January 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಚಿಯಲ್ಲಿ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಫಾರ್ವರ್ಡ್, ಲೈಕ್, ಶೇರ್, ಕಮೆಂಟುಗಳ ಯುಗದಲ್ಲಿ ಓದುವ-ಬರೆಯುವ ಸಾಹಿತ್ಯ ಬಳಲಿ ಬೆಂಡಾಗಿರುವುದು ದುರಂತ – ಡಾ ನಾಗವೇಣಿ ವಿಷಾದ

ಆಹಾರ ನೀಡಿ ದೈಹಿಕವಾಗಿ ಮಕ್ಕಳನ್ನು ಬೆಳೆಸುವಂತೆ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯವನ್ನು ಉಣಬಡಿಸಿ – ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ್ ಭಟ್ಟ ಅಭಿಮತ

ಬಂಟ್ವಾಳ, ದಿವಂಗತ ಗಂಗಾಧರ ರೈ ಬೋಳಂತೂರು ಮುಖ್ಯ ದ್ವಾರ, ದಿವಂಗತ ಕನ್ನಡ ಪಂಡಿತ್ ಎ.ಪಿ. ತಿಮ್ಮಯನ್ ವೇದಿಕೆ, ದಿವಂಗತ ಕಲ್ಲಾಡಿ ವಿಠಲ ಶೆಟ್ಟಿ ಪ್ರವೇಶ ದ್ವಾರ, ಬಿ.ವಿ. ಕಾರಂತ ಸಭಾಂಗಣ, ದಿವಂಗತ ನಾರಾಯಣ ಭಟ್, ನೂಜಿಬೈಲು ಪ್ರಾಂಗಣ : “ಸಾಹಿತ್ಯದಿಂದ ಸಾಮರಸ್ಯ” ಎಂಬ ಸದಾಶಯದ 23ನೇ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಕಾಲಿಕವಾಗಿದೆ ಎಂದು ಕನ್ನಡ ಪ್ರಾಧ್ಯಾಪಕರು, ಸಾಹಿತಿಗಳೂ ಆಗಿರುವ ಡಾ. ನಾಗವೇಣಿ ಮಂಚಿ ಅಭಿಪ್ರಾಯಪಟ್ಟರು.

ಮಂಚಿ-ಕೊಳ್ನಾಡು ಸರಕಾರಿ ಪ್ರೌಢ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳವನ್ನು ಜನವರಿ 4ರಂದು ಶನಿವಾರ ಸಂಜೆ  ಉದ್ಘಾಟಿಸಿ ಮಾತನಾಡಿದ ಅವರು, ಯಾವುದು ಹಿತ ಸತ್ವವಾಗಿ ಬಾಳಬಲ್ಲುದೋ, ಸಾರ್ವತ್ರಿಕವಾಗಿ, ಮಾನವೀಯತೆಯಿಂದ, ಪ್ರೀತಿಯಿಂದ, ಸೌಹಾರ್ದಯುತವಾಗಿ ಬಾಳಬಲ್ಲುದೋ, ತಾನು ಬದುಕಿ ಇತರರನ್ನು ಬದುಕಿಸಲು ಪ್ರೇರೇಪಿಸುವುದೇ ನಿಜವಾದ ಸಾಹಿತ್ಯ. ಜೀವನ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಲ್ಲುತ್ತದೆ ಎಂದರು.

ಕೇವಲ ತಂತಿಗಳಂತಿರುವ ವಿದ್ಯಾರ್ಥಿಗಳನ್ನು ಮೀಟಿಸಿ ಸಂಗೀತದ ಅಲೆಗಳನ್ನು ಹೊರಗೆಳೆದ ಗುರುಗಳೇ ಸಾಹಿತ್ಯದ ಪ್ರಥಮ ಹೆಜ್ಜೆಯಾಗಿದ್ದಾರೆ. ಶಿಕ್ಷಣದಿಂದ ಪ್ರೀತಿ, ಮಾನವೀಯತೆ, ಜೀವನ ಮೌಲ್ಯಗಳು ದೊರೆತರೆ ಅದು ಸಾಮರಸ್ಯಕ್ಕೆ ಪೂರಕವಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರೀತಿಯ ಭಾಷೆಯಲ್ಲಿ ಶಿಕ್ಷಣ ದೊರೆತಾಗ ಸಾಮಾಜಿಕ ಸಾಮರಸ್ಯ ಉಳಿಯುವ ಜೊತೆಗೆ ಮಕ್ಕಳ ಮನಸ್ಸನ್ನು ಬೆಳಗುತ್ತದೆ ಎಂದ ಸಾಹಿತಿ ನಾಗವೇಣಿ ಅವರು ಇಂದು ಶಿಕ್ಷಣವು ಮಾನವೀಯ ಮೌಲ್ಯಗಳನ್ನು ಬಿಟ್ಟು ಅಂಕಗಳ ಹಿಂದೆ ಓಡುತ್ತಿದೆ. ಅರಿವಿಗೆ ಮಹತ್ವ ಇಲ್ಲ ಎಂದು ವಿಷಾದಿಸಿದರು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೌಲ್ಯ ಇರುವ ಊರು ಶ್ರೀಮಂತಿಕೆಯನ್ನು ಮೇಳೈಸಿಕೊಳ್ಳುತ್ತದೆ ಎಂದ ಅವರು ಇವತ್ತು ಫಾರ್ವರ್ಡ್, ಲೈಕ್, ಶೇರ್, ಕಮೆಂಟ್ ಯುಗದಲ್ಲಿ ಓದುವ-ಬರೆಯುವ ಸಾಹಿತ್ಯ ಬಳಲಿ ಬೆಂಡಾಗಿರುವುದು ದುರಂತ ಎಂದರಲ್ಲದೆ ಸಮಚಿತ್ತದ ಶಿಕ್ಷಣದಿಂದ ಮಾತ್ರ ಸಾಮರಸ್ಯ ಸಾಧ್ಯ. ಶಿಕ್ಷಣ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಮಚಿತ್ತದಿಂದ ಕೂಡಿರಲಿ ಎಂದು ಹಾರೈಸಿದರು.

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎಳೆಯರ ಗೆಳೆಯ ಮುಳಿಯ ಖ್ಯಾತಿಯ ಮುಳಿಯ ಶಂಕರ ಭಟ್ಟ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಸಾಮಾಜಿಕ ಸ್ವಾಸ್ಥ್ಯವನ್ನು ಸಂರಕ್ಷಿಸಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಾಮಾಣಿಕ ನಡೆಯನ್ನು ಮತದಾರ ಬಯಸುತ್ತಾನೆ, ಬಯಸಬೇಕು. ಪ್ರಜ್ಞಾವಂತ ಮತದಾರ ಜಾಗೃತಿಯಿಂದ ಹೇಗೆ ಮತವಿತ್ತು ಪವಿತ್ರ ಹಕ್ಕನ್ನು ಚಲಾಯಿಸಬೇಕೋ ಹಾಗೆಯೇ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯ ಬದ್ಧತೆಯಿಂದ ವ್ಯವಹರಿಸಿದಾಗ ಎಲ್ಲವೂ ಸುಗಮ ಎಂದರು.

ಮಕ್ಕಳು, ಯುವಜನತೆ, ಹೆಚ್ಚು ಹೆಚ್ಚು ಪುಸ್ತಕ ಪ್ರಿಯರಾದಂತೆ ಸಾಹಿತ್ಯ ಕ್ಷೇತ್ರ ಪುಷ್ಪವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು. ತಾಯಂದಿರ ಪಾತ್ರ ಬಲು ಮುಖ್ಯ. ನಮ್ಮ ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸುವಲ್ಲಿ ಅದು ತಾಯ್ತನದ ಹೊಣೆಗಾರಿಕೆಯೂ ಹೌದು. ಪ್ರೀತಿ-ಅಕ್ಕರೆಯಿಂದ ತಿಂಡಿ-ತಿನಿಸು ಕೊಟ್ಟು ಮಕ್ಕಳನ್ನು ಪೋಷಿಸುವ ನಾವು ವ್ಯಕ್ತಿತ್ವ ವಿಕಾಸಕ್ಕೆ ಕಾರಣವಾದ ವೈಚಾರಿಕ ಆಹಾರವನ್ನೂ ಕೊಡಬೇಕಾಗಿದೆ.  ಮನೆ-ಮನೆಯಲ್ಲೂ ಪುಸ್ತಕ ಸಂಗ್ರಹ, ಓದು, ವಿಚಾರ ವಿನಿಮಯ, ಸಂವಾದ, ಕವಿತಾ ವಾಚನ, ಕಥಾ ರಚನೆ ತರಬೇತಿ, ಕವಿತೆಗಳ ರಚನೆ, ಕಾವ್ಯ ವಾಚನ ಮುಂತಾದ ಪ್ರಯತ್ನಗಳನ್ನು ಕಾರ್ಯಗತಗೊಳಿಸಿ ಎಲ್ಲರೂ ಸದಾ ಸಾಹಿತ್ಯ ಪರಿಚಾರಕರಾಗೋಣ. ಬರಹಗಾರರು, ಓದುಗರು, ಸಾಹಿತ್ಯ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಮಕ್ಕಳ ಸಾಹಿತ್ಯ ಪರಿಷತ್ತು ಒಂದೆಡೆ ಕಲೆತು ಸಾಹಿತ್ಯ ಕ್ಷೇತ್ರದ ಆಗು-ಹೋಗುಗಳು, ಸಫಲತೆ-ವೈಫಲ್ಯ, ನವೀನ ಮಾರ್ಗಗಳ ಶೋಧದ ಮೂಲಕ ಸದಭಿರುಚಿಯ ಸಾಹಿತ್ಯ ರಚನೆ-ಪ್ರಸಾರಕ್ಕೆ ಕ್ರಿಯಾಶೀಲರಾಗೋಣ, ಶಾಲೆಗಳಲ್ಲೂ ಸಾಹಿತ್ಯಕ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ಆಯೋಜನೆಯಾಗಲಿ. ಮನೆ-ಮನೆಯಿಂದ ಗ್ರಾಮ-ಹೋಬಳಿ ಮಟ್ಟಕ್ಕೆ ಈ ಜಾಗೃತಿ ತಲುಪುವಂತಾದರೆ ಚೆನ್ನ. ಇಂತಹ ಸಮ್ಮೇಳನಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಪೂಜೆಗೆ ಭದ್ರ ತಳಹದಿಯಾಗಲಿ ಎಂದು ಹಾರೈಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಬಾಲಕೃಷ್ಣ ಗಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ರೇಖಾ ವಿಶ್ವನಾಥ್ ಬಂಟ್ವಾಳ, ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ-ಬಾಳಿಕೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಪೂನಾ ಡಿ.ವೈ. ಪಾಟೀಲ್ ಅಂತರಾಷ್ಟ್ರೀಯ ವಿ.ವಿ. ಕುಲಸಚಿವ ಡಾ. ಬೀರಾನ್ ಮೊಯಿದಿನ್, ಅಮ್ಟೂರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನೋಯೆಲ್ ಲೋಬೋ, ಸ್ವಾಗತ ಸಮಿತಿ ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ, ಗೌರವ ಕಾರ್ಯದರ್ಶಿ ವಿ. ಸುಬ್ರಹ್ಮಣ್ಯ ಭಟ್, ತಾರಾನಾಥ ಕೈರಂಗಳ, ಪುಷ್ಪರಾಜ್ ಕುಕ್ಕಾಜೆ, ದೇವದಾಸ್ ಅರ್ಕುಳ, ಹರ್ಷಿತ್ ಶೆಟ್ಟಿ ಮಂಚಿ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಮಂಚಿ, ಗೌರವ ಪ್ರಧಾನ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಗೌರವ ಕೋಶಾಧಿಕಾರಿ ಡಿ.ಬಿ. ಅಬ್ದುಲ್ ರಹಿಮಾನ್, ಸಂಚಾಲಕರಾದ ಬಿ.ಎಂ. ಅಬ್ಬಾಸ್ ಅಲಿ, ಉಮಾನಾಥ ರೈ ಮೇರಾವು, ಉಪಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕೋಶಾಧಿಕಾರಿ ಸುಲೈಮಾನ್, ಗೌರವ ಸಲಹೆಗಾರ ರವೀಂದ್ರ ಕುಕ್ಕಾಜೆ, ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಅಬೂಬಕ್ಕರ್ ಅಮ್ಮುಂಜೆ, ಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ, ಆರ್ಥಿಕ ಸಮಿತಿ ಸಂಚಾಲಕ ನಿಶ್ಚಲ್ ಜಿ. ಶೆಟ್ಟಿ ಕಲ್ಲಾಡಿ, ವಿಟ್ಲ ಹಾಗೂ ಪಾಣೆಮಂಗಳೂರು ಹೋಬಳಿ ಅಧ್ಯಕ್ಷರುಗಳಾದ ಗಣೇಶ್ ಪ್ರಸಾದ್ ಪಾಂಡೇಲು ಹಾಗೂ ಪಿ. ಮುಹಮ್ಮದ್ ಪಾಣೆಮಂಗಳೂರು, ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಮುಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ, ಪ್ರಮುಖರಾದ ರವಿಕುಮಾರ್, ರವಿ ಜಿ. ಪೂಜಾರಿ, ಜೆಫ್ರಿ ಲೂಯಿಸ್, ಶ್ರೀಮತಿ ನಿರ್ಮಲ, ರಾಜೇಶ್ ಕುಲಾಲ್, ಎ. ಗೋಪಾಲ ಅಂಚನ್, ರಮೇಶ್ ರಾವ್ ಪತ್ತುಮುಡಿ, ಹಾರಿಸ್ ಸುರಿಬೈಲು, ಉಮ್ಮರ್ ಕುಂಞಿ ಸಾಲೆತ್ತೂರು, ನಾಗೇಶ್ ಸಿ.ಎಚ್. ನೂಜಿ, ಶಿವಕುಮಾರ್ ಎಂ.ಜಿ., ದೇವಕಿ ಶೆಟ್ಟಿ ಎಚ್., ದಿನೇಶ್ ತುಂಬೆ, ಅಬ್ದುಲ್ ಮಜೀದ್ ಎಸ್., ಬ್ರಿಜೇಶ್ ಅಂಚನ್ ಮೊದಲಾದವರು ಭಾಗವಹಿಸಿದ್ದರು.

ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಸಾಲೆತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರು ಸ್ವಾಗತ ನೃತ್ಯ ಪ್ರಸ್ತುತ ಪಡಿಸಿದರು. ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಎಂ. ಇಬ್ರಾಹಿಂ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರದಿಂದ ಆರಂಭಗೊಂಡ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು. ಕುಕ್ಕಾಜೆ ಭಜನಾ ಮಂದಿರ ಅಧ್ಯಕ್ಷ ಎನ್. ಸಂಜೀವ ಆಚಾರ್ಯ ಮೆರವಣಿಗೆ ಉದ್ಘಾಟಿಸಿದರು.  ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಅವರು ರಾಷ್ಟ್ರ ಧ್ವಜಾರೋಹಣಗೈದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ ಧ್ವಜಾರೋಹಣಗೈದರು. ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣಗೈದರು. ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜು ಸಹ ಪ್ರಾಧ್ಯಾಪಕ ಡಾ. ಮುಕುಂದ ಪ್ರಭು ವಸ್ತು ಪ್ರದರ್ಶನ ಉದ್ಘಾಟಿಸಿದರು. ಉದ್ಯಮಿ ಲಯನ್ ಚಂದ್ರಹಾಸ್ ರೈ ಬಾಲಾಜಿಬೈಲು ಪುಸ್ತಕ ಮಳಿಗೆ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಂಚಿ ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬಬ್ರುವಾಹನ ಕಾಳಗ- ಅಗ್ರಪೂಜೆ ಯಕ್ಷಗಾನ ನಡೆಯಿತು.

You may also like

News

ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ ಎಲ್ಲಾ ಪ್ರಕರಣಗಳನ್ನು ಮುಂದಿನ 6 ತಿಂಗಳಲ್ಲಿ ಇತ್ಯರ್ಥ –  ಕೃಷ್ಣ ಬೈರೇಗೌಡ

ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಮುಂದಿನ ಆರು ತಿಂಗಳ ಒಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಕಂದಾಯ ಸಚಿವ
News

ಎರಡು ಬೈಕ್ ಗಳ ಮುಖಮುಖಿ ಡಿಕ್ಕಿ – ಸಹ ಪ್ರಯಾಣಿಕೆ ಬಾಲಕಿ ಇಸ್ಮತ್ ಆಯಿಶಾ ಮೃತ್ಯು

ಬಂಟ್ವಾಳ : ಎರಡು ಬೈಕ್ ಗಳ ನಡುವೆ ನಡೆದ ಬೀಕರ ಅಪಘಾತದಿಂದಾಗಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟ ಘಟನೆ ಜನವರಿ 14ರಂದು ಮಂಗಳವಾರ ರಾತ್ರಿ ಮಂಗಳೂರು –

You cannot copy content of this page