ಶ್ರೀಲಂಕಾ ಮೈಕ್ರೋ ಫೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಯನ

ಬೆಳ್ತಂಗಡಿ : ಗ್ರಾಮೀಣ ಭಾರತವೇ ನೈಜ ಭಾರತದ ಪ್ರತಿಬಿಂಬ, ಆದ್ದರಿಂದಲೇ ಮಹಾತ್ಮಾ ಗಾಂಧೀಜಿ ಗ್ರಾಮ ರಾಜ್ಯದ ಪ್ರಗತಿ ಮೂಲಕ ರಾಮರಾಜ್ಯದ ಕನಸು ಕಂಡಿದ್ದರು. ಮಾನವ ಸಂಪನ್ಮೂಲ, ನೆಲ, ಜಲ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸದ್ಭಳಕೆಯೊಂದಿಗೆ ಹಳ್ಳಿಗಳ ಪ್ರಗತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು 1982ರಲ್ಲಿ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಿಸಿದ್ದು, ಇದು ಯಶಸ್ವಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ ಧರ್ಮಸ್ಥಳಕ್ಕೆ ಆಗಮಿಸಿದ ಲಂಕಾ ಮೈಕ್ರೋ ಫೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ನ 38 ಸದಸ್ಯರಿಗೆ ಜನವರಿ 23ರಂದು ಗುರುವಾರ ಮಾಹಿತಿ ನೀಡಿದರು. ಅಭಿವೃದ್ಧಿ ಮತ್ತು ಪ್ರಗತಿ ಸಾಧಿಸಲು ಎಲ್ಲರಿಗೂ ಸಮಾನ ಅವಕಾಶವಿದೆ. ಗ್ರಾಮಾಭಿವೃದ್ಧಿ ಯೋಜನೆ ಫಲಾನುಭವಿಗಳು ಪ್ರಗತಿಯ ಪಾಲುದಾರರು, ಜನರ ಸಕ್ರಿಯ ಸಹಕಾರ ಮತ್ತು ಸಹಭಾಗಿತ್ವದಿಂದ ಯೋಜನೆ ಯಶಸ್ವಿಯಾಗಿದೆ. ಜನಸಾಮಾನ್ಯರ ಬೇಡಿಕೆಗಳಿಗೆ ಅನುಗುಣವಾಗಿ ಕಿರು ಆರ್ಥಿಕ ಯೋಜನೆಯನ್ನು ಸ್ವ ಸಹಾಯ ಸಂಘಗಳ ಮೂಲಕ ಬಿ.ಸಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಲಂಕಾ ಮೈಕ್ರೋ ಫೈನಾನ್ಸ್ ಪ್ರಾಕ್ಟೀಶನರ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ಗುಣವರ್ಧನ, ಡೆಗಿರಿ ದುಲಾಂಗ ಚಮೀರ, ಮಿಥಿರಾಮ್ ಚಾಮಿಕ ಮಲ್ ಕಾಂತಿ ರಾಣಸಿಂಘ, ಕನಗರತ್ನಂ ಲಕ್ಷ್ಮಣ್ ಈರಜ್, ಎಸ್.ಪಿ. ಬೆನಿತಾಸ್, ರಾಮಸಾಮಿ ರಾಜೇಶ್ ಖನ್ನ ಮತ್ತಿತರರು ಧರ್ಮಸ್ಥಳದ ಶಿಸ್ತು, ಆಡಳಿತ ವ್ಯವಸ್ಥೆ, ಆತಿಥ್ಯ, ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶೀಲಂಕಾದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ. ಮಾದರಿ ಅನುಷ್ಠಾನಕ್ಕೆ ಧರ್ಮಾಧಿಕಾರಿ ಡಾ. ಹೆಗ್ಗಡೆ ಒಪ್ಪಿಗೆ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಯೋಜನೆ ಕಾರ್ಯವೈಖರಿಯ ಪಕ್ಷಿನೋಟ ನೀಡಿದರು.