ಮಾತೆ ಸಾವಿತ್ರಿ ಬಾ ಪುಲೆಯವರ 194ನೇ ಜನ್ಮದಿನಾಚರಣೆ
ಬೆಳ್ತಂಗಡಿ : ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾ ಪುಲೆ ಯವರ 194ನೇ ಹುಟ್ಟುಹಬ್ಬ ಮತ್ತು ಹೊಸ ಚಿಂತನೆಯೊಂದಿಗೆ ಆರಂಭಗೊಂಡ ನೂತನ ಸತ್ಯ ಶೋಧಕ ವೇದಿಕೆಯ ಉದ್ಘಾಟನಾ ಕಾರ್ಮಕ್ರಮ ಜನವರಿ 5ರಂದು ಭಾನುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಗುರುವಾಯನಕೆರೆ ನಾಗರೀಕ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಸೋಮನಾಥ ನಾಯಕ್ ಇವರು ಮಾತನಾಡುತ್ತಾ ಶೋಷಿತರ ಮಾತೆ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಜ್ಯೋತಿ ಬಾ ಪುಲೆಯವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಜೊತೆಗೆ ಸತ್ಯ ಶೋಧಕ ವೇದಿಕೆಯ ಯುವ ಕಾರ್ಯಕರ್ತರು ಶೋಷಣೆಗೊಳಗಾಗಿರುವ ದಲಿತರಿಗೆ ಸರಕಾರದಿಂದ ಭೂಮಿ ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಿರಂತರವಾಗಿರಲಿ. ನಿಮ್ಮೊಂದಿಗೆ ನಾಗರೀಕ ಸೇವಾ ಟ್ರಸ್ಟ್ ಎಲ್ಲಾ ರೀತಿಯ ಕಾನೂನಾತ್ಮಕ ಸಹಕಾರ ಯಾವತ್ತೂ ನೀಡುತ್ತದೆ ಎಂದು ಹೇಳಿದರು.
ಬೆಳ್ತಂಗಡಿ ತಾಲೂಕಿನಲ್ಲಿ ನಾಗರೀಕ ಸೇವಾ ಟ್ರಸ್ಟ್ ವತಿಯಿಂದ ನಮ್ಮ ದಲಿತ ಸಮುದಾಯದ ಜೀವನದ ಸ್ಥಿತಿ-ಗತಿಯನ್ನು 2002ರಲ್ಲಿ ಅಧ್ಯಯನ ಮಾಡಿರುತ್ತೇವೆ. ಅಧ್ಯಯನ ಮೂಲಗಳಿಂದ ದೊರೆತ ಮಾಹಿತಿಯು ಬಹಳ ಖೇದಕರವಾಗಿದೆ. ಇಡೀ ತಾಲೂಕಿನ ದಲಿತರಲ್ಲಿ 0.5 ಶೇಕಡಾ ಮಾತ್ರ ಭೂಮಿ ಹೊಂದಿದ್ದಾರೆ. ಕೆಲವು ಕಡೆ ಮಾತ್ರ ಭೂ ಸುಧಾರಣಾ ಕಾಯಿದೆ ಬಂದ ಮೇಲೆ ದಲಿತ ವರ್ಗದ ಜನರು ಅಲ್ಪ ಪ್ರಮಾಣದಲ್ಲಿ ಭೂಮಿ ಹೊಂದಿದ್ದಾರೆ. ತಾಲೂಕು ತಹಸೀಲ್ದಾರರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಯಾವುದೇ ರೀತಿಯ ಸರಕಾರಿ ಜಾಗ ಲಭ್ಯ ಇಲ್ಲ ಎಂದು ಹೇಳುತ್ತಾರೆ, ನಮ್ಮ ಅಧ್ಯಯನ ಪ್ರಕಾರ ಇಡೀ ಬೆಳ್ತಂಗಡಿ ತಾಲೂಕಿನಲ್ಲಿ ಅಂದಾಜು 5 ಸಾವಿರದಿಂದ 15 ಸಾವಿರ ಎಕರೆ ಸರಕಾರಿ ಭೂಮಿ ಖಾಲಿ ಇದೆ. ಜೊತೆಗೆ ಡಿಸಿ ಮನ್ನಾ ಭೂಮಿ ಮೇಲ್ವರ್ಗದವರ ಮುಷ್ಟಿಯಲ್ಲಿದೆ, ಇದನ್ನೆಲ್ಲ ಈ ಸತ್ಯ ಶೋಧಕ ವೇದಿಕೆಯು ಭೂಮಿ ಇಲ್ಲದ ಅರ್ಹ ಕುಟುಂಬಗಳಿಗೆ ಭೂಮಿ ದೊರೆಕಿಸಿಕೊಡುವಲ್ಲಿ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ವಿ.ಎಸ್. ಪೌಢಶಾಲಾ ಶಿಕ್ಷಕಿ ಪೂರ್ಣಿಮಾರವರು ಮಾತನಾಡುತ್ತಾ, ನಾವು ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ನಮ್ಮ ಅರ್ಹತೆಯನ್ನು ಯಾರು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಶಿಕ್ಷಣ, ಉದ್ಯೋಗ, ಆರೋಗ್ಯ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಈ ಸತ್ಯ ಶೋಧಕ ವೇದಿಕೆಯು ನಿಂತ ನೀರಾಗದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಎಲ್ಲರ ಬದುಕಿಗೂ ಸಂಪರ್ಕ ಸೇತುವೆ ಆಗಲಿ ಎಂದು ಶುಭ ಹಾರೈಸಿದರು. ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಅಗತ್ಯ ಎಂದು ದಾಖಾಲಾದ ಕಾರಣ ನಾವು ಇಂದು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ದೇಶದ ಪ್ರಥಮ ಶಿಕ್ಷಕಿ ಅಕ್ಷರದವ್ವ ಸಾವಿತ್ರಿ ಜ್ಯೋತಿ ಬಾ ಪುಲೆಯವರ 194ನೇ ಜನ್ಮ ದಿನಾಚರಣೆ ಆಚರಿಸುತ್ತಿದ್ದೇವೆ. 18 ಶಾಲೆಗಳನ್ನು ಮಹಾರಾಷ್ಟ್ರದಲ್ಲಿ ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿದ್ದು ಈ ಅಕ್ಷರದವ್ವ ಸಾವಿತ್ರಿ ಜ್ಯೋತಿ ಬಾ ಪುಲೆಯವರು. ಸತ್ಯ ಶೋಧಕ ಸಮಾಜವನ್ನು ಮಹಾತ್ಮ ಜ್ಯೋತಿ ಬಾ ಪುಲೆಯವರು ಹುಟ್ಟುಹಾಕಿದರು. ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕರ ಕಾಲದ ಸಹೋದರತೆ ಸಮಾನತೆ ಧ್ಯೇಯದೊಂದಿಗೆ ಚಳುವಳಿ ನಿರಂತರವಾಗಿರಲಿ ಎಂದು ವೆಂಕಪ್ಪ ಪಿ.ಎಸ್. ಹೇಳಿದರು
ಶೇಖರ್ ಕುಕ್ಕೇಡಿ ಸಾಂದರ್ಭಿಕವಾಗಿ ಮಾತಾನಾಡಿದರು. ಸತ್ಯ ಶೋಧಕ ವೇದಿಕೆಯ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ಮೂಲಕ ಮಾಡಲಾಯಿತು. ಅಧ್ಯಕ್ಷರಾಗಿ ಸುಕೇಶ್ ಮಾಲಾಡಿ, ಉಪಾಧ್ಯಕ್ಷರಾಗಿ ವಿಶ್ವನಾಥ ಕಳೆಂಜ, ಕಾರ್ಯದರ್ಶಿಯಾಗಿ ಗಿರೀಶ್ ಪಣಕಜೆ ಹಾಗೂ ಕೋಶಾಧಿಕಾರಿಯಾಗಿ ರಂಜಿತ್ ಮಡಂತ್ಯಾರ್ ಆಯ್ಕೆಯಾದರು. ನಾಡಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಯೋಗಿನಿ ಮಚ್ಚಿನ ನಿರೂಪಿಸಿ, ಸತೀಶ್ ಉಜಿರೆ ಸ್ವಾಗತಿಸಿ, ಗಿರೀಶ್ ಪಣಕಜೆ ಧನ್ಯವಾದವಿತ್ತರು.