ವಿಮಾ ಹಣ ಪಡೆಯಲು ತಂಗಿಯನ್ನೇ ಕೊಂದ ಅಣ್ಣ – ಪ್ರಕರಣ ಮುಚ್ಚಿಹಾಕಲು ಮಾಡಿದ “ಆಕ್ಸಿಡೆಂಟ್” ನಾಟಕ ಬಯಲು

ಒಂಗೋಲೆ : ಒಂದು ಕೋಟಿ ರೂಪಾಯಿ ವಿಮಾ ಹಣ ಪಡೆಯಲು ಸಹೋದರನೇ ಸಹೋದರಿಯನ್ನು ಕೊಂದು ಅಪಘಾತ ಎಂದು ಬಿಂಬಿಸಲು ಹೊರಟಿದ್ದ ಪ್ರಕರಣವನ್ನು ಆಂಧ್ರಪ್ರದೇಶದ ಪ್ರಕಾಶಂ ಪೊಲೀಸರು ಬೇಧಿಸಿದ್ದಾರೆ. ಒಂಗೋಲೆಯನ್ನುವುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂದು ನಗರವಾಗಿದೆ.
ತನ್ನ ಸಹೋದರಿ ಮಾಲಪತಿ ಸಂಧ್ಯಾ ಅವರನ್ನು ಕೊಲೆ ಮಾಡಿದ್ದ 30 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಮಾಲಪತಿ ಅಶೋಕ್ ಕುಮಾರ್ ರೆಡ್ಡಿಯನ್ನು ಆಂಧ್ರಪ್ರದೇಶದ ಪ್ರಕಾಶಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಅಪರಾಧವನ್ನು ಮುಚ್ಚಿಹಾಕಲು ರಸ್ತೆ ಅಪಘಾತ ಎಂದು ಬಿಂಬಿಸಿದ್ದನ್ನು ಪೊದಿಲಿ ಸರ್ಕಲ್ ಇನ್ಸ್ ಪೆಕ್ಟರ್ ಟಿ. ವೆಂಕಟೇಶ್ವರಲು ಬಹಿರಂಗಪಡಿಸಿದ್ದಾರೆ.
ಸಾಲದ ಹೊರೆಯಿಂದ ಬಳಲುತ್ತಿದ್ದ ಅಶೋಕ್ ರೆಡ್ಡಿ, 2024 ಫೆಬ್ರವರಿ 4ರಂದು ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ 24ವರ್ಷ ಪ್ರಾಯದ ಸಂಧ್ಯಾರವರನ್ನು ಒಂಗೋಲ್‌ಗೆ ಕರೆದೊಯ್ದಿದ್ದರು. ಆಕೆಗೆ ನಿದ್ರೆ ಮಾತ್ರೆಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಪೊಡಿಲಿ ಪಟ್ಟಣದ ಬಳಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮರೆಮಾಚಲು, ಅವನು ತನ್ನ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ್ದ. ಬಳಿಕ ಸಂಧ್ಯಾ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದ. ಮರುದಿನ ಅವರ ತಂದೆ ಮಾಲಪತಿ ತಿರುಪತಯ್ಯ ಪೊಡಿಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿತ್ತು.
ಪೋಲೀಸರ ತನಿಖೆಯಲ್ಲಿ ಫೋರೆನ್ಸಿಕ್ ವರದಿಯಲ್ಲಿನ ವ್ಯತ್ಯಾಸಗಳು ಬೆಳಕಿಗೆ ಬಂದಿವೆ. ಅಶೋಕ್ ರೆಡ್ಡಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಯೂಸುಫ್ ಜೊತೆಗೂಡಿ ನಿದ್ದೆ ಮಾತ್ರೆಗಳ ಸಾಕ್ಷ್ಯವನ್ನು ಮರೆಮಾಚಲು ಒಳಾಂಗಗಳ ಮಾದರಿಗಳನ್ನು ತಿರುಚಲು ಸಂಚು ರೂಪಿಸಿದ್ದ. ವಿಮಾ ದಾಖಲೆಗಳು ಮತ್ತು ಫೋರೆನ್ಸಿಕ್ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಅಶೋಕ್ ರೆಡ್ಡಿಯನ್ನು ಬಂಧಿಸಿದ್ದಾರೆ. ಯೂಸುಫ್ ಸೇರಿದಂತೆ ಇಬ್ಬರು ಸಹಚರರು ತಲೆಮರೆಸಿಕೊಂಡಿದ್ದಾರೆ.
ಪಿತೂರಿಯನ್ನು ನಾವು ಬಹಿರಂಗಪಡಿಸಿದ್ದೇವೆ ಮತ್ತು ಉಳಿದ ಶಂಕಿತರನ್ನು ಬಂಧಿಸಲು ಬಲೆ ಬೀಸಿದ್ದೇವೆ ಎಂದು ಸಿಐ ಹೇಳಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.