ನಾರ್ಶ ಉದ್ಯಮಿ ಮನೆಯಲ್ಲಿ ನಕಲಿ ED ಅಧಿಕಾರಿಗಳ ದರೋಡೆ – ಅಂತರಾಜ್ಯ ದರೋಡೆಕೋರ ಅನಿಲ್ ಫೆರ್ನಾಂಡಿಸ್ ಬಂಧನ

ಬಂಟ್ವಾಳ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ನಾರ್ಶ ಅವರ ಮನೆಯಲ್ಲಿ ಜನವರಿ 3ರಂದು ಶುಕ್ರವಾರ ರಾತ್ರಿ ED ಅಧಿಕಾರಿಗಳ ಹೆಸರಿನಲ್ಲಿ ದಾಳಿ ನಡೆಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೇರಳ ಮೂಲದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪೆರಿನಾಡ್, ತ್ರಿಕ್ಕಡವೂರು, ಮಾತಿಲಿಲ್ ಅಂಚೆ ವ್ಯಾಪ್ತಿಯ ಚಿರಕರ್ ಜಂಕ್ಷನ್, ಟ್ರಿನಿಟಿ ವಿಲ್ಲಾ ಯೇಸುದಾಸ್ ಲಿಯೋನ್ ಫೆರ್ನಾಂಡಿಸ್ ಮನೆಯ ನಿವಾಸಿ 49 ವರ್ಷ ಪ್ರಾಯದ ಅನಿಲ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.
ನಾರ್ಶ ಸುಲೈಮಾನ್ ಹಾಜಿ ಮನೆಯಲ್ಲಿ ಕಳೆದ ಜನವರಿ 3ರಂದು ಶುಕ್ರವಾರ ರಾತ್ರಿ ಸುಮಾರು 7 ಗಂಟೆ ಸಮಯಕ್ಕೆ 6 ಜನ ಅಪರಿಚಿತರ ತಂಡ ED ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 02/2025 ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಯತೀಶ್ ಎನ್. ಇವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಕಾರ್ಯಾಚರಣೆ ನಡೆಸಲಾಗಿತ್ತು. ಜನವರಿ 23ರಂದು ಗುರುವಾರ ಆರೋಪಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸಿದ KL02 BP1104 ನೊಂದಣಿ ಸಂಖ್ಯೆಯ ಎರ್ಟಿಗಾ ಕಾರು, 5 ಲಕ್ಷ ರೂಪಾಯಿ ನಗದು, ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ಸಂಖ್ಯೆಯ TN20 DB5517ನೇ ನಂಬರ್ ಪ್ಲೇಟ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ 11 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಿದೆ.