ರಸ್ತೆ ಬದಿಯಲ್ಲಿರುವ ಅಪಾಯಕಾರಿ ಒಣ ಮರ ತೆರವುಗೊಳಿಸುವಂತೆ ಜೆರಾರ್ಡ್ ಟವರ್ಸ್ ರವರಿಂದ ವಿನೂತನ ಪ್ರತಿಭಟನೆ

ಮರ ಬಿದ್ದು ಸಾರ್ವಜನಿಕರಿಗೆ ಆಗುವ ಅನಾಹುತಗಳ ಮೊದಲು ತೆರವು ಮಾಡುವಂತೆ ಅಧಿಕಾರಿಗಳಿಗೆ ಆಗ್ರಹ
ಏಕಾಂಕಿಯಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆದ ಸಾಮಾಜಿಕ ಕಾರ್ಯಕರ್ತ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕದ್ರಿ ಶಿವಭಾಗ್ ಬಸ್ ಸ್ಟ್ಯಾಂಡ್ ಬಳಿ ಅಪಾಯಕಾರಿ ಸ್ಥಿತಿಯಲ್ಲಿರುವ ಒಣ ಮರ ತೆರವುಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರಾದ ಜೆರಾರ್ಡ್ ಟವರ್ಸ್ ರವರು ವಿನೂನತ ರೀತಿಯಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ ಹಾಗೂ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಲವು ಬಾರಿ ಈ ಮರವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಆಗುವ ಅನಾಹುತಗಳಿಂದ ರಕ್ಷಿಸುವಂತೆ ಲಿಖಿತವಾಗಿ ದೂರನ್ನು ನೀಡಿದರೂ, ವಿನಂತಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇಂದು ಜನವರಿ 28ರಂದು ಮಂಗಳವಾರ ವಿನೂತನ ಪ್ರತಿಭಟನೆಯನ್ನು ಮಾಡಿ ಮಂಗಳೂರ್ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ಒಣ ಮರ ಬಿದ್ದು ಜನರಿಗಾಗಲೀ, ಯಾವುದೇ ವಾಹನಗಳಿಗಾಗಲೀ ನಷ್ಟವುಂಟಾದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹೊಣೆ ಮಾಡಬೇಕೆಂದು ಪ್ರತಿಭಟನೆಯ ಸಂದಭದಲ್ಲಿ ಆಗ್ರಹಿಸಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಅನೇಕ ಅನಾಹುತಗಳು ಸಂಭವಿಸಿ ನಷ್ಟ ಅನುಭವಿಸಿದರೂ ಈ ಒಣ ಮರವನ್ನು ತೆಗೆಯದೇ ದಿನ ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಕಾರ್ಪೊರೇಟರ್, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಣ್ಣು ಕಾಣುವುದಿಲ್ಲವೇ? ಎಂಬ ಪ್ರಶ್ನೆಯನ್ನು ಮಾಧ್ಯಮದ ಮುಖಾಂತರ ಕೇಳಿದರು.
ಈ ಒಣ ಮರವನ್ನು ಕೂಡಲೇ ತೆಗೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆಯನ್ನು ಮಾಡಿ ಎಚ್ಚರಿಸುತ್ತೇನೆ ಎಂದು ಖಡ್ಡಕ್ಕಾಗಿ ಹೇಳಿದರು.