ಕೋಟೆಕಾರು ವ್ಯವಸಾಯ ಸಹಕಾರಿ ಸೇವಾ ಸಂಘದಲ್ಲಿ ಹಾಡುಹಗಲೇ ದರೋಡೆ – ಬಂದೂಕು ತೋರಿಸಿ ನಗ-ನಗದು ಕಳವು

ಮಂಗಳೂರು: ಕೋಟೆಕಾರು ವ್ಯವಸಾಯ ಸಹಕಾರಿ ಸೇವಾ ಸಂಘದಲ್ಲಿ ಹಾಡುಹಗಲೇ ಶಸ್ತ್ರಸಜ್ಜಿತರಾಗಿ ನುಗ್ಗಿದ 5-6 ಮಂದಿ ದುಷ್ಕರ್ಮಿಗಳ ತಂಡ ಸುಮಾರು 10-12 ಕೋಟಿ ರೂ. ಮೌಲ್ಯದ ನಗ-ನಗದು ದರೋಡೆಗೈದು ಪರಾರಿಯಾಗಿರುವ ಘಟನೆ ಇಂದು ಜನವರಿ 17ರಂದು ಶುಕ್ರವಾರ ಬೆಳಗ್ಗೆ 11:30ರಿಂದ ಮಧ್ಯಾಹ್ನ 12:30ರ ನಡುವೆ ನಡೆದಿದೆ.
ದುಷ್ಕರ್ಮಿಗಳೆಲ್ಲರೂ 25 ರಿಂದ 35 ವರ್ಷ ವಯಸ್ಸಿನವರೆಂದು ಅಂದಾಜಿಸಲಾಗಿದ್ದು, ಹಿಂದಿ ಮಾತನಾಡುತ್ತಿದ್ದರು. ಮಾಸ್ಕ್ ಧರಿಸಿ, ಪಿಸ್ತೂಲ್, ತಲ್ವಾರ್ ಮತ್ತು ಚಾಕು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳೊಂದಿಗೆ ಬ್ಯಾಂಕ್ ಗೆ ಹೊಕ್ಕ ದುಷ್ಕರ್ಮಿಗಳು, ಬ್ಯಾಂಕ್ ನಲ್ಲಿದ್ದ 4-5 ಮಂದಿ ಸಿಬ್ಬಂದಿಯನ್ನು ಬೆದರಿಸಿ ಸುಮಾರು 10-12 ಕೋಟಿ ರೂಪಾಯಿ ಮೌಲ್ಯದ ನಗ ನಗದನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಕಪ್ಪು ಬಣ್ಣದ ಫಿಯೆಟ್ ಕಾರಿನಲ್ಲಿ ಬಂದಿದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಣಾವಲು ಆಧರಿಸಿ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.