ಕೋಟೆಕಾರು ವ್ಯವಸಾಯ ಬ್ಯಾಂಕ್ ದರೋಡೆ ಪ್ರಕರಣ – ನಾಲ್ವರ ಬಂಧನ

ಆರೋಪಿಗಳಿಂದ 18.314 ಕೆಜಿ ಚಿನ್ನ ವಶ
ಮಂಗಳೂರು: ತಲಪಾಡಿಯ ಕೋಟೇಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ಎನ್) ನಲ್ಲಿ ಜನವರಿ 17ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳು ನಾಡಿನ ಕನ್ನನ್ ಮಣಿ (36), ಮುರುಗಂಡಿ ದೇವರ್ (36), ಯೋಸುವ ರಾಜೇಂದ್ರನ್ (35) ಮತ್ತು ಎಂ. ಶಣ್ಮುಗ ಸುಂದರಂ (65) ಎಂದು ಗುರುತಿಸಲಾಗಿದೆ.
ಬಂಧಿತರಿಂದ 18.314 ಕೆಜಿ ಚಿನ್ನ, ಎರಡು ಪಿಸ್ತೂಲ್‌ಗಳು, ಮೂರು ಸಜೀವ ಗುಂಡುಗಳು, ಎರಡು ಕೊಡಲಿಗಳು, ಪರಾರಿಯಾದ ಫಿಯೆಟ್ ಕಾರು ಮತ್ತು ನಕಲಿ ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಇಂದು ಜನವರಿ 27ರಂದು ಸೋಮವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಲ್ವರು ಶಸ್ತ್ರಸಜ್ಜಿತ ಮತ್ತು ಮುಖವಾಡ ಧರಿಸಿದ ವ್ಯಕ್ತಿಗಳು ಬ್ಯಾಂಕಿಗೆ ನುಗ್ಗಿ, ಸಿಬ್ಬಂದಿಯನ್ನು ಭಯಭೀತಗೊಳಿಸಿ ದೊಡ್ಡ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದರು. ಜನವರಿ 17ರಂದು ಮಧ್ಯಾಹ್ನ 1:00 ರಿಂದ 1:20 ರ ನಡುವೆ ನಡೆದ ಈ ಘಟನೆಯು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು.
ಪತ್ರಿಕಾ ಗೋಷ್ಠಿಯಲ್ಲಿ ಡಿಸಿಪಿ ಸಿದ್ದಾರ್ಥ್ ಗೋಯಲ್, ರವಿಶಂಕರ್, ಎಸಿಪಿ ಧನ್ಯಾ ನಾಯಕ್, ಮನೋಜ್ ನಾಯ್ಕ್ ಉಪಸ್ಥಿತರಿದ್ದರು.