ಹಣ ಮತ್ತು ಆಸ್ತಿಗಾಗಿ ಜನ್ಮ ನೀಡಿದ ತಾಯಿಯನ್ನೇ ಕೊಲೆಗೈದ ಮಗ

ಯುವಕನೋರ್ವ ಹೆತ್ತ ತಾಯಿಯನ್ನು ಹತ್ಯೆಗೈದ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಮರಶ್ಶೇರಿಯಲ್ಲಿ ಜನವರಿ 18ರಂದು ಶನಿವಾರ ನಡೆದಿದೆ. ತನ್ನ ತಾಯಿಯನ್ನು ಕೊಲೆಗೈದು “ತನಗೆ ಜನ್ಮ ನೀಡಿದ್ದಕ್ಕೆ ಹತ್ಯೆ ಮಾಡಿದೆ” ಎಂದು ಯುವಕ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಝುಬೈದಾ ಕಾಯಿಕ್ಕಲ್ ಮೃತ ಮಹಿಳೆ. ಜನವರಿ 19ರಂದು ಭಾನುವಾರ ಅದಿವಾರಂ ಟೌನ್ ಜುಮಾ ಮಸ್ಜಿದ್‌ನಲ್ಲಿ ಝುಬೈದಾ ಅವರ ಅಂತ್ಯ ಸಂಸ್ಕಾರ ನಡೆದಿದೆ.
ಕಳೆದ 23 ವರ್ಷಗಳ ಹಿಂದೆಯೇ ಪತಿಯಿಂದ ವಿಚ್ಛೇದನ ಪಡೆದಿದ್ದ ಝುಬೈದಾ ಅವರು, ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ ಹೆತ್ತ ಮಗನಿಂದ ಹತ್ಯೆಯಾಗಿದ್ದಾರೆ. ಜನವರಿ 18ರಂದು ಮಧ್ಯಾಹ್ನ ಝುಬೈದಾ ಅವರು ಪುತ್ತುಪ್ಪಾಡಿಯ ತನ್ನ ಸಹೋದರಿಯ ಮನೆಯಲ್ಲಿ ಒಂಟಿಯಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮಗ ಆಶಿಕ್ ತೆಂಗಿನ ಕಾಯಿ ಸುಲಿಯಲೆಂದು ಪಕ್ಕದ ಮನೆಯಿಂದ ಹರಿತವಾದ ಕತ್ತಿ ತಂದು ತಾಯಿ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೀವನ್ಮರಣ ಹೋರಾಟದಲ್ಲಿದ್ದ ಝುಬೈದಾ ಅವರನ್ನು ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ. ನಂತರ ಮೃತದೇಹವನ್ನು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದು ವಿಧಿವಿಧಾನಗಳನ್ನು ಪೂರೈಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಅಶಿಕ್ ಹಣ ಮತ್ತು ಆಸ್ತಿಗಾಗಿ ತಾಯಿಯನ್ನು ಪೀಡಿಸುತ್ತಿದ್ದ. ತನ್ನ ತಾಯಿಯನ್ನು ಕೊಲ್ಲುವುದಾಗಿ ಊರಿಡೀ ಹೇಳಿಕೊಂಡು ತಿರುಗಾಡುತ್ತಿದ್ದ. ಆತ ಈ ಹಿಂದೆಯೂ ತಾಯಿಯ ಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ದಿನವೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಆಶಿಕ್ ಮಾದಕ ವ್ಯಸನಿಯಾಗಿದ್ದು, ವಿವಿಧ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ, ಆತ ಮಾದಕ ವಸ್ತುಗಳ ಪ್ರಭಾವದಲ್ಲಿ ಕೊಲೆ ಮಾಡಿದ್ದಾನೆಯೇ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.