July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ ಎಲ್ಲಾ ಪ್ರಕರಣಗಳನ್ನು ಮುಂದಿನ 6 ತಿಂಗಳಲ್ಲಿ ಇತ್ಯರ್ಥ –  ಕೃಷ್ಣ ಬೈರೇಗೌಡ

ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಮುಂದಿನ ಆರು ತಿಂಗಳ ಒಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಕಂದಾಯ ಸಚಿವ ಕೃಷ ಬೈರೇಗೌಡ ಅಧಿಕಾರಿಗಳಿಗೆ ಗಡುವನ್ನು ನಿಗದಿಗೊಳಿಸಿದರು. ಜನವರಿ 13ರಂದು ಸೋಮವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆಗೆ ಏಕ ಕಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನು ಆರು ತಿಂಗಳ ಅವಧಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನು ಇದೆ ಎಂದು ಹೇಳಿದರು.

ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಏರಿದ ವೇಳೆ ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 60 ಸಾವಿರಗಿಂತ ಅಧಿಕ ಪ್ರಕರಣಗಳಿದ್ದವು. ಈ ಎಲ್ಲಾ ಪ್ರಕರಣಗಳನ್ನು ಮುಂದಿನ ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಿ ಸರಕಾರಿ ಕಚೇರಿಗಳಿಗೆ ಜನರ ಅನಗತ್ಯ ಅಲೆದಾಟಕ್ಕೆ ತಡೆ ಹಾಕಬೇಕು ಎಂಬುದು ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ಉದ್ದೇಶವಾಗಿತ್ತು ಎಂದು ಅವರು ಸ್ಮರಿಸಿದರು. ಆದರೆ, ಒಂದೂವರೆ ವರ್ಷ ಕಳೆದರೂ ನಮ್ಮ ಈ ಉದ್ದೇಶ ಈಡೇರಿಲ್ಲ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ-ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಶೇ.55ರಷ್ಟು ಪ್ರಕರಣಗಳನ್ನು ಮಾತ್ರ ವಿಲೇ ಮಾಡಲಾಗಿದೆ. ಎಸಿ ನ್ಯಾಯಾಲಯಗಳಲ್ಲಿ ಇನ್ನೂ 29 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ಜನ ಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಮುಂದಿನ ಆರು ತಿಂಗಳ ಒಳಗಾಗಿ ಈ ಎಲ್ಲಾ ಪ್ರಕರಣಗಳನ್ನು ಅಧಿಕಾರಿಗಳು ನ್ಯಾಯಯುತ ವಿಲೇವಾರಿಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕೆಲಸಕ್ಕೆ ಮುಂದಾಗಬೇಕು ಎಂದು ಕೃಷ್ಣ ಬೈರೇಗೌಡ ಕರೆ ನೀಡಿದರು. ಆರು ತಿಂಗಳಲ್ಲಿ ಎಲ್ಲಾ ಪ್ರಕರಣಗಳನ್ನು ತಹಬದಿಗೆ ತರಬೇಕು ಎಂಬುದು ಸರಕಾರದ ಸಂಕಲ್ಪ. ಒಂದು ವರ್ಷದಲ್ಲಿ ಆಗಬೇಕಾದ ಕೆಲಸ ಎರಡು ವರ್ಷ ಆದರೂ ಆಗಿಲ್ಲ ಅಂದರೆ ಸರಕಾರಕ್ಕೆ, ನಿಮಗೆ ಶೋಭೆ ತರಲ್ಲ. ಹೀಗಾಗಿ ಈ ವಾರದಿಂದಲೇ ನಿರಂತರವಾಗಿ ಉಪ ವಿಭಾಗಾಧಿಕಾರಿಗಳು ತಿಂಗಳೊಂದಕ್ಕೆ 200 ರಿಂದ 250 ಪ್ರಕರಣಗಳನ್ನು ವಿಲೇ ಮಾಡಿದರೆ, ವಿಶೇಷ ಉಪ-ವಿಭಾಗಾಧಿಕಾರಿಗಳು ಕನಿಷ್ಟ 70 ರಿಂದ 100 ಪ್ರಕರಣಗಳನ್ನು ವಿಲೇಗೊಳಿಸಬೇಕು ಎಂದು ಅವರು ಸೂಚಿಸಿದರು.

ಆರು ತಿಂಗಳ ನಂತರವೂ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಪ್ರತೀ ತಿಂಗಳೂ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಲಾಗುವುದು ಎಂದು ಕೃಷ್ಣ ಭೈರೇಗೌಡ ಎಚ್ಚರಿಸಿದರು. ನ್ಯಾಯಾಲಯಗಳ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ಥಿ, ನಮೂನೆ 3-9 ಮಿಸ್ ಮ್ಯಾಚ್ ಹಾಗೂ ಫೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಹೀಗಾಗಿ ಅಧಿಕಾರಿಗಳು ಜನರ ಸಮಸ್ಯೆ ಹಾಗೂ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟು ಕೊಂಡು ಎಲ್ಲಾ ಕೆಲಸಗಳನ್ನು ಅಭಿಯಾನ ಮಾದರಿಯಲ್ಲಿ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಮತ್ತು ಸರ್ವೇ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page