ಉಡುಪಿ – ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ಹೋರಾಟದಲ್ಲಿ ಆಶಾದಾಯಕ ಬೆಳವಣಿಗೆ – ರೈತರ ಪರ ಸದನದಲ್ಲಿ ಧ್ವನಿ ಎತ್ತಿದ್ದ ಮಂಜುನಾಥ ಭಂಡಾರಿ
ರೈತರ ತೀವ್ರ ವಿರೋಧದ ನಡುವೆಯೂ ಉಡುಪಿ – ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ರಚನೆಯ ಕಾರ್ಯ ನಡೆಯುತ್ತಿದ್ದು, ಇದೆ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರೊಬ್ಬರು ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಎಂ.ಎಲ್.ಸಿ. ಮಂಜುನಾಥ ಭಂಡಾರಿ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ್ದು. ಜನರಿಗೆ ತೊಂದರೆಯಾಗುವ ಈ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ತಮ್ಮ ಕೃಷಿ ಜಮೀನಿನ ರಕ್ಷಣೆಗಾಗಿ ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗೆ ಎಡತಾಕುತ್ತಿರುವ ರೈತರಿಗೆ ಈ ಬೆಳವಣಿಗೆ ಆನೆ ಬಲ ನೀಡಿದೆ. ಕನಿಷ್ಟ ಒಬ್ಬ ಜನ ಪ್ರತಿನಿಧಿಯಾದರೂ ತಮ್ಮ ಪರ ಮಾತನಾಡಿರುವ ಕುರಿತು ಖುಷಿ ಪಟ್ಟಿಕೊಂಡಿರುವ ಅವರು ಉಭಯ ಜಿಲ್ಲೆಗಳ ಎಲ್ಲ ಜನ ಪ್ರತಿನಿಧಿಗಳು ಈ ಕುರಿತು ಧ್ವನಿ ಎತ್ತಬೇಕು ಎಂಬ ಬೇಡಿಕೆಯನ್ನಿತ್ತಿದ್ದಾರೆ.
ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗ ಅವೈಜ್ಞಾನಿಕವಾಗಿದ್ದು, ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಯೊಸ ಯೋಜನೆ ರೂಪಿಸುವಂತೆ ಹೋರಾಟಗಾರರಿಂದ ಆಗ್ರಹ ಕೇಳಿ ಬರುತ್ತಿದೆ. ಜನರ ವಿರೋಧವನ್ನೂ ಲೆಕ್ಕಿಸದೆ ಟವರ್ ನಿರ್ಮಾಣಕ್ಕೆ ಮುಂದಾದರೆ ಬಿಡುವ ಪ್ರಶ್ನೆಯಿಲ್ಲ. ಅಭಿವೃದ್ಧಿಗಾಗಿ ಪದೇ ಪದೇ ಕೃಷಿಭೂಮಿಯನ್ನು ಹಾಳು ಮಾಡುವುದು ಸರಿಯಲ್ಲ. ಜನರಿಗೆ ತೊಂದರೆಯಾಗುವ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
2021ರಿಂದ ಪ್ರತಿಭಟನೆ
ಬೃಹತ್ ಕಾಮಗಾರಿಗಳನ್ನು ನಡೆಸುವ ಕಂಪನಿಗಳು ಯೋಜನೆಯ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಮೊದಲೇ ಸಂತ್ರಸ್ತರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಕೆಲಸ ಮಾಡಬೇಕಾಗಿದೆ. ಆದರೆ ಯೋಜನೆಯ ಒಪ್ಪಂದವನ್ನು ಗುಟ್ಟಿನಲ್ಲಿ ನಡೆಸಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾಗಗಳನ್ನು ಗುರಿಸುವ ಕಾರ್ಯವನ್ನು ಮಾಡಲಾಗಿದೆ. 2021ರಲ್ಲಿ ಸರ್ವೇ ಹೆಸರಿನಲ್ಲಿ ರೈತರ ಜಮೀನುಗಳಿಗೆ ಜೆಸಿಬಿ ನುಗ್ಗಿಸುವ ಕಾರ್ಯವನ್ನು ಮಾಡಿ ಗೋಪುರ ನಿರ್ಮಾಣಕ್ಕೆ ಮುಂದಾಗಿದ್ದರು. ಆಗಿನಿಂದಲೂ ರೈತರು ಕಾಮಗಾರಿಯನ್ನು ನಿಲ್ಲಿಸುವಂತೆ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.
ಯೋಜನೆಯ ಬಗ್ಗೆ ಜಾಗದ ಮಾಲೀಕರು ಹಾಗೂ ಕಂಪನಿಯ ನಡುವೆ ಒಪ್ಪಂದ ನಡೆದ ಬಳಿಕ ಪರಿಹಾರದ ಮೊತ್ತವನ್ನು ಪಾವತಿಸದ ಬಳಿಕ ಕಾಮಗಾರಿಯನ್ನು ನಡೆಸಬೇಕೆಂಬ ನಿಯಮವಿದ್ದರೂ, ಎಲ್ಲವನ್ನೂ ಗಾಳಿಗೆ ತೋರಿ ದಬ್ಬಾಳಿಕೆಯಲ್ಲಿ ಕಾಮಗಾರಿಗಳನ್ನು ನಡೆಸಲು ಬರುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ. ಜನರಿಂದ ಆಯ್ಕೆಯಾದವರು ಜನರ ಕಷ್ಟವನ್ನು ಕೇಳಿ ಪರಿಹಾರ ಒದಗಿಸುವುದು ಬಿಟ್ಟು ಕಂಪನಿಗಳ ಜತೆಗೆ ಸೇರಿಕೊಂಡು ಜನರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.
