್ರಶ್ನೆಗಳನ್ನು ನಾವು ಕೇಳುತ್ತಿರುತ್ತೇವೆ.

ಇಂತಹ ಕಠಿಣ ಸಮಯದಲ್ಲಿ ಯೇಸು ಕ್ರಿಸ್ತರು ಶಾಂತಿ ಹಾಗೂ ಭರವಸೆಯ ರಾಜಕುಮಾರನಾಗಿ ಕಾಣುವುದು ಹೇಗೆ? ನೆನಪಿರಲಿ, ದೇವರು ನಮ್ಮ ಸಂಘರ್ಷಗಳಿಗೆ ಕಾರಣರಲ್ಲ ಎಂಬ ಭರವಸೆಯನ್ನು ಯೇಸು ನೀಡುತ್ತಾರೆ. ಸಂಕಷ್ಟಗಳ ಕಾರಣ ಮನುಷ್ಯನ ಸ್ವಾರ್ಥ ಮತ್ತು ಸ್ವಕೇಂದ್ರಿತ ನಿಲುವು. ಕೆಲವರ ಮುಕ್ತ ಆಯ್ಕೆಯಿಂದಾಗಿ ಹಲವರು ಸಂಕಷ್ಟಕ್ಕೊಳಗಾಗುತ್ತಾರೆ. ಆದರೆ ತಕ್ಕ ಮಟ್ಟಿಗೆ ನಾವೆಲ್ಲರೂ ಈ ಪರಿಸ್ಥಿತಿಗೆ ಹೊಣೆಗಾರರಾಗಿದ್ದೇವೆ ಎಂಬುವುದನ್ನು ಮರೆಯಬಾರದು. ಯೇಸುವಿನ ಒಳ್ಳೆಯತನದ ಬೆಳಕಿನ ಮುಂದೆ ನಮ್ಮನ್ನು ನಾವೇ ಸಾದಾರಪಡಿಸಿದರೆ ಸುಲಭವಾಗಿ ನಮ್ಮ ದೋಷಗಳ ಅರಿವಾಗಬಹುದು.

ಆದರೆ ನಾವು ನಿರಾಶರಾಗಬಾರದು. ನಮ್ಮ ವಕ್ರ ಗೆರೆಗಳ ಮೇಲೂ ನೇರವಾಗಿ ಬರೆಯಲು ದೇವರು ಬಂದಿದ್ದಾರೆ. ಜೀವನದ ಅತೀ ಕತ್ತಲೆಯ ಸಮಯದಲ್ಲೂ ಹೊಸ ಬೆಳಕಿನ ಆಶ್ವಾಸನೆಯೇ ಕ್ರಿಸ್‌ಮಸ್ ಆಚರಣೆಯ ತಿರುಳು. ಕ್ರಿಸ್‌ಮಸ್, ನಮ್ಮ ಮಾನವತೆಯ ಅತ್ಯುನ್ನತ ಘನತೆಯನ್ನು ಅರಿಯಲು ಒಂದು ಆಹ್ವಾನ. ಪ್ರೀತಿ ಮತ್ತು ಇತರರನ್ನು ಅರ್ಥಮಾಡಿಕೊಳ್ಳಲು ನಮಗಿರುವ ಆಶೆ, ವಿಭಜನೆಯ ಎಲ್ಲಾ ಗೋಡೆಗಳನ್ನು ಮೀರಬಲ್ಲುದು ಎಂಬ ಸತ್ಯವನ್ನು ಕ್ರಿಸ್‌ಮಸ್ ಜ್ಞಾಪಿಸುತ್ತದೆ. ಆದುದರಿಂದ, ಈ ಕ್ರಿಸ್‌ಮಸ್ ಸಮಯದಲ್ಲಿ ನಾವು ಮಾನವತೆಯನ್ನು ಎತ್ತಿ ಹಿಡಿಯೋಣ. ಬೆತ್ಲೆಹೇಮಿನ ಗೋದಲಿಯಲ್ಲಿ ಮಲಗಿರುವ ಮಗು ಯೇಸು ಕ್ರಿಸ್ತರಲ್ಲಿ ಮಾತ್ರ ನಾವು ದೇವರನ್ನು ಕಂಡರೆ ಸಾಲದು, ದೇವರ ಸ್ವರೂಪದಲ್ಲಿ ಸೃಷ್ಠಿಯಾದ ಪ್ರತೀ ಮನುಷ್ಯನಲ್ಲಿಯೂ ದೇವರನ್ನು ಕಾಣುವುದು ಅಗತ್ಯ.

