January 14, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪವರ್ ಆಫ್ ಅಟಾರ್ನಿ (ಮುಖ್ತ್ಯಾರ್‍ನಾಮೆ) ಬಗ್ಗೆ ಅಗತ್ಯವಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ನಿಜ ಅಂಶಗಳು – ಕೆ. ವಿಜೇಂದ್ರ ಕುಮಾರ್ ವಕೀಲರು  

ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ತನ್ನ ಪರವಾಗಿ ಯಾವುದೇ ಕಾರ್ಯ ನಿರ್ವಹಿಸಲು ಮತ್ತು ವ್ಯವಹರಿಸಲು ಇನ್ನೊಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಗೆ ನೀಡುವ ಲಿಖಿತ ಅಧಿಕಾರ ಪತ್ರಕ್ಕೆ ಪವರ್ ಆಫ್ ಅಟಾರ್ನಿ ಅಥವಾ ಮುಖ್ತ್ಯಾರ್‍ನಾಮೆ ಎನ್ನುತ್ತಾರೆ. ಪವರ್ ಆಫ್ ಅಟಾರ್ನಿ ಎಂಬ  ದಾಖಲೆಗೆ ಸಂಬಂಧಪಟ್ಟಂತೆ ಪವರ್ ಆಫ್ ಅಟಾರ್ನಿ ಆಕ್ಟ್ 1882 ಎಂಬ ವಿಶೇಷವಾದ ಕಾನೂನು ನಮ್ಮದೇಶದಲ್ಲಿ ಜ್ಯಾರಿಯಲ್ಲಿರುತ್ತದೆ.

ಪವರ್ ಆಫ್ ಅಟಾರ್ನಿಯಲ್ಲಿ (1) ಸಾಮಾನ್ಯ ಪವರ್ ಆಫ್ ಅಟಾರ್ನಿ (ಜನರಲ್ ಪವರ್ ಆಫ್ ಅಟಾರ್ನಿ) ಮತ್ತು (2) ವಿಶೇಷ ಪವರ್ ಆಫ್ ಅಟಾರ್ನಿ (ಸ್ಪೆಷಲ್ ಪವರ್ ಆಫ್ ಅಟಾರ್ನಿ) ಎಂಬ ಎರಡು ವಿಧಗಳಿರುತ್ತದೆ. ಒಂದಕ್ಕಿಂತ ಹೆಚ್ಚು ಕಾರ್ಯಗಳಲ್ಲಿ ವ್ಯವಹರಿಸಲು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನೀಡುವ ಪವರ್ ಆಫ್ ಅಟಾರ್ನಿ ಸಾಮಾನ್ಯ ಪವರ್ ಆಫ್ ಅಟಾರ್ನಿ (ಜನರಲ್ ಪವ‌ ಆಫ್ ಅಟಾರ್ನಿ) ಆಗಿರುತ್ತದೆ. ಅದೇ ರೀತಿಯಾಗಿ ನಿರ್ದಿಷ್ಟವಾದ ಯಾವುದೇ ಒಂದು ಕಾರ್ಯವನ್ನು ಮಾಡುವ ಉದ್ದೇಶಕ್ಕಾಗಿ ನೀಡುವ ಪವರ್ ಆಫ್ ಅಟಾರ್ನಿ ವಿಶೇಷ ಪವರ್ ಆಫ್ ಅಟಾರ್ನಿ (ಸ್ಪೆಷಲ್ ಪವರ್ ಆಫ್ ಅಟಾರ್ನಿ) ಆಗಿರುತ್ತದೆ. ಪ್ರಾಪ್ತ ವಯಸ್ಸಿನ (18 ವರ್ಷ ಮೀರಿದ), ಸ್ವಸ್ಥ ಮನಸ್ಸಿನ, ದಿವಾಳಿಯಾಗಿರದ ಯಾವುದೇ ವ್ಯಕ್ತಿ ಪವರ್ ಆಫ್ ಅಟಾರ್ನಿ ಬರೆದುಕೊಡುವ ಅರ್ಹತೆ ಹೊಂದಿರುತ್ತಾನೆ. ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಜಂಟಿಯಾಗಿ ಒಂದೇ ಪವರ್ ಆಫ್ ಅಟಾರ್ನಿಯನ್ನು ಇನ್ನೊಬ್ಬರ ಹೆಸರಿಗೆ ಬರೆದುಕೊಡಬಹುದು.

