ಫೆಬ್ರವರಿ 9 ರಿಂದ 13ರ ತನಕ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ -ಭರದಿಂದ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವವು ಫೆಬ್ರವರಿ 9 ರಿಂದ 13ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇದರ ಅಂಗವಾಗಿ ದೈವಸ್ಥಾನದಲ್ಲಿ ವಿವಿಧ ಶಾಶ್ವತ ಕಾಮಗಾರಿಗಳು ಭರದಿಂದ ಸಾಗುತ್ತಿದೆ.
ಭಕ್ತರ ಪಾಲಿನ ಕಾರಣಿಕ ಕ್ಷೇತ್ರವಾಗಿ, ಅಜಿಲ ಸೀಮೆಯಲ್ಲಿ ಕಲಿಯುಗದ ಕೈಲಾಸವೆಂದೇ ಹೆಗ್ಗಳಿಕೆ ಪಡೆದಿರುವ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಜೈನ ವಂಶದವರು ಸುಮಾರು 600 ವರ್ಷಗಳ ಕಾಲ ಆರಾಧನೆ ಮಾಡಿಕೊಂಡು ಬಂದ ಇತಿಹಾಸವಿದೆ. ಯಾವುದೋ ಕಾರಣದಿಂದಾಗಿ ದೈವಾರಾಧನೆಯು ನಿಂತುಹೋಗಿದ್ದ ಸಮಯದಲ್ಲಿ ಕಡಂಬು ಗುತ್ತಿನ ಕೀರ್ತಿ ಶೇಷ ಧನ್ಯ ಕುಮಾರ್ ಕಡಂಬು ಅವರಿಗೆ ಅಲ್ಲಿ ದೈವದ ದಂಬೆಕಲ್ಲು ಮತ್ತು ಬಲಿಕಲ್ಲುಗಳು ಮಾತ್ರ ಕಂಡುಬಂದ ಸನ್ನಿಧಿಯಲ್ಲಿ ವೈದಿಕ ವಿಧಿಯುಕ್ತವಾಗಿ ದೈವಸ್ಥಾನದ ನಿರ್ಮಾಣ ಪ್ರತಿಷ್ಠ ಕಾರ್ಯಗಳನ್ನು ನೆರವೇರಿಸಿದರು. 1978 ರಿಂದಲೂ ಪ್ರತೀ ಕುಂಭ ಸಂಕ್ರಮಣದಂದು ವೈಭವದ ಜಾತ್ರಾ ಮಹೋತ್ಸವ ದೈವದ ನೇಮ ನಿಯಮಾದಿಗಳನ್ನು ನಡೆಸಿಕೊಂಡು ಬರುತ್ತಿದ್ದರು.
ಅವರು ವಿಧಿವಶರಾದ ಬಳಿಕ ಅವರ ಸುಪುತ್ರರಾದ ಸುಖೇಶ್ ಕುಮಾರ್ ಮತ್ತು ಸಹೋದರ ಮುಂದುವರಿಸಿಕೊಂಡು ಬರುತ್ತಿದ್ದು ದೈವಸ್ಥಾನದ ಶಿಲಾಮಯ ಮಾಡ, