ಬೆಳ್ತಂಗಡಿಯ ಕಾಯಕಯೋಗಿ ಹೈನುಗಾರ ರೊನಾಲ್ಡ್ ಸಿಕ್ವೇರಾ
ಹೈನುಗಾರಿಕೆ ಇತ್ತೀಚೆಗೆ ಲಾಭದಾಯಕ ವ್ಯವಹಾರವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಡೈರಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೈನುಗಾರಿಕೆಯ ಮುಖ್ಯ ಪ್ರಯೋಜನವೆಂದರೆ ಇದು ಇತರ ರೀತಿಯ ಕೃಷಿಗಿಂತ ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಸಾಧ್ಯವಿರುತ್ತದೆ. ಕೆಲವು ರೈತರು ಕೇವಲ ಒಳವ್ಯವಹಾರವನ್ನು ಮಾತ್ರ ಅಪೇಕ್ಷೆ ಪಡುತ್ತಾರೆ. ಆದರೆ ಇಲ್ಲೊಬ್ಬ ಹೈನುಗಾರ ರೈತ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅನುಭವದಿಂದ ತನ್ನ ಹಿರಿಯರು ಮಾಡಿಕೊಂಡು ಬಂದಂತಹ ಸಣ್ಣ ಪ್ರಮಾಣದ ಹೈನುಗಾರಿಕೆಯನ್ನು ಇದೀಗ ತನ್ನ ನಿರಂತರ ಪರಿಶ್ರಮದಿಂದ ಹೆಮ್ಮರವಾಗಿ ಬೆಳೆಸಿ ಹೈನುಗಾರರಿಗೆ ಮಾದರಿಯಾಗಿದ್ದಾರೆ.
ಇವರು ತನ್ನ ಮನೆಯಲ್ಲೇ ಪಾರಂಪರಿಕವಾಗಿ ಸಾಕಿ ಬೆಳೆಸಿದ ಉತ್ತಮ ಗುಣಮಟ್ಟದ ದೇಶೀ ಹಸುಗಳಿಂದ ಸಂಗ್ರಹಿಸಿದ ಹಾಲನ್ನು ಮೌಲ್ಯವರ್ಧಿತಗೊಳಿಸಿ ಉನ್ನತ ಗುಣಮಟ್ಟದೊಂದಿಗೆ ನೇರ ಗ್ರಾಹಕರಿಗೆ ಮತ್ತು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಆರಂಭಿಸಿದ ಸಂಸ್ಥೆ ಬೃಹತ್ ಸಿಕ್ವೇರಾ ಡೈರಿ ಫಾರ್ಮ್. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕಾಯಕ ಯೋಗಿಯೇ ರೊನಾಲ್ಡ್ ಸಿಕ್ವೇರಾ. ಜನರು ಇವರನ್ನು ಪ್ರೀತಿಯಿಂದ ರೋನಿ ಎಂದು ಸಲುಗೆಯಿಂದ ಕರೆಯುತ್ತಾರೆ. ಇವರು ಪ್ರಗತಿಪರ ಕೃಷಿಕ ಜಾನ್ ಸಿಕ್ವೇರಾ ಮತ್ತು ಬೆನೆಡಿಕ್ಟ ಸಿಕ್ವೇರಾ ಇವರ ಮಗ. ಬಾಲ್ಯದಿಂದಲೇ ತನ್ನ ಅಪ್ಪ ಅಮ್ಮನ ಜೊತೆ ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದರಿಂದ. ತಂದೆಯ ಮರಣಾನಂತರ ಎಲ್ಲಾ ಕೆಲಸಗಳನ್ನು ತಾವೇ ಮುಂದುವರಿಸಬೇಕಾಯಿತು.
ಆದರೆ ಯಾವುದೇ ಕಾರಣಕ್ಕೂ ದೃತಿಗೆಡದ ರೊನಾಲ್ಡ್ ಸಿಕ್ವೇರಾ ತನ್ನ ಪದವಿಯನ್ನು ಮುಗಿಸಿ ಸಂಪೂರ್ಣ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರು. ತನ್ನ ಕುಟುಂಬದ ನೊಗ ಹೊತ್ತ ರೋನಿ ತನ್ನ ಹಿರಿಯರು ಕಲಿಸಿದ ಹೈನುಗಾರಿಕೆಯನ್ನು ತ್ರಿವಿಕ್ರಮನಂತೆ ಇನ್ನೂ ಉತ್ತಮ ಮತ್ತು ಉನ್ನತ ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಸುವ ಸಂಕಲ್ಪ ಮಾಡಿದರು. ಅವರ ನಿರಂತರವಾದ ಪರಿಶ್ರಮದಿಂದ ಇಂದು ಸಿಕ್ವೇರಾ ಡೈರಿ ಫಾರ್ಮ್ ಎಂಬ ನಾಮಧೇಯದೊಂದಿಗೆ ವ್ಯವಹಾರವನ್ನು ಆರಂಭಿಸಿ ತನ್ನ ನೂತನ ಬ್ರಾಂಡ್ ನೇಮ್ ಗೋಮಿತ್ರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಾಲೂಕಿನಾದ್ಯಂತ ಪರಿಚಯಿಸಿದ್ದಾರೆ. ಇವರ ಗೋಮಿತ್ರ ಉತ್ಪನ್ನಗಳಲ್ಲಿ ಪಾಶ್ಚೀಕರಿಸಿದ ಹಾಲು, ದೇಶೀದನದ ಶುದ್ಧ ಹಾಲು, ಮೊಸರು, ಮಜ್ಜಿಗೆ, ಮಸಾಲ ಮಜ್ಜಿಗೆ, ದನದ ತುಪ್ಪ ಮತ್ತು ಪನ್ನೀರ್ ನ್ಯಾಯಬೆಲೆಯಲ್ಲಿ ದೊರೆಯುತ್ತದೆ.
ರೊನಾಲ್ಡ್ ಸಿಕ್ವೇರಾರವರು ಮೂಲತಃ ಬೆಳ್ತಂಗಡಿ ತಾಲೂಕಿನ ಮದ್ದಡ್ಕದವರು. ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಇವರು ಮುಂಬೈ ಹಾಗೂ ಚೆನ್ನೈಯಲ್ಲಿನ ಪ್ರಖ್ಯಾತ PATNI ಎಂಬ ಐಟಿ ಕಂಪೆನಿಯಲ್ಲಿ ಎಲೆಕ್ಟ್ರಿಕಲ್ ಹಾಗೂ ಡಾಟಾ ನೆಟ್ ವರ್ಕ್ ಗೆ ಸಂಬಂಧಿಸಿದ ಮೆಂಟೇನೆನ್ಸ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಮದ್ದಡ್ಕದಲ್ಲಿ ಪಿತ್ರಾರ್ಜಿತ ಕೃಷಿ ಭೂಮಿಯಲ್ಲಿ ಹೈನುಗಾರಿಕಾ ಉದ್ಯಮವನ್ನು ಕೃಷಿ ಚಟುವಟಿಕೆಯೊಂದಿಗೆ ನಿರ್ವಹಿಸಿಕೊಂಡು ಬಂದಿರುವ ಇವರು ಪ್ರಗತಿಪರ ಕೃಷಿಕರಾಗಿರುತ್ತಾರೆ ಹಾಗೂ ಹೈನೋದ್ಯಮದಲ್ಲಿ ಪರಿಣತಿ ಪಡೆದ ಸಾಧಕರೆನಿಸಿಕೊಂಡಿರುತ್ತಾರೆ.
46 ವರ್ಷ ಪ್ರಾಯದ ರೊನಾಲ್ಡ್ ಸಿಕ್ವೇರಾ ಇವರು ಯುವಕರಿಗೆ ಸದಾ ಆದರ್ಶರಾಗಿರುವ ಜೊತೆಗೆ ಸಾಮಾಜಿಕ ಸೇವೆಯಲ್ಲಿಯೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಕೌಶಲ್ಯ ಇವರದ್ದಾಗಿದೆ. ಕಥೋಲಿಕ್ ಸಭಾ, ಮಡಂತ್ಯಾರು ಘಟಕದ ಸಕ್ರಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ನಡೆಸಿದ ತಾಲೂಕು ಮಟ್ಟದ ಕೃಷಿ ಮೇಳದ ಸಂಘಟಕರಾಗಿ, ಸೇಕ್ರೆಟ್ ಹಾರ್ಟ್ ಚರ್ಚ್ ನ ಪಾಲನಾ ಮಂಡಳಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಚರ್ಚ್ ನ ಆರ್ಥಿಕ ಸಮಿತಿಯ ಸದಸ್ಯರಾಗಿ, ವಾರ್ಡ್ ನ ಗುರಿಕಾರರಾಗಿ ಜನಸೇವೆ ನೀಡಿರುತ್ತಾರೆ. ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೊ -ಆಪರೇಟಿವ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿ 7 ವರ್ಷಗಳಿಂದ ಇದರ ನಿರ್ದೇಶಕರಾಗಿ, ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಸದಾ ಜನರೊಂದಿಗೆ ಬೆರೆತು ನಗುಮುಖದ ಸೇವೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾ ಸರ್ವರಲ್ಲಿಯೂ ಪ್ರೀತಿ, ವಿಶ್ವಾಸದಿಂದ ಜೊತೆಗೂಡಿ ಸೇವೆ ಮಾಡುವ ಉದಾತ್ತ ಗುಣ ಇವರಲ್ಲಿದೆ. ಇಂದಿನ ಯುವ ಜನಾಂಗ ಹಳ್ಳಿ ಬಿಟ್ಟು ಪಟ್ಟಣಗಳಲ್ಲಿ ವಾಸಿಸುವ ಸಂದರ್ಭದಲ್ಲೂ ಕೂಡ ತನ್ನ ಪಾರಂಪರಿಕ ಕೃಷಿ ಮತ್ತು ಹೈನುಗಾರಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ರೊನಾಲ್ಡ್ ಸಿಕ್ವೇರಾ ಪತ್ನಿ ಲೀನಾ ಲೋಬೊ, ಮಕ್ಕಳು ರಾಲೆನ್ ಸಿಕ್ವೇರಾ, ರೋಲ್ಡೆನ್ ಸಿಕ್ವೇರಾ ಮತ್ತು ಅಮ್ಮ ಬೆನೆಡಿಕ್ಟ ಸಿಕ್ವೇರಾ ಇವರೊಂದಿಗೆ ಹಳ್ಳಿಯಲ್ಲಿ ಜೀವನ ನಡೆಸುತ್ತಿರುವುದು ಎಲ್ಲರಿಗೂ ಆದರ್ಶವಾಗಿದೆ. ಹೊಸ ವರ್ಷದ ಈ ಸಂದರ್ಭದಲ್ಲಿ ಸಿಕ್ವೇರಾ ಡೈರಿ ಫಾರ್ಮ್ ಗ್ರಾಮೀಣ ಹೈನುಗಾರಿಕೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.