ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ನೀಡದಿರುವುದರ ಬಗ್ಗೆ ಮುಖ್ಯಮಂತ್ರಿಗಳಿಗೆ MLC ಐವನ್ ಡಿಸೋಜರವರ ನೇತೃತ್ವದಲ್ಲಿ ಸತ್ಯಶೋಧನ ವರದಿ ಸಲ್ಲಿಕೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ನೀಡದಿರುವುದರ ಬಗ್ಗೆ ಈಗಾಗಲೇ ರಚಿಸಲಾದ ಸತ್ಯಶೋಧನ ಸಮಿತಿಯ ವರದಿಯನ್ನು ಇಂದು ಜನವರಿ 17ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರ ನೇತೃತ್ವದಲ್ಲಿ ಭೇಟಿ ಮಾಡಿ ವಿಧಾನ ಪರಿಷತ್ ಶಾಸಕರುಗಳಾದ ಮಂಜುನಾಥ ಭಂಡಾರಿ, ನಗರಪಾಲಿಕೆಯ ವಿಪಕ್ಷ ನಾಯಕರಾದ ಅನಿಲ್ ಕುಮಾರ್, ಪಾಲಿಕೆ ಸದಸ್ಯರುಗಳಾದ ಶಶಿಧರ್ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ನವೀನ್ ಡಿಸೋಜ, ಕಿಶೋರ್ ಶೆಟ್ಟಿ, ಸತೀಶ್ ಪೆಂಗಲ್ ಇವರು ವರದಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಟಿ.ಡಿ.ಗಳಿಗೆ ವಿಶೇಷ ಅನುದಾನ ನೀಡಬೇಕು ಹಾಗೂ ಖಾಸಗಿ ಕಂಪನಿಗಳಿಂದ ಕಾರ್ಯ ನಿರ್ವಹಣೆ ಮಾಡುವಂತೆ ಮಾಡಬೇಕು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಯೋಜನೆಗಾಗಿ ಮತ್ತು ಶುದ್ಧೀಕರಣಕ್ಕಾಗಿ ಕನಿಷ್ಠ 100 ಕೋಟಿ ಅನುದಾನ ಒದಗಿಸಿ ಕೊಡಬೇಕೆಂದು ವಿನಂತಿಸಲಾಯಿತು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಇದೇ ಸಮಿತಿ ಭೇಟಿ ಮಾಡಿ, ಈ ಸತ್ಯ ಶೋಧನಾ ವರದಿಯಲ್ಲಿ ಕಂಡು ಬಂದ ನ್ಯೂನತೆಗಳ ಬಗ್ಗೆ ತಿಳಿಸಲಾಯಿತು, ಮಾನ್ಯ ಸಚಿವರು ಬೆಂಗಳೂರಿನಲ್ಲಿ ಒಂದು ಸಭೆ ಕರೆಸಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡಿ ಕುಡಿಯುವ ನೀರಿನಲ್ಲಿ ಉಂಟಾದಂತಹ ನ್ಯೂನತೆಗಳ ಬಗ್ಗೆ ಮತ್ತು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ನೀಡದೆ ಇರುವುದರ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮ ತೆಗೆದು ಕೊಳ್ಳುವಂತೆ ಸರ್ಕಾರವನ್ನು ತಾನು ಒತ್ತಾಯಿಸುವುದಾಗಿ ಭರವಸೆಯನ್ನು ನೀಡಿದರು.
MLC ಐವನ್ ಡಿಸೋಜರವರು ಮಹಾನಗರ ಪಾಲಿಕೆಯ ಅನೇಕ ಕಾಮಗಾರಿಗಳು ಅರ್ಧದಲ್ಲಿಯೇ ನಿಂತು ಹೋಗಿದ್ದು, ಇದಕ್ಕೆ ವಿಶೇಷ ಅನುದಾನ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.