ಜನವರಿ 8ರಿಂದ 20 ರವರಗೆ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ
ಬೆಳ್ತಂಗಡಿ : ಅಳದಂಗಡಿ ಸೋಮನಾಥೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವವು ಜನವರಿ 8ರಿಂದ 20 ರವರೆಗೆ ಸೀಮೆಯ ತಂತ್ರಿಗಳಾದ ನಡ್ವತಾಡಿ ಬ್ರಹ್ಮಶ್ರೀ ವೇ. ಮೂ. ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಆಗಿರುವ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮತ್ತು ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ದೇವಳದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ 18 ವರ್ಷಗಳ ಬಳಿಕ ಮತ್ತೆ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಅದರಂತೆ, ಕ್ಷೇತ್ರದಲ್ಲಿ ಅನೇಕ ಜೀರ್ಣೋದ್ಧಾರ ಕಾರ್ಯಗಳನ್ನು ಕೈಕೊಳ್ಳುವ ಕುರಿತು ಚಿಂತಿಸಲಾಗಿದೆ. ದೇವಳದ ಪ್ರಾಂಗಣ, ಒಳಾಂಗಣದ ನವೀಕರಣ, ಸುತ್ತ ಪ್ರಾಂಗಣದಲ್ಲಿ ಇಂಟರ್ ಲಾಕ್ ಅಳವಡಿಕೆ, ಪಾಕಶಾಲೆ ನಿರ್ಮಾಣ ಹಾಗೂ ಋತ್ವಿಜರ ಭೋಜನ ಶಾಲೆ, ರಜತ ಪಲ್ಲಕ್ಕಿ ಸಮರ್ಪಣೆ, ಬ್ರಹ್ಮಕಲಶೋತ್ಸವ ಸೇರಿದಂತೆ ಸುಮಾರು 1.50 ಕೋಟಿ ವೆಚ್ಚದಲ್ಲಿ ಸೀಮೆಯ ಭಕ್ತರ ಸಹಕಾರದಿಂದ ಈ ಧರ್ಮಕಾರ್ಯ ನಡೆಯಲಿದೆ.
ಬ್ರಹ್ಮಕಲಶೋತ್ಸವ ಮತ್ತು ಉಪ ಸಮಿತಿ ರಚಿಸಲಾಗಿದ್ದು 32 ಗ್ರಾಮಗಳಿಗೆ ಆಮಂತ್ರಣ ಬಟಾವಾಡೆ ಕಾರ್ಯ ನಡೆಯುತ್ತಿದೆ. ಈ ಬಾರಿ ಬ್ರಹ್ಮಕಲಶೋತ್ಸವದಲ್ಲಿ ದೇವತಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜನವರಿ 2ರಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಚಪ್ಪರ ಮುಹೂರ್ತ ನೆರವೇರಿಸಿದರು.
ಜನವರಿ 8ರಂದು ಅಳದಂಗಡಿ ಬಸ್ ನಿಲ್ದಾಣದಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಇದನ್ನು ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಕುಣಿತ ಭಜನಾ ತಂಡಗಳ ಕುಣಿತ ಭಜನೆ ಮೆರವಣಿಗೆಗೆ ಮೆರುಗು ತುಂಬಲಿದೆ.
ಉಗ್ರಾಣ ಮುಹೂರ್ತವನ್ನು ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಜನವರಿ 9ರಂದು ರಾತ್ರಿ ಕಲ್ಲಡ್ಕ ವಿಠಲ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ. ಜನವರಿ 10ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಜನವರಿ 12ರಂದು ಬ್ರಹ್ಮ ಕುಂಭಾಭಿಷೇಕ ಜರಗಲಿದೆ. ರಾತ್ರಿ ಕಟೀಲು ಮೇಳದ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ. ಬಳಿಕ ಜನವರಿ 14ರಿಂದ 20 ರವರೆಗೆ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.