ಒಬ್ಬ ವ್ಯಕ್ತಿ ಗ್ರಾಮ ಪಂಚಾಯತ್ ಸದಸ್ಯನಾದರೂ ಸಾಕು ಅಹಂ ಬರುತ್ತೆ, ಹತ್ತು ವರ್ಷ ಪ್ರಧಾನಿ ಆದರೂ ಡಾ. ಮನಮೋಹನ್ ಸಿಂಗ್ ಬಳಿ ಅಹಂ ಸುಳಿಯಲಿಲ್ಲ – ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ
ಒಬ್ಬ ವ್ಯಕ್ತಿ ಗ್ರಾಮ ಪಂಚಾಯತ್ ಸದಸ್ಯ ಅಥವಾ ಅಧ್ಯಕ್ಷನಾದರೂ ಸಾಕು, ಆತನಿಗೆ ತನ್ನಿಂದ ತಾನಾಗಿಯೇ ಅಹಂ ಬಂದು ಬಿಡುತ್ತದೆ. ಅದೆಲ್ಲವನ್ನೂ ಮೀರಿ ನಿಂತವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಇವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, 10 ವರ್ಷ ಡಾ. ಮನಮೋಹನ್ ಸಿಂಗ್ ನಮ್ಮ ದೇಶದ ಪ್ರಧಾನಿಯಾಗಿದ್ದರೂ ಕೂಡ, ಅಹಂ ಅವರ ಬಳಿ ಸುಳಿಯಲಿಲ್ಲ. ನಯ ವಿನಯತೆ ಅವರಲ್ಲಿ ಎದ್ದು ಕಾಣುತ್ತಿತ್ತು. ಈಗ ಯಾವುದೇ ಪಕ್ಷದವರಾಗಿರಲೀ ಒಬ್ಬ ವ್ಯಕ್ತಿ ಗ್ರಾಮ ಪಂಚಾಯತಿ ಸದಸ್ಯನಾದರೆ ಸಾಕು ಅವನ ಅಹಂ ನೋಡುವುದಕ್ಕೆ ಸಾಧ್ಯವಿಲ್ಲ. ಅದೆಲ್ಲವನ್ನೂ ಮೀರಿ ನಿಂತವರು ಡಾ. ಮನಮೋಹನ್ ಸಿಂಗ್. ಇವರು ಎಂದೂ ಕೆಟ್ಟ ರಾಜಕಾರಣ ಮಾಡಿದವರಲ್ಲ. ಎಲ್ಲರ ಜೊತೆ ಬಹಳ ಸೌಜನ್ಯ ಮತ್ತು ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಅವರ ಬಗ್ಗೆ ಹೇಳಲು ನನಗೆ ಹೆಮ್ಮೆ ಆಗುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳು ಹೇಳಿದ ಮಾತುಗಳಿಗೆ ಮಾಣಿ ಗ್ರಾಮ ಪಂಚಾಯತ್ ಸದಸ್ಯನೇ ಸಾಕ್ಷಿ
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಡಿ.ವಿ. ಸದಾನಂದ ಗೌಡರು ಈ ಸಮಯದಲ್ಲಿ ಹೇಳಿದ ಮಾತುಗಳು ಅಕ್ಷರಶಃ ಸತ್ಯ ಎನ್ನುವುದಕ್ಕೆ ಪ್ರಸ್ತುತ ಮಾಣಿ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್ ನ ಸದಸ್ಯನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ.
ತಾನು ಸಾರ್ವಜನಿಕ ವಲಯದಲ್ಲಿ ಹೆಸರುಗಳಿಸಬೇಕು ಎಂಬ ಉದ್ದೇಶದಿಂದ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನವರು ನೂತನವಾಗಿ ನಿರ್ಮಿಸಿರುವ ಚರ್ಚ್ ನ ಭವ್ಯ ಪ್ರವೇಶದ್ವಾರದ ಎದುರುಗಡೆ ಇರುವ ಸುಂದರವಾದ ಕಾಂಕ್ರೀಟ್ ರಸ್ತೆಯನ್ನು ಅದು ಅವೈಜ್ಞಾನಿಕವಾಗಿದೆ ಎಂದು ಹೇಳಿ ರಸ್ತೆಯನ್ನು ಒಡೆಯಲು ಹೊರಟ ಈತನ ಕುತಂತ್ರವನ್ನು ಅರಿತ ಚರ್ಚ್ ಆಡಳಿತ ಮಂಡಳಿಯವರು ಪೊಲೀಸ್ ಠಾಣೆಗೆ ದೂರು ಹಾಗೂ ನ್ಯಾಯಾಲಯದ ಮುಖಾಂತರ ಈತನಿಗೆ ನೋಟೀಸು ನೀಡಿದಾಗ ನಖ-ಶಿಖಾಂತ ನಡುಗಿ ಬೆಚ್ಚಿಬಿದ್ದ ಈತ, ತನ್ನ ಪ್ರತಿಷ್ಠೆ ಮಣ್ಣುಪಾಲಾಗುವುದೆಂದು ತಿಳಿದು ಚರ್ಚ್ ನ ಕಾಂಕ್ರೀಟ್ ರಸ್ತೆಯನ್ನು ಮುಟ್ಟದೆ ಅದರ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಭಾಗದಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗುವುದಕ್ಕಾಗಿ ಚರಂಡಿಯನ್ನು ಮಾತ್ರ ಪಂಚಾಯಿತಿಯ ಅನುದಾನಿತ ಕಾಮಗಾರಿಯಿಂದ ಮಾಡಿಸಿ, ಚರಂಡಿಯನ್ನು ವೈಜ್ಞಾನಿಕ ಎಂದು ಬಿಂಬಿಸಿ, ಅಲ್ಲಿ ಯೇ ತನ್ನ ಭಾವಚಿತ್ರವಿರುವ ಬ್ಯಾನರ್ ಒಂದನ್ನು ಹಾಕಿ ಅದರಲ್ಲಿ ಹೃದಯ ಪೂರ್ವಕ ಧನ್ಯವಾದಗಳು,.. ಸಮಸ್ತ ಕ್ರೈಸ್ತ ಬಾಂಧವರು, ಸಂತ ಜೋಸೆಫರ ದೇವಾಲಯ ಬರಿಮಾರು ಎಂದು ಭಕ್ತಾದಿಗಳ ಹೆಸರಲ್ಲಿ ತಾನೇ ವಿದ್ಯುತ್ ಕಂಬಕ್ಕೆ ನೇತಾಡಿಸಿ, ‘ಅಡಿಗೆ ಬಿದ್ದರೂ ಮೂಗುಮೇಲೆ’ ಎಂಬ ಗಾದೆಯ ಮಾತಿನಂತೆ ಅಹಂಕಾರದಿಂದ ವರ್ತಿಸುತ್ತಿದ್ದಾನೆ ಎಂಬ ವರದಿ ಸಾರ್ವಜನಿಕ ವಲಯಗಳಿಂದ ಕೇಳಿಬರುತ್ತಿದೆ.
ಬರಿಮಾರು ಗ್ರಾಮದಲ್ಲಿ ಮಂಗಳೂರು ಧರ್ಮಕ್ಷೇತ್ರಕ್ಕೆ ಸೇರಿದ ಯಾವುದೇ ಚರ್ಚ್ ಗಳಿಲ್ಲ. ನೂತನವಾಗಿ ನ್ಯೂ ಲೈಫ್ ತಂಡದ ಚರ್ಚ್ ವೊಂದನ್ನು ಪ್ರಾರಂಭಿಸುವ ಮೊದಲೇ ‘ಸಂತ ಜೋಸೆಫರ ದೇವಾಲಯ ಬರಿಮಾರು ಚರ್ಚ್’ ಎಂಬ ಹೆಸರನ್ನು ನೀಡಿ ಅಲ್ಲಿಯ ಭಕ್ತಾಧಿಗಳ ಹೆಸರಲ್ಲಿ ಬ್ಯಾನರ್ ಒಂದನ್ನು ನೇತಾಡಿಸಿದ್ದಾನೆ.
ಈತನ ಈ ತರದ ಮೊಂಡಾಟದ ಕುಕೃತ್ಯಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿರುವ ಅದೇ ಮಾಣಿ ಗ್ರಾಮ ಪಂಚಾಯತ್ ನ ಇನ್ನೋರ್ವ ಸದಸ್ಯ ತನ್ನ ತಂದೆಯವರು ಮರಣಹೊಂದಿದ್ದರೂ… ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಬಂಟ್ಟಾಳದ ನೋಟರಿ ವಕೀಲರೊಬ್ಬರಿಗೆ ಸುಳ್ಳು ಮಾಹಿತಿ ನೀಡಿ, ಸರಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿ ಡೂಪ್ಲಿಕೇಟ್ ಪವರ್ ಆಫ್ ಅಟಾರ್ನಿ ಮಾಡಿಸಿ ತಂದೆಯ ಹೆಸರಲ್ಲಿದ್ದ ಜಮೀನನ್ನು ಮಾರಿ, ತಾನೊಬ್ಬ ಅತೀ ಬುದ್ದಿವಂತ ಎಂದು ತೋರಿಸಿ ತಿರುಗಾಡುತ್ತಿರುವುದನ್ನು ನೋಡಿ ಇವರೆಲ್ಲರ ಕರ್ಮಕಾಂಡ, ಭ್ರಷ್ಟಾಚಾರಗಳೆಲ್ಲವನ್ನೂ ಪತ್ರಿಕೆಯ ಮೂಲಕ ಬಯಲಿಗೆಳೆದು ಜನರಿಗೆ ತಿಳಿಸುವಂತೆ ಕರಾವಳಿ ಸುದ್ದಿ ಪತ್ರಿಕೆಯ ಕಛೇರಿಗೆ ಹಲವಾರು ಲಿಖಿತ ದೂರುಗಳು ಬಂದಿರುತ್ತದೆ.
ಯಾವಾಗಲೂ ನಿರ್ಭೀತಿಯಿಂದ ವಸ್ತುನಿಷ್ಟವರದಿಗಳನ್ನು ಪ್ರಕಟಿಸಿ ಜನಜಾಗೃತಿ ಮೂಡಿಸುವ ನಮ್ಮ ಪತ್ರಿಕೆ ಈ ನಯವಂಚಕರ ದಾಖಲೆಗಳನ್ನು ಅದರ ಸತ್ಯಾ ಸತ್ಯತೆಗಳನ್ನು ಪರಾಂಬರಿಸಿ ಮುಂದಿನ ಸಂಚಿಕೆಗಳಲ್ಲಿ ಇವರ ಕರ್ಮ ಕಾಂಡಗಳೆಲ್ಲವೂ ಒಂದೊಂದಾಗಿ ಪ್ರಕಟಗೊಳ್ಳಲಿವೆ.
ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದ ಘನತೆ ಉಳಿಸಿಕೊಂಡಿದ್ದರು. ಅವರ ವಿರುದ್ಧ ತಿರುಗಿ ಬಿದ್ದರೂ ವಿಚಲಿತರಾಗದೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಅವರು ದೇಶದ ಉತ್ಕೃಷ್ಟ ರಾಜಕಾರಣಿ. ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದು ಡಿ.ವಿ.ಎಸ್. ಇವರು ಹೇಳಿದ್ದಾರೆ.