ಕಣ್ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಾಣಬಿರುಸುಗಳ ಪ್ರದರ್ಶನಗಳೊಂದಿಗೆ ಕರ್ನಾಟಕ ಕ್ರೀಡಾಕೂಟ 2025ಕ್ಕೆ ವೈಭವಪೂರ್ಣ ಸಮಾರೋಪ

ಪ್ರತಿ 3 ತಿಂಗಳಿಗೊಮ್ಮೆ ಪ್ರಾದೇಶಿಕ ಕ್ರೀಡಾಕೂಟಗಳು ಮತ್ತು ಜಿಲ್ಲಾಮಟ್ಟದಲ್ಲಿ ಆರು ತಿಂಗಳಿಗೊಮ್ಮೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ – ರಾಜ್ಯಪಾಲ ಗೆಹ್ಲೋಟ್
ಮುಂದಿನ ರಾಜ್ಯ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಆಯೋಜಿಸಿ – ಗೃಹ ಸಚಿವ ಡಾ. ಜಿ. ಪರಮೇಶ್ವರ್
ಪಿಯುಸಿ ಮಟ್ಟದಲ್ಲಿ ಕ್ರೀಡೆಯನ್ನು ಕಡ್ಡಾಯಗೊಳಿಸಿ – ಡಾ. ಕೆ. ಗೋವಿಂದರಾಜ್
ಉಡುಪಿ, ಜನವರಿ 23 : ಉಡುಪಿಯ ಅಜ್ಜರ್‌ಕಾಡ್ ಜಿಲ್ಲಾ ಕ್ರೀಡಾಗಣದಲ್ಲಿ ವೈಭವಪೂರ್ಣ ಸಮಾರೋಪ ಸಮಾರಂಭದೊoದಿಗೆ ಕರ್ನಾಟಕ ಕೀಡಾಕೂಟ 2025 ಮುಕ್ತಾಯವಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್, ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕ್ರಮವಾಗಿ ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ. ಗೋವಿಂದರಾಜ್ ಮತ್ತಿತರ ಗಣ್ಯರು ಹಾಜರಿದ್ದರು. ಪುರುಷರಲ್ಲಿ ಬೆಳಗಾವಿಯ ಝಫರ್ ಖಾನ್ 1016 ಅಂಕಗಳನ್ನು ಗಳಿಸಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಪಡೆದರೆ ಮಹಿಳೆಯರಲ್ಲಿ ಬೆಂಗಳೂರಿನ ನಿಯೋಲ್ ಆನ್ನಾ ಕರ್ನೆಲಿಯೊ 1005 ಅಂಕಗಳನ್ನು ಗಳಿಸಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಗೆದ್ದುಕೊಂಡರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರು “ನಮ್ಮ ಅಥ್ಲೀಟ್‌ಗಳ ಬದ್ಧತೆ ಮತ್ತು ಪರಿಶ್ರಮ ಶ್ಲಾಘನೀಯವಾಗಿದೆ. ಐಕ್ಯತೆ, ಶಿಸ್ತು ಮತ್ತು ಆರೋಗ್ಯಕರ ಸ್ಪರ್ಧೆಯ ಚೇತನವನ್ನು ಪೋಷಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಭಾಗವಹಿಸಿದವರು ಮತ್ತು ವಿಜೇತವನ್ನು ಅವರ ಗಮನಾರ್ಹ ಪ್ರದರ್ಶನಗಳಿಗಾಗಿ ನಾನು ಅಭಿನಂದಿಸುತ್ತೇನೆ. ನಮ್ಮ ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸಲು ಮತ್ತು ನೂತನ ಪ್ರತಿಭೆಗಳನ್ನು ಹುಡುಕುವುದಕ್ಕಾಗಿ ಪ್ರಾದೇಶಿಕ ಮಟ್ಟದಲ್ಲಿ ಮೂರು ತಿಂಗಳಿಗೆ ಒಮ್ಮೆ ಮತ್ತು ಜಿಲ್ಲಾಮಟ್ಟದಲ್ಲಿ ಆರು ತಿಂಗಳಿಗೊಮ್ಮೆ ಇಂತಹ ಕ್ರೀಡಾಕೂಟಗಳನ್ನು ನಡೆಸುವಂತೆ ನಾನು ಡಾ. ಗೋವಿಂದರಾಜ್ ಅವರನ್ನು ಕೋರುತ್ತೇನೆ. ಆಗ ಈ ಅಥ್ಲೀಟ್‌ಗಳು ಮುಂಬರುವ ರಾಜ್ಯ ಕ್ರೀಡಾಕೂಟಗಳಲ್ಲಿ ಹೆಚ್ಚು ಉತ್ತಮವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ ರಾಷ್ಟೀಯ ಮತ್ತು ಒಲಂಪಿಕ್ ಕ್ರೀಡೆಗಳಲ್ಲಿಯೂ ಅವರು ಭಾರತಕ್ಕೆ ಗೌರವವನ್ನು ತರಬಹುದಾಗಿರುತ್ತದೆ” ಎಂದರು.
ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಾತನಾಡಿ, “ಕ್ರೀಡೆಗಳ ಕಡೆಗೆ ಗಮನಹರಿಸುವುದರಿಂದ ಅಥವ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಕ್ರೀಡೆಗೆ ಯಾವುದೇ ಬಣ್ಣ, ಜಾತಿ, ಕುಲ ಅಥವ ಧರ್ಮ ಇರುವುದಿಲ್ಲ. ವಾಸ್ತವವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುವುದರೊಂದಿಗೆ ಹೆಚ್ಚು ಉತ್ತಮವಾದ ಸಮಾಜವನ್ನು ನಿರ್ಮಿಸಲು ಪೋಷಕರು ನೆರವಾಗಬಹುದು. ಇದರಿಂದ ಮಾದಕ ವಸ್ತುಗಳ ಬಳಕೆ ಮತ್ತು ಇತರೆ ಕಾನೂನುಬಾಹಿರ ಚಟುವಟಿಕೆಗಳ ಕಡೆಗೆ ಯುವಜನರು ಗಮನಹರಿಸುವುದನ್ನು ತಡೆಯಬಹುದಾಗಿದೆ. ಕರ್ನಾಟಕ ಕ್ರೀಡಾಕೂಟವನ್ನು ಈ ವರ್ಷ ಮಂಗಳೂರು ಮತ್ತು ಉಡುಪಿಗಳಲ್ಲಿ ಆಯೋಜಿಸಲಾಗಿದ್ದು, ಮುಂದಿನ ವರ್ಷ ಈ ಕೂಟವನ್ನು ತುಮಕೂರಿನಲ್ಲಿ ನಡೆಸಬೇಕೆಂದು ನಾನು ಡಾ. ಗೋವಿಂದರಾಜು ಅವರನ್ನು ಕೋರುತ್ತೇನೆ. ಅಲ್ಲಿ ಅಂತಾರಾಷ್ಟೀಯ ಮಟ್ಟಗಳಿಗೆ ಹೋಲಿಸಬಹುದಾದಂತಹ ಸಂಪೂರ್ಣವಾಗಿ ಸಜ್ಜಾದ ಸೌಲಭ್ಯಗಳಿರುವ ಕ್ರೀಡಾಂಗಣವನ್ನು ನಾವು ಹೊಂದಿದ್ದೇವೆ. ಕರ್ನಾಟಕ ವಿಶ್ವಮಟ್ಟದ ಅಥ್ಲೀಟ್‌ಗಳನ್ನು ಉತ್ಪಾದಿಸಲು ನೆರವಾಗುವಂತೆ ಕ್ರೀಡೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಇಚ್ಛೆಯನ್ನು ರಾಜ್ಯಸರ್ಕಾರ ಹೊಂದಿದೆ” ಎಂದರು.
ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಡಾ. ಕೆ. ಗೋವಿಂದರಾಜ್ ಅವರು ಮಾತನಾಡಿ, “ಕರ್ನಾಟಕ ಕ್ರೀಡಾಕೂಟ 2025 ಅಪಾರ ಯಶಸ್ಸು ಗಳಿಸಿದೆ. ಮಂಗಳೂರು ಮತ್ತು ಉಡುಪಿಯ ಅಧಿಕಾರಿಗಳು, ಸ್ಥಳೀಯ ಪೊಲೀಸರು, ಸ್ವಯಂಸೇವಕರು ಮತ್ತು ಅಥ್ಲೀಟ್‌ಗಳ ಸಾಂಘಿಕ ಪ್ರಯತ್ನಕ್ಕೆ ವಂದನೆ ಸಲ್ಲಿಸುತ್ತೇನೆ. ಕರ್ನಾಟಕ ಕ್ರೀಡಾಕೂಟವು ಕ್ರೀಡಾ ಮನೋಭಾವದ ಸಂಭ್ರಮಾಚರಣೆಯಾಗಿದೆಯಲ್ಲದೆ, ಇಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು ನಡೆದಿದ್ದು, ಜೊತೆಗೆ ಅಸಾಧಾರಣ ಅಥ್ಲೀಟ್‌ಗಳನ್ನು ಗುರುತಿಸಿ ಗೌರವಿಸಲಾಗಿದೆ. ನಮ್ಮ ರಾಜ್ಯದ ಅತ್ಯುತ್ತಮ ಕ್ರೀಡಾ ಪ್ರತಿಭೆಗಳನ್ನು ಈ ಕಾರ್ಯಕ್ರಮ ಪ್ರದರ್ಶಿಸಿದೆ. ಜೊತೆಗೆ ಕರ್ನಾಟಕದಲ್ಲಿ ಭವಿಷ್ಯದ ಕ್ರೀಡಾ ಕಾರ್ಯಕ್ರಮಗಳಿಗೆ ವಿಶೇಷ ಮಾನದಂಡವನ್ನು ಸ್ಥಾಪಿಸಿದೆ. ಹೆಚ್ಚಿನ ಅಥ್ಲೀಟ್‌ಗಳು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಲು ಪಿಯುಸಿ ಮಟ್ಟದಲ್ಲಿ ಕೂಡ ಕ್ರೀಡೆಯನ್ನು ಕಡ್ಡಾಯ ಮಾಡುವಂತೆ ಶಿಕ್ಷಣ ಸಚಿವರಲ್ಲಿ ನಾನು ಮನವಿ ಮಾಡಿಕೊಂಡಿದ್ದೇನೆ. ಪ್ರಸ್ತುತ 10ನೇ ತರಗತಿಯವರೆಗೆ ಮಾತ್ರ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ” ಎಂದರು.
ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಉಡುಪಿ ಮತ್ತು ಮಂಗಳೂರು ಜಿಲ್ಲಾ ಆಡಳಿತಗಳು ಆಯೋಜಿಸಿದ ಕ್ರೀಡಾ ಕಾರ್ಯಕ್ರಮವಾದ ಕರ್ನಾಟಕ ಕ್ರೀಡಾಕೂಟ 2025ರಲ್ಲಿ ಕಯಾಕಿಂಗ್, ಕ್ಯಾನೋಯಿಂಗ್, ಆರ್ಚರಿ, ಸೈಕ್ಲಿಂಗ್, ರೆಸ್ಲಿಂಗ್ (ಕುಸ್ತಿ), ಬಾಕ್ಸಿಂಗ್, ಹಾಕೀ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಕಬಡ್ಡಿ, ಜೂಡೊ ಸೇರಿದಂತೆ ವಿಸ್ತಾರವಾದ ಶ್ರೇಣಿಯ ಆಟಗಳನ್ನು ಆಯೋಜಿಸಲಾಯಿತು. ವಿಜೇತರಿಗೆ ಪದಕಗಳು ಮತ್ತು ಪ್ರಮಾಣಪತ್ರಗಳ ವಿತರಣೆ ನಂತರ ನಯನಮನೋಹರವಾದ ಹಾಗೂ ಬಾನಂಗಳವನ್ನು ಬೆಳಗಿಸಿದ ಬಾಣಬಿರುಸುಗಳ ಪ್ರದರ್ಶನಗಳೊಂದಿಗೆ ಸಮಾರೋಪ ಸಮಾರಂಭ ಮುಕ್ತಾಯವಾಯಿತು.
ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕೃತಿಕ ಸಂಭ್ರಮ ಸಂಜೆಯ ವಿಶೇಷವಾಗಿತ್ತು.