ಪವರ್ ಆಫ್ ಅಟಾರ್ನಿಯನ್ನು ನೋಂದಣಿ ಮಾಡಬೇಕೆಂಬ ಕಡ್ಡಾಯವಾದ ನಿಯಮವಿರುವುದಿಲ್ಲ. ಆದರೂ ಇಂತಹ ದಾಖಲೆಯನ್ನು ನೋಂದಾಯಿಸುವುದರಿಂದ ಅದರ ನೈಜತೆಯ ಬಗ್ಗೆ ಹೆಚ್ಚು ನಂಬಿಕೆ ಮತ್ತು ವಿಶ್ವಾಸ ಬರುವುದರಿಂದ ವ್ಯವಹಾರಗಳು ಅದರಲ್ಲೂ ಮುಖ್ಯವಾಗಿ ಆಸ್ತಿ ಮಾರಾಟಕ್ಕೆ ಸಂಬಂಧಪಟ್ಟ ವ್ಯವಹಾರಗಳು ಸುಗಮವಾಗಿ ನಡೆಯುವುದರಿಂದ ಅದನ್ನು ನೋಂದಣಿ ಮಾಡುವುದು ಒಳ್ಳೆಯದು.

ಪವರ್ ಆಫ್ ಅಟಾರ್ನಿ ಬರೆದುಕೊಟ್ಟ ವ್ಯಕ್ತಿಯು ಆ ನಂತರ ಯಾವ ಸಮಯದಲ್ಲಿಯೂ ಅದನ್ನು ತನಗಿಷ್ಟ ಬಂದಾಗ ರದ್ದುಪಡಿಸುವ ಅಧಿಕಾರ ಹೊಂದಿರುತ್ತಾನೆ. ಪವರ್ ಆಫ್ ಅಟಾರ್ನಿ ಹೊಂದಿರುವ ವ್ಯಕ್ತಿಗೆ ಅದನ್ನು ಬರೆದುಕೊಟ್ಟ ವ್ಯಕ್ತಿಯು ಲಿಖಿತವಾಗಿ ರಿಜಿಸ್ಟರ್ಡ್ ಪತ್ರ ಅಥವಾ ನೋಟೀಸು ಕಳುಹಿಸುವ ಮೂಲಕ ರದ್ದು ಪಡಿಸಬಹುದು. ಆದರೆ ಅದಕ್ಕೆ ಸಂಬಂಧಿಸಿದ ಸ್ವತ್ತಿನಲ್ಲಿ ಪವರ್ ಆಫ್ ಅಟಾರ್ನಿ ಹೊಂದಿರುವ ವ್ಯಕ್ತಿ ಯಾವುದೇ ಹಿತಾಸಕ್ತಿ ಹೊಂದಿರುವ ಪಕ್ಷದಲ್ಲಿ ಅಥವಾ ಪವರ್ ಆಫ್ ಅಟಾರ್ನಿಯನ್ನು ಸೂಕ್ತ ಪ್ರತಿಫಲಕ್ಕಾಗಿ ಇಲ್ಲವೇ ಭದ್ರತೆಯ ಭಾಗವಾಗಿ (ಪಾರ್ಟ್ ಆಫ್ ಸೆಕ್ಯೂರಿಟಿ) ಗೋಸ್ಕರ ಬರೆದು ಕೊಟ್ಟಿದ್ದರೆ ಅಂತಹ ಪವರ್ ಆಫ್ ಅಟಾರ್ನಿಯನ್ನು ಕಾನೂನಿನನ್ವಯ ರದ್ದುಗೊಳಿಸುವಂತಿಲ್ಲ.

ವಿದೇಶದಲ್ಲಿ ಇರುವ ಭಾರತೀಯ ಪ್ರಜೆ ಪವರ್ ಆಫ್ ಅಟಾರ್ನಿಯನ್ನು ಬರೆದುಕೊಟ್ಟಾಗ ಆ ದೇಶದಲ್ಲಿರುವ ಭಾರತದ ರಾಯಭಾರಿ ಅಥವಾ ಉಪ ರಾಯಭಾರಿ ಇಲ್ಲವೇ ಕೇಂದ್ರ ಸರ್ಕಾರದ ಪ್ರತಿನಿಧಿಯು ಪವರ್ ಆಫ್ ಅಟಾರ್ನಿಯನ್ನು ದೃಢೀಕರಿಸಬೇಕಾಗುತ್ತದೆ ಮತ್ತು ಅದನ್ನು ಪಡಕೊಂಡ ವ್ಯಕ್ತಿ 3 ತಿಂಗಳ ಒಳಗಾಗಿ ಸಂಬಂಧಪಟ್ಟ ವ್ಯಾಪ್ತಿಯ ಜಿಲ್ಲಾ ನೋಂದಣಾಧಿಕಾರಿಯವರ ಕಛೇರಿಗೆ ಹಾಜರುಪಡಿಸಿ ನಿರ್ದಿಷ್ಟವಾದ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿ ಸೂಕ್ತ ಹಿಂಬರಹವನ್ನು ಪಡೆಯಬೇಕಾಗುತ್ತದೆ.

ಯಾವುದೇ ಒಂದು ಆಸ್ತಿಯನ್ನು ಅದಕ್ಕೆ ಸಂಬಂಧಪಟ್ಟ ನೋಂದಾಯಿತ ಮಾಲಿಕನ ಪವರ್ ಆಫ್ ಅಟಾರ್ನಿ ಹೋಲ್ಡರ್ ಮುಖಾಂತರ ಖರೀದಿ ಮಾಡುವ ಸಂದರ್ಭದಲ್ಲಿ ಖರೀದಿದಾರ ಬಹಳ ಮುಂಜಾಗ್ರತೆ ವಹಿಸಬೇಕು ಮತ್ತು ವ್ಯವಹಾರಕ್ಕೆ ಸಂಬಂಧಪಟ್ಟ ಪವರ್ ಆಫ್ ಅಟಾರ್ನಿ ಊರ್ಜಿತದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ಉದ್ದೇಶದಿಂದ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಅಂತಹ ವ್ಯವಹಾರಕ್ಕೆ ಸಂಬಂಧಪಟ್ಟ ಆಸ್ತಿಯ ನೋಂದಾಯಿತ ಮಾಲಿಕನಿಗೆ ಲಿಖಿತವಾಗಿ ಪತ್ರ ಅಥವಾ ನೋಟೀಸು ಮೂಲಕ ಖರೀದಿಯ ಪ್ರಸ್ತಾವವನ್ನು ತಿಳಿಸಿ ಅಥವಾ ಸಾರ್ವಜನಿಕ ಪ್ರಕಟಣೆ ನೀಡಿ ಆಸ್ತಿ ಖರೀದಿ ಮಾಡುವುದು ಒಳ್ಳೆಯದು. ಕಾರಣ ಪವರ್ ಆಫ್ ಅಟಾರ್ನಿಯಲ್ಲಿ ತಿಳಿಸಿರುವ ಉದ್ದೇಶ ನೆರವೇರಿದ ಸಂದರ್ಭದಲ್ಲಿ ಅಥವಾ ಕಾನೂನಿನ ಬದಲಾವಣೆಯಿಂದ ಅಥವಾ ಅದನ್ನು ಬರೆದುಕೊಟ್ಟ ವ್ಯಕ್ತಿ ಮೃತಪಟ್ಟಾಗ ಅಥವಾ ಆತನು ತನ್ನ ಸ್ವಾಸ್ಥಚಿತ್ತವನ್ನು ಕಳಕೊಂಡಾಗ ಅಥವಾ ಪವರ್ ಆಫ್ ಅಟಾರ್ನಿಯನ್ನು ಬರೆದುಕೊಟ್ಟ ವ್ಯಕ್ತಿ ದಿವಾಳಿಯಾದರೆ ಅಥವಾ ಅದರಲ್ಲಿ ನಿಗದಿಗೊಳಿಸಿರುವ ಅವಧಿ ಮುಗಿದಾಗ ಇಲ್ಲವೇ ಪವರ್ ಆಫ್ ಅಟಾರ್ನಿ ನೀಡಿದ ವ್ಯಕ್ತಿ ಅದನ್ನು ರದ್ದುಪಡಿಸಿದಾಗ, ಪವರ್ ಆಫ್ ಅಟಾರ್ನಿಯ ಆಧಾರದಲ್ಲಿ ನಡೆಸುವ ಯಾವುದೇ ವ್ಯವಹಾರವು ಕಾನೂನುಬದ್ಧವಾಗಿರುವುದಿಲ್ಲ ಮತ್ತು ಅಂತಹ ವ್ಯವಹಾರಗಳು ಕಾನೂನಿನನ್ವಯ ಅಸಿಂಧು ಆಗುತ್ತದೆ, ಮತ್ತು ಈ ಸಂಧರ್ಬದಲ್ಲಿ ಉಂಟಾಗಬಹುದಾದ ನಷ್ಠಕ್ಕೆ ಅಥವಾ ತೊಂದರೆಗೆ ಆಸ್ತಿಯ ಮಾಲಿಕನು ಜವಾಬ್ದಾರನಾಗುವುದಿಲ್ಲ.

You may also like

News

ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದು
News

ಪೆರುವಾಜೆ : ಜನವರಿ 16ರಿಂದ‌ 21ರ ತನಕ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಪೆರುವಾಜೆ :  ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ  ಬ್ರಹ್ಮರಥೋತ್ಸವವು ಜನವರಿ 16ರಿಂದ‌ 21ರ ತನಕ  ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ

You cannot copy content of this page