ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಡಾ| ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 30ನೇ ವರ್ಷದ ರಾಜ್ಯಮಟ್ಟದ ನೈತಿಕ ಮೌಲ್ಯಾಧಾರಿತ ಪುಸ್ತಕ ಸ್ಪರ್ಧೆಗಳ ಪುರಸ್ಕಾರ

ಬೆಳ್ತಂಗಡಿ : ಶಾಂತಿವನ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಯೋಗದಲ್ಲಿ 30ನೇ ವರ್ಷದ ರಾಜ್ಯಮಟ್ಟದ ಜ್ಞಾನ ದರ್ಶನಿ ಮತ್ತು ಜ್ಞಾನ ವರ್ಷಿಣಿ (ಪುಷ್ಪ 53 ಮತ್ತು 54) ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ಪುರಸ್ಕಾರ ಸಮಾರಂಭವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜನವರಿ 28ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ಶುಭಾರ್ಶೀವಾದ ನೀಡಿದರು. ಗೀತೆ ರಚನೆಕಾರ, ಸಂಗೀತ ನಿರ್ದೇಶಕ, ನಟ ವಿ. ಮನೋಹರ್ ಶುಭಾಶಂಸನೆಗೈದರು. ವೇದಿಕೆಯಲ್ಲಿ ಶಾಂತಿವನ ಟ್ರಸ್ಟಿಗಳಾದ ಡಾ. ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಿಂಚನಾ ಎಸ್. ಆಚಾರಿ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ, ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಾದ ಅಮಿತ್ ಎಸ್.ಡಿ.ಎಂ., ಭೂಮಿಕಾ ರಾವ್ ಪಡುಬಿದ್ರೆ, ಕುಮಾರಿ ಸವಿ ಶೆಟ್ಟಿ ಮುನಿಯಾಲು, ಪ್ರಣತಿ ರಾವ್ ಉಡುಪಿ ಇವರು ಭಾಷಣ, ಶ್ಲೋಕ ಕಂಠಪಾಠ, ಶ್ಲೋಕವನ್ನು ಸಭೆಯಲ್ಲಿ ವಾಚಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವಿತ್ತರು. ಶಿಕ್ಷಕ ರಾಘವೇಂದ್ರ ರಾವ್ ಪಡುಬಿದ್ರೆ ಹಾಗೂ ಯೋಗ ಸಂಘಟಕ ಅಶೋಕ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ಸಹಕರಿಸಿದರು.