ಪ್ರತಿ ವ್ಯಕ್ತಿಯಲ್ಲಿ ಹೊಸ ಭರವಸೆಯ ತಾಜಾತನವನ್ನು ತರಲು, 2024 ಡಿಸೆಂಬರ್ 24 ರಿಂದ, ಕಥೋಲಿಕ ಧರ್ಮಸಭೆಯು, ‘ಭರವಸೆಯ ಯಾತ್ರಿಕರು” ಎಂಬ ಧ್ಯೇಯವಾಕ್ಯದೊಂದಿಗೆ ಕ್ರಿಸ್ತರ 2025-ನೇ ವರುಷದ ಜ್ಯೂಬಿಲಿಯನ್ನು ಆಚರಿಸುತ್ತಿದೆ. ಮಂಗಳೂರು ಧರ್ಮಕ್ಷೇತ್ರವು, 2024 ಡಿಸೆಂಬರ್ 29-ರಿಂದ ಆರಂಭಿಸಿ ಇಡೀ ವರುಷ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಖಂಡಿತವಾಗಿಯೂ, ಪ್ರತಿ ಹೃದಯದಲ್ಲಿ ಹೊಸ ಭರವಸೆಯನ್ನು ಇದು ಮೂಡಿಸಲಿದೆ. ನಾವೆಲ್ಲರೂ ಶಾಂತಿಗಾಗಿ ಪ್ರಾರ್ಥಿಸುವುದಕ್ಕಾಗಿ ಪುಣ್ಯಕ್ಷೇತ್ರಗಳನ್ನೂ ಸೂಚಿಸಿದ್ದೇವೆ. ಯೇಸು ಕ್ರಿಸ್ತರ ಶಿಲುಬೆಯ ಬ್ಯಾನರ್ ಅಡಿಯಲ್ಲಿ ಇದೆಲ್ಲವೂ ನಡೆಯಲಿರುವುದು.

ಸಂಕಷ್ಟದಲ್ಲಿರುವ ಎಲ್ಲಾ ಬಂಧುಗಳಿಗೆ, ಈ ಕ್ರಿಸ್‌ಮಸ್ ಸಮಯದಲ್ಲಿ, ನಮ್ಮ ಪ್ರಾರ್ಥನೆ ಹಾಗೂ ಕಾಳಜಿ ತಲುಪಲಿ. ನಮ್ಮ ಕಾರ್ಯಗಳು ಶಾಂತಿಯ ರಾಷ್ಟ್ರವನ್ನೂ, ಮಾನವೀಯತೆಯ ಜಗತ್ತನ್ನೂ ಕಟ್ಟುವ ಸಂಕಲ್ಪವನ್ನು ಪ್ರತಿಬಿಂಬಿಸಲಿ. ಕ್ರಿಸ್ತರ ಶಾಂತಿ ಮತ್ತು ಭರವಸೆ ನಮ್ಮೆಲ್ಲರ ಹೃದಯಗಳಲ್ಲಿ ಹಾಗೂ ಕಾರ್ಯಗಳಲ್ಲಿ ಪ್ರವೇಶಿಸಲಿ. ನಾವು ಸಮಾಜವನ್ನು ಗುಣಪಡಿಸುವ ಔಷಧಿಯಾಗಿಯೂ, ದಿಟ್ಟ ಭರವಸೆಯಾಗಿಯೂ, ಏಕತೆಯನ್ನು ತರುವ ಪ್ರೀತಿಯಾಗಿಯೂ ಜೀವಿಸುವ. ಆಗ, ಕ್ರಿಸ್‌ಮಸ್ ಆಚರಣೆಗೆ ಗೌರವ ಸಲ್ಲುತ್ತದೆ, ಅಂತೆಯೇ ದೇವರ ಆಶೀರ್ವಾದಕ್ಕೆ ನಾವು ಪಾತ್ರರಾಗುತ್ತೇವೆ ಎಂದು ಹೇಳಿದರು.

ನಾಡಿನ ಸಮಸ್ತ ಬಂಧು-ಬಾಂಧವರಿಗೆ ದೇವರ ಪ್ರೀತಿ, ಭರವಸೆ ಹಾಗೂ ಶಾಂತಿ ತುಂಬಿದ ಕ್ರಿಸ್‌ಮಸ್ ಹಾಗೂ ಹೊಸ ವರುಷದ ಶುಭಾಶಯಗಳನ್ನು ಕೋರಿದರು.

You may also like

News

ಉಡುಪಿ – ಕಾಸರಗೋಡು – ಕಡಂದಲೆ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ

ಉಡುಪಿ – ಕಾಸರಗೋಡು – ಕಡಂದೆಲೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಕ್ರೀಡಾಕೂಟ 2025
News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ

ಮಂಗಳೂರು : ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಪ್ರಮುಖ ಕ್ರೀಡಾ ಕಾರ್ಯಕ್ರಮವಾದ ಕರ್ನಾಟಕ ಕ್ರೀಡಾಕೂಟ 2025

You cannot copy content of this page