ಅಧಿಕಾರಿಗಳಿಗೆ ಮನವಿ!
ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಎಸ್. ಮರಿಯಪ್ಪ ಅವರನ್ನು ಬೇಟಿ ಮಾಡಿ ಕಂಪನಿಯ ಕೆಲಸಕ್ಕೆ ಅನುಮತಿ ನೀಡಬಾರದು ಎಂದು ಮನವಿಯನ್ನು ಸಲ್ಲಿಸಿದರು. ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ಕಾರ್ಕಳ ಕಿಸಾನ್ ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ವಿದ್ಯುತ್ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳು ರೈತರಿಗೆ ಸರಿಯಾದ ಉತ್ತರವನ್ನು ನೀಡದೆ, ಇಬ್ಬಗೆಯ ನೀತಿ ಪಾಲಿಸುತ್ತಿದ್ದಾರೆ. 2021ರಿಂದ ಮಾಹಿತಿ ನೀಡುವುದಾಗಿ ಹೇಳಿಕೊಂಡು ಬರುತ್ತಿರುವ ಅಧಿಕಾರಿಗಳು ಯೋಜನೆಯ ಸಮಗ್ರ ವಿಚಾರ ತಿಳಿದೂ ತಿಳಿಯದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಸಮುದ್ರ ಮಾರ್ಗ ಹಾಗೂ ಹೆದ್ದಾರಿ ಅಥವಾ ರೈಲ್ವೇ ಮಾರ್ಗದ ಪಕ್ಕದಲ್ಲಿ ಈ ವಿದ್ಯುತ್ ಲೈನನ್ನು ಭೂಗತವಾಗಿ ತೆಗೆದುಕೊಂಡು ಹೋಗುವಂತೆ ಆಗ್ರಹಿಸುತ್ತಿದ್ದೇವೆ. ಯೋಜನೆಯಿಂದ ಆಗುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತಕ್ಕೆ ಆಗುತ್ತಿಲ್ಲವಾದರೆ, ಅಧಿಕಾರ ಇದ್ದು ಏನು ಪ್ರಯೋಜನ. ಸಂವಿಧಾನದಲ್ಲಿ ವಿರೋಧದ ನಡುವೆಯೂ ಬಲಾತ್ಕಾರಕ್ಕೆ ಅವಕಾಶಗಳು ಇದೆಯಾ ಎಂಬ ಪ್ರಶ್ನೆ ಮೂಡುತ್ತಿದೆ – ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾಧ್ಯಕ್ಷರು, ರೈತ ಸಂಘ.
ಯೋಜನೆಗೆ ಬೇಕಾದ ಚರ್ಚೆಗಳು ನಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮೋದನೆಯಾಗಿದೆ. ಎಲ್ಲ ಇಲಾಖೆಯ ಅನುಮತಿ ಪಡೆದ ಬಳಿಕ ನಾವು ನೀಡದೇ ಇರುವುದಕ್ಕೂ ಆಗುವುದಿಲ್ಲ. ಸರ್ಕಾರದ ಸೂಚನೆಯಂತೆ ಮರ ಕಡಿಯುವುದಕ್ಕೆ ಅನುಮತಿ ನೀಡುತ್ತೇವೆ. ವಿವಿಧ ಪರಿಶಿಷ್ಕರಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಶೇ.೪೦ರಷ್ಟು ಮಾತ್ರ ಮರ ಕಡಿಯುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಯೋಜನೆ ಒಳ್ಳೆಯದು ಕೆಟ್ಟದು ಗೊತ್ತಿಲ್ಲ ಪಾಲಿಸಿಯನ್ನು ಜಾರಿ ಮಾಡುವುದು ನಮ್ಮ ಕರ್ತವ್ಯವಾಗಿದೆ – ಆ್ಯಂಟನಿ ಎಸ್. ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ.
ವಿದ್ಯುತ್ ಮಾರ್ಗದ ರಚನೆಯಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆಗಳಿರುವುದಿಲ್ಲ. ಕಂದಾಯ ಇಲಾಖೆಯಿಂದ ಯಾವುದೇ ಪಾತ್ರ ಇದರಲ್ಲಿ ಇರುವುದಿಲ್ಲ. ಭೂಮಿಗೆ ಹಾಗೂ ಮರಗಳಿಗೆ ದರ ವಿಧಿಸುವುದು ಮಾತ್ರ ನಮ್ಮ ಜವಾಬ್ದಾರಿಯಾಗಿದೆ. ಕಂಪನಿಯವರು ಎಸ್.ಒ.ಪಿ. ಪಾಲಿಸುತ್ತಿಲ್ಲ ಎಂಬ ಬಗ್ಗೆ ವಿಚಾರಣೆಯನ್ನು ನಡೆಸುತ್ತೇವೆ. ಕಂಪನಿಗೆ ಖಾರವಾಗಿ ಹೇಳುತ್ತಿದ್ದು, ಪ್ರಗತಿ ಸಭೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿತ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಜಿಲ್ಲಾಡಳಿತಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಸೂಚನೆಗಳನ್ನು ನೀಡುತ್ತಿದ್ದಾರೆ – ಮುಲೈ ಮುಗಿಲನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು