ದೇವರು ಕೋಪ, ದ್ವೇಷದ ಮಾತುಗಳನ್ನು ಎಲ್ಲಿಯೂ ಆಡಿಲ್ಲ. ದೇವರ ನಿಜವಾದ ಭಾಷೆಯೇ ಪ್ರೀತಿ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ
ಮಂಗಳೂರು ಧರ್ಮಕ್ಷೇತ್ರದಲ್ಲಿ ಎಲ್ಲೆಡೆಯೂ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ
ಮಂಗಳೂರು ಡಿಸೆಂಬರ್ 25 : ಕ್ರೈಸ್ತ ಪವಿತ್ರ ಗ್ರಂಥಗಳಲ್ಲಿ ದೇವರು ಕೋಪ, ದ್ವೇಷದ ಮಾತುಗಳನ್ನು ಎಲ್ಲಿಯೂ ಆಡಿಲ್ಲ. ಅವರು ಪ್ರೀತಿಯ ಮಾತುಗಳನ್ನೇ ಹೇಳುತ್ತಾ ಸಾಗಿದರು. ದೇವರು ಪ್ರೀತಿಯ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರೀತಿಗೆ ಹೆಚ್ಚು ಮಹತ್ವ ಕೊಡುವ ಮೂಲಕ ನಾವು ಸಮಾಜದಲ್ಲಿರುವ ನೆರೆಹೊರೆಯವರ ಜೊತೆಗೆ ಪ್ರೀತಿಯನ್ನು ಹಂಚುವ ಕೆಲಸ ಮಾಡಬೇಕು.
ಗೋದಲಿಯಲ್ಲಿ ಹುಟ್ಟಿದ ಯೇಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಜೊತೆಗೆ ಕ್ಷಮಿಸುವ ಗುಣವನ್ನು ಹೊಂದಿದಂತೆ ನಾವು ಕೂಡ ಇದನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.
ಅವರು ಮಂಗಳೂರು ಧರ್ಮಕ್ಷೇತ್ರದ ರೊಸಾರಿಯೋ ಕೆಥೆಡ್ರಲ್‍ನಲ್ಲಿ ಡಿಸೆಂಬರ್ 24ರಂದು ರಾತ್ರಿ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಭಕ್ತಾಧಿಗಳಿಗೆ ಆಶೀರ್ವಚನ ನೀಡುತ್ತಾ ಹೇಳಿದರು.
ಈ ಸಂದರ್ಭದಲ್ಲಿ ರೊಸಾರಿಯೋ ಕೆಥೆಡ್ರಲ್‍ನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಆಲ್ಪ್ರೆಡ್ ಜೆ. ಪಿಂಟೋ ಸೇರಿದಂತೆ ಇತರ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಎಲ್ಲಾ ಚರ್ಚ್‍ಗಳಲ್ಲಿ ಕ್ರಿಸ್ಮಸ್ ಕ್ಯಾರಲ್ಸ್, ದಿವ್ಯ ಬಲಿಪೂಜೆ ಹಾಗೂ ಕ್ರಿಸ್ಮಸ್ ಹಬ್ಬದ ಬಾಬ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬಲಿಪೂಜೆಯ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡುವುದು, ಸಿಹಿತಿನಸುಗಳು (ಕುಸ್ವಾರ್) ಕೇಕ್‍ಗಳನ್ನು ಹಂಚುವ ದೃಶ್ಯಗಳು ಎಲ್ಲೆಡೆ ಕಾಣಿಸಿಕೊಂಡಿತು.
ಇನ್ನು ಕೆಲವು ಚರ್ಚ್‌ಗಳಲ್ಲಿ ಕಥೊಲಿಕ್ ಸಭಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮನೋರಂಜನಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.