ಕವಿಗಳು ದೇಶದ ಕಾವಲುಗಾರರು – ಹೆಚ್. ಭೀಮರಾವ್ ವಾಷ್ಠರ್ ಸುಳ್ಯ
ಪುತ್ತೂರು: ಕಣ್ಣಾರೆ ಕಂಡ ವಿಷಯಗಳಿಗೆ ಮತ್ತು ಭಾವನೆಗಳಿಗೆ ಅಕ್ಷರ ರೂಪ ಕೊಡುವ ಮೂಲಕ ಕವಿಗಳು ಕ್ರಾಂತಿಕಾರಿ ಕವನಗಳನ್ನು ರಚಿಸಿ ಸಮಾಜವನ್ನು ಒಳಿತಿನ ಹಾದಿಗೆ ಸೇರಿಸುವ ದೇಶದ ಕಾವಲುಗಾರರು ಎಂದು ಖ್ಯಾತ ಸಾಹಿತಿ ಹೆಚ್. ಭೀಮರಾವ್ ವಾಷ್ಠರ್ ಸುಳ್ಯ ಹೇಳಿದ್ದಾರೆ.
ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಪುತ್ತೂರು ಸುದಾನ ಮೈದಾನದಲ್ಲಿ ನಡೆದ “ಮಾದಕತೆ ಮಾರಣಾಂತಿಕ” ಪುಸ್ತಕ ಬಿಡುಗಡೆ ಅಂಗವಾಗಿ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಾಹಿತ್ಯಕ್ಕೆ ಜನರ ಮನಸ್ಸನ್ನು ಒಗ್ಗೂಡಿಸುವ ಅಭೂತಪೂರ್ವ ಶಕ್ತಿಯಿದೆ. ಸಾಹಿತ್ಯವು ನಿರಂತರ ಹರಿಯುವ ತೊರೆಯಾಗಿದ್ದು ಇಡೀ ಜಗತ್ತು ಈ ಶುದ್ಧ ತೊರೆಯನ್ನು ಪರಿವರ್ತನೆಗಾಗಿ ಬಳಸಿ ಅಮೂಲಾಗ್ರ ಬದಲಾವಣೆ ತರಬಹುದು ಎಂದು ಅವರು ಹೇಳಿದರು.
ಕವಿಗೋಷ್ಠಿ ಸಮಾರಂಭವನ್ನು ಹವ್ಯಾಸಿ ಪತ್ರಕರ್ತ ಕೆ.ಎ. ಅಬ್ದುಲ್ ಅಝೀಝ್ ಪುಣಚ ಉದ್ಘಾಟಿಸಿದರು. ಕೃತಿಯ ಕರ್ತೃ, ನೂರೇ ಅಜ್ಮೀರ್ ಕಾರ್ಯಕ್ರಮದ ಆಯೋಜಕ, ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಇಖ್ಬಾಲ್ ಬಾಳಿಲ, ಪುತ್ತೂರು ಪೋಲಿಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕವಿಗಳಾದ ಹೃದಯ ಕವಿ ಮನ್ಸೂರ್ ಮೂಲ್ಕಿ, ನಾರಾಯಣ ರೈ ಕುಕ್ಕುವಳ್ಳಿ, ಎ. ಅಬೂಬಕರ್ ಅನಿಲಕಟ್ಟೆ, ವಿಟ್ಲ, ಡಾ| ಸುರೇಶ ನೆಗಳಗುಳಿ, ಎಂ.ಪಿ. ಬಶೀರ್ ಅಹ್ಮದ್, ಅಶ್ರಫ್ ಅಪೋಲೋ, ನಾರಾಯಣ ಕುಂಬ್ರ, ಅಬ್ದುಲ್ ಸಮದ್ ಬಾವ ಪುತ್ತೂರು, ಸಲೀಂ ಮಾಣಿ, ಎನ್.ಎಂ. ಹನೀಫ್ ನಂದರಬೆಟ್ಟು, ಝುನೈಫ್ ಕೋಲ್ಪೆ ಶಂಶೀರ್ ಬುಡೋಳಿ, ಎಂ.ಎ. ಮುಸ್ತಫಾ ಬೆಳ್ಳಾರೆ ಮೊದಲಾದವರು ಕವನ ವಾಚನ ಮಾಡಿದರು. ಬಹುಭಾಷಾ ಕವಿಗೋಷ್ಠಿಯಲ್ಲಿ ವಿವಿಧ ಭಾಷೆಗಳ ಕವನಗಳು ಜನರ ಮನಸೂರೆಗೊಂಡವು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ. ಅಬೂಬಕರ್ ಅನಿಲಕಟ್ಟೆ ಸ್ವಾಗತ ಭಾಷಣ ಮಾಡಿದರು. ಪತ್ರಕರ್ತ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ. ಇಖ್ಬಾಲ್ ಬಾಳಿಲ ಕೃತಜ್ಞತೆ ಸಲ್ಲಿಸಿದರು.