ಉಡುಪಿ – ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ವಿರೋಧ ಮತ್ತು ಆಕ್ರೋಶ

ಯೋಜನೆ ನಿಲ್ಲಿಸದಿದ್ದಲ್ಲಿ ರೈತರಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು: ಪ್ರಸ್ತಾವಿತ ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆ ವಿರೋಧಿಸಿ, ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಲಾಗುವುದು ಎಂದು ಉಡುಪಿ – ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇನ್ನಾ ಚಂದ್ರಶೇಖರ್ ಶೆಟ್ಟಿ ಹೇಳಿದರು. ಈ ಯೋಜನೆಗೆ ಸಾರ್ವಜನಿಕರಿಂದ ಭಾರೀ ವಿರೋಧ ಮತ್ತು ಆಕ್ರೋಶ ಬುಗಿಲೆದ್ದಿದೆ.
ಜನವರಿ 15ರಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು, ‘ಪ್ರಸ್ತಾವಿತ ಈ ವಿದ್ಯುತ್ ಮಾರ್ಗ ವ್ಯಾಪ್ತಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶೇಕಡಾ 95ಕ್ಕಿಂತ ಹೆಚ್ಚಿನ ಭೂ ಮಾಲೀಕರು ಯೋಜನಾ ಮಾರ್ಗವನ್ನು ವಿರೋಧಿಸುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಮತ್ತು ಕೆಲವು ಖಾಸಗಿ ಜಾಗದಲ್ಲಿ ಟವರ್ ಬೇಸ್ ನಿರ್ಮಾಣ ಕಾಮಗಾರಿ ನಡೆದಿದೆ. ಯೋಜನೆ ಮಂಜೂರು ಪಡೆದು ಆರು ವರ್ಷಗಳ ನಂತರವೂ ಮಂಗಳೂರು ಮತ್ತು ಕುಂದಾಪುರ ವಲಯ ಅರಣ್ಯ ಇಲಾಖೆಯಿಂದ 2ನೇ ಹಂತದ ಅನುಮತಿ ದೊರೆತಿಲ್ಲ. ದೊಡ್ಡ ಪ್ರಮಾಣದಲ್ಲಿ ಮರ ಕಡಿಯಬೇಕಾಗಿರುವ ಕಾರಣ ಅನುಮತಿ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ’ ಎಂದರು.
ಕೇಂದ್ರ ಸರ್ಕಾರದ ವಿದ್ಯುತ್ ಸಚಿವಾಲಯದ ಅನುಮತಿ ದಾಖಲೆ ಮತ್ತು ಗೆಜೆಟ್ ನೋಟಿಫಿಕೇಷನ್ ದಾಖಲೆಯಲ್ಲಿ ನಮೂದಾಗಿರುವ ಯೋಜನಾ ಮಾರ್ಗ ಹೊರತುಪಡಿಸಿ, ಪ್ರತ್ಯೇಕ ಮಾರ್ಗದಲ್ಲಿ ಲೈನ್ ಅಳವಡಿಸಲು ಕಂಪನಿಗೆ ಯಾರು ಅನುಮತಿ ನೀಡಿದ್ದಾರೆ? ಎನ್ನುವ ಮಾಹಿತಿ ಬಹಿರಂಗಪಡಿಸಲಿ. ಇನ್ನಾದರೂ ಕಂಪನಿ ಸತ್ಯ ಸಂಗತಿ ಮರೆಮಾಚಿ, ಸುಳ್ಳು ಮಾಹಿತಿ ನೀಡುವುದನ್ನು ನಿಲ್ಲಿಸಲಿ ಎಂದರು.
ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆ ವಿರೋಧಿಸಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರೈತರು ಒಟ್ಟಾಗಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು. ಒಕ್ಕೂಟದ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ, ಅಲ್ಫೋನ್ಸ್ ಡಿಸೋಜ, ಅಲೆಕ್ಸ್ ಸಿಕ್ವೇರಾ ಮತ್ತು ಜೆಸಿಂತಾ ಲೋಬೊ ಉಪಸ್ಥಿತರಿದ್ದರು.