February 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನತೆಗೆ ಕಲುಷಿತ ನೀರು ಸರಬರಾಜು – MLC ಐವನ್ ಡಿಸೋಜ ವಾಗ್ದಾಳಿ

ಎಸ್.ಟಿ.ಪಿ.ಯಲ್ಲಿ ಜನರೇಟರ್ ವ್ಯವಸ್ಥೆಯೇ ಇಲ್ಲ

ಮಂಗಳೂರು: “ಮಹಾನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿದೆ. ಎಸ್.ಟಿ.ಪಿ.ಗಳು ನೀರಿನ ಮೂಲವನ್ನು ಸೇರುತ್ತಿದ್ದು ಕೊಳಚೆ ನೀರನ್ನೇ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಮೇಯರ್ ಅವರಿಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿ ಸದನದ ಬಾವಿಗಿಳಿದರೂ ಪ್ರಯೋಜನವಾಗಿಲ್ಲ. ಸತ್ಯಶೋಧನಾ ಸಮಿತಿ ರಚಿಸುವುದಕ್ಕೂ ಪಾಲಿಕೆಯ ಆಡಳಿತ ಮುಂದಾಗಿಲ್ಲ. ಹೀಗಾಗಿ ನಾವೇ ಸಮಿತಿ ರಚಿಸಿ ತನಿಖೆ ಮಾಡಿದ್ದೇವೆ. ಎಲ್ಲಿ ಎಸ್.ಟಿ.ಪಿ. ಕೊಳಚೆ ನೀರು ಸೇರುತ್ತಿದೆಯೋ ಅಲ್ಲಿ ಹೋಗಿ ಪ್ರತ್ಯಕ್ಷ ವರದಿ ತಯಾರಿಸಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಭೇಟಿಯ ಸಂದರ್ಭದಲ್ಲಿ ನೀಡಿದ್ದೇವೆ” ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ಈ ಬಗ್ಗೆ ತನಿಖೆ ಮಾಡುವಂತೆ ಪಾಲಿಕೆಯ ನೂತನ ಕಮಿಷನರ್ ಅವರಿಗೆ ಸತ್ಯಶೋಧನಾ ವರದಿ ನೀಡಿದ್ದೇವೆ. ನಾವು ದೂರು ಕೊಟ್ಟು ಸುಮ್ಮನೆ ಇರುವುದಿಲ್ಲ. ಅದು ನಿಜವೇ ಸುಳ್ಳೇ ಎಂಬ ಬಗ್ಗೆ ತನಿಖೆ ಮಾಡುತ್ತೇವೆ. ಪಚ್ಚನಾಡಿ, ಬಜಾಲ್, ಮಧ್ಯದಲ್ಲಿರುವ ಎಸ್.ಟಿ.ಪಿ.ಯನ್ನು ನಿರ್ವಹಣೆ ಮಾಡಲು ಎಂ.ಆರ್.ಪಿ.ಎಲ್. ಕಂಪೆನಿಗೆ ಒಪ್ಪಿಸಬೇಕಿದೆ. ಇದರಿಂದ ನಿರ್ವಹಣೆ ವೆಚ್ಚ ಕಡಿಮೆಯಾಗುವುದಲ್ಲದೆ ಮಂಗಳೂರಿನ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ. ಮಧ್ಯದಲ್ಲಿರುವ ಎಸ್.ಟಿ.ಪಿ.ಯಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಇದರಿಂದಾಗಿ ಅಲ್ಲಿಗೆ ಸಮೀಪದ ಖಂಡಿಗೆ ಎಂಬಲ್ಲಿ ತೋಡು, ಕೆರೆಯ ನೀರು ಕಲುಷಿತಗೊಂಡಿದೆ. ಇದರಿಂದಾಗಿ ವರ್ಷಕ್ಕೊಮ್ಮೆ ನಡೆಯುವ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಕಂಟಕ ಎದುರಾಗಿದೆ. ಕೆರೆಗೆ ಇಳಿದರೆ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಿಮ್ಮ ಆಡಳಿತದಲ್ಲಿ ಹೀಗಿರಲಿಲ್ವಾ ಅಂತಾ ಕೇಳ್ತಾರೆ. ಹೌದು ನಮ್ಮ ಕಾಲದಲ್ಲಿ ಕೆರೆಯ ನೀರಲ್ಲಿ ಬಟ್ಟೆ ತೊಳೆಯುತ್ತಿದ್ದರು. ಮೀನು ಹಿಡೀತಿದ್ದರು. ಈಗ ನೀರಿನ ಮೂಲಗಳಿಗೆ ಇಳಿಯುವ ಹಾಗೇ ಇಲ್ಲ. ಇದಕ್ಕೆ ಯಾರು ಹೊಣೆ?“ ಎಂದು ವಾಗ್ದಾಳಿ ನಡೆಸಿದರು.

“ಮಧ್ಯದ ಎಸ್.ಟಿ.ಪಿ. ಚಾಲನೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ಅಲ್ಲಿ 13 ಜನರಿಗೆ ನಿರ್ವಹಣೆಗೆ ಸಂಬಳ ನೀಡಲಾಗುತ್ತದೆ. ಆದರೆ ಯಾರೂ ಅಲ್ಲಿಲ್ಲ. ಕರೆಂಟ್ ಹೋದರೆ ಜನರೇಟರ್ ಇಲ್ಲ. ಒಂದು ಎಸ್.ಟಿ.ಪಿ.ಗೆ ವರ್ಷಕ್ಕೆ ಒಂದೂವರೆ ಕೋಟಿಯಂತೆ ಮೂರು ಎಸ್ ಟಿಪಿಗೆ ನಾಲ್ಕೂವರೆ ಕೋಟಿ ಹಣ ಪಡೆಯುತ್ತಾರೆ. ಇದೆಂತ ಸಾಧನೆ? ಇನ್ನಾದರೂ ಈ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಅನಿಲ್ ಕುಮಾರ್, ನವೀನ್ ಡಿಸೋಜ, ಅಶ್ರಫ್, ಲ್ಯಾನ್ಸ್ ಲಾಟ್ ಪಿಂಟೋ, ನವೀನ್ ಚಂದ್ರ ಆಳ್ವ, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

You may also like

News

ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಇವರ ಮಗಳು ವೆನ್ಯ ರೈ ನಾಯಕಿಯಾಗಿ ನಟಿಸಿದ ‘ಆರಾಟ’ ಕನ್ನಡ ಸಿನಿಮಾ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

ಬೆಂಗಳೂರಿನಲ್ಲಿ ಮಾರ್ಚ್ 1ರಿಂದ 8ರ ತನಕ ನಡೆಯಲಿರುವ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್
News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

You cannot copy content of this page