ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯಲ್ಲಿ ಭರವಸೆಯ ಯಾತ್ರಿಕರ ಪಯಣ
ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಇಂದು ಜನವರಿ 5ರಂದು ಭಾನುವಾರ ನಗರದ ಮಿಲಾಗ್ರಿಸ್ ಚರ್ಚ್ ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ ವರೆಗೆ ಸಾಗಿತು. ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಸಾಕ್ಷಿಯಾದರು.
ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್ ನಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಸಾಮೂಹಿಕವಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು ‘ಎಪಿಫನಿ’, ‘ಥಿಯೋಫನಿ’ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ತಮ್ಮ ಧರ್ಮೋಪದೇಶದಲ್ಲಿ “ಪ್ರಭು ಯೇಸು ಕ್ರಿಸ್ತರು ವಿಶ್ವದ ನಕ್ಷತ್ರ. ಅವರು ಶಾಶ್ವತ ಮೋಕ್ಷಕ್ಕೆ ನಮಗೆ ಮಾರ್ಗದರ್ಶನ ನೀಡಲು ಪ್ರಕಾಶಮಾನವಾಗಿ ಹೊಳೆಯುತ್ತಾರೆ. ಮೂರು ರಾಜರ ಹಬ್ಬವು ನಮ್ಮ ಭವಿಷ್ಯವನ್ನು ಜ್ಯೋತಿಷ್ಯ ಅಥವಾ ಜಾತಕದಿಂದ ನಿಯಂತ್ರಿಸುವುದಿಲ್ಲ ಆದರೆ ಧರ್ಮಗ್ರಂಥಗಳ ಮೂಲಕ ದೈವಿಕ ಬಹಿರಂಗಪಡಿಸುವಿಕೆಯಿAದ ನಮಗೆ ನೆನಪಿಸುತ್ತದೆ. ಮೂವರು ಜ್ಯೋತಿಷ್ಯರ ಪಯಣದ ಆಳವಾದ ಸಂಕೇತವನ್ನು ಎತ್ತಿ ತೋರಿಸಿ, ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಅದರ ಪ್ರಸ್ತುತತೆಯನ್ನು ಒತ್ತಿಹೇಳಿದರು. “ಸತ್ಯದ ಹುಡುಕಾಟದಲ್ಲಿ ಪ್ರಪಂಚದ ನಿಜವಾದ ಬೆಳಕು ಯೇಸುವನ್ನು ನೋಡಲು ಬಂದ ಜ್ಯೋತಿಷ್ಯರ ಪಯಣ, ನಮ್ಮ ಭರವಸೆಯ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ,” ಎಂದು ಹೇಳಿದರು. ನಮ್ಮ ಭರವಸೆಯ ಪಯಣದಲ್ಲಿ ಕ್ರಿಸ್ತನ ಅನುಯಾಯಿಗಳಾಗಿ, ನಾವು ನಮ್ಮ ಜೀವನದಲ್ಲಿ ಆತನ ಬೆಳಕನ್ನು ಪ್ರತಿಬಿಂಬಿಸಲು ಮತ್ತು ಪ್ರಪಂಚದ ನಿಜವಾದ ಬೆಳಕಾಗಿರುವ ಯೇಸುವಿನೆಡೆ ಎಲ್ಲರನ್ನು ಕರೆತರಲು ಕರೆಯಲ್ಪಟ್ಟಿದ್ದೇವೆ”, ಎಂದು ಬೋಧಿಸಿದರು.
ಪೂಜಾಂತ್ಯಕ್ಕೆ ಆರಂಭಗೊಂಡ ಮೆರವಣಿಗೆಯ ಜೊತೆ, ಪವಿತ್ರ ಪ್ರಸಾದವನ್ನು ಹೊತ್ತೊಯ್ದ ಅಲಂಕೃತ ವಾಹನವು ಮಿಲಾಗ್ರಿಸ್ ಚರ್ಚ್ ದಿಂದ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಹಂಪನಕಟ್ಟೆ, ಕ್ಲಾಕ್ ಟವರ್ ಸರ್ಕಲ್, ಎ.ಬಿ. ಶೆಟ್ಟಿ ಸರ್ಕಲ್ ಮತ್ತು ನೆಹರು ವೃತ್ತದ ಮೂಲಕ ಸಾಗಿತು. ಮೆರವಣಿಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಬ್ಯಾಂಡ್-ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ, ಜನಸಾಮಾನ್ಯರಿಗೆ ಅಡಚಣೆಯನ್ನುಂಟು ಮಾಡದೆ ಎರಡು ಸಾಲುಗಳಲ್ಲಿ ಸಾಗಿತು. ಬಿಷಪ್ ನೇತೃತ್ವದ ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್ ಆವರಣದಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.
ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ಪಾನಿರ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೋ ರವರು 2025ರ ಜುಬಿಲಿ ವರ್ಷದ ವಿಷಯ, “ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ” ಎಂಬುದರ ಕುರಿತು ಬೋಧಿಸಿದರು. ಪರಮ ಪ್ರಸಾದದ ಸಂಸ್ಕಾರದ ಮತ್ತು ಪವಿತ್ರ ಗ್ರಂಥಗಳ ಸಮರ್ಥನೀಯ ಶಕ್ತಿಯನ್ನು ಒತ್ತಿ ಹೇಳುತ್ತಾ, “ಜೀವನದ ಕಷ್ಟಗಳು, ವೈಫಲ್ಯಗಳು ಮತ್ತು ಅನಾರೋಗ್ಯದ ನಡುವೆ, ಪರಮ ಪ್ರಸಾದದ ಸಂಸ್ಕಾರ ಮತ್ತು ದೇವರ ವಾಕ್ಯದಲ್ಲಿ ಭರವಸೆಯ ಮೂಲಗಳನ್ನು ಹುಡುಕಲು ನಾವು ಕರೆಯಲ್ಪಟ್ಟಿದ್ದೇವೆ. ನಾವು ಭರವಸೆಯ ಯಾತ್ರಿಕರಾಗೋಣ. ಭರವಸೆಯನ್ನು ಎಲ್ಲೆಡೆ ಬಿತ್ತರಿಸೋಣ, ಹತಾಶೆಯಲ್ಲಿರುವವರನ್ನು ಮೇಲಕ್ಕೆತ್ತೋಣ”, ಎಂದು ಬೋಧಿಸಿದರು.
ರೊಸಾರಿಯೊ ಚರ್ಚ್ ಆವರಣದಲ್ಲಿ ನಡೆದ ಆರಾಧನೆ ವಿಧಿಯನ್ನು ಮಂಗಳಜ್ಯೋತಿ ಕೇಂದ್ರದ ವಂದನೀಯ ಫಾದರ್ ವಿಜಯ್ ಮಚಾದೊ ಮತ್ತು ಕ್ಯಾಥೊಲಿಕ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯವರು ಭಕ್ತಿಯುತವಾಗಿ ನಡೆಸಿದರು.
ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವಣಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ವರದಿ: ವಂದನೀಯ ಅನಿಲ್ ಐವನ್ ಫೆರ್ನಾಂಡಿಸ್
ಚಿತ್ರಗಳು: ಕೆನರಾ ಸಂವಹನ ಕೇಂದ್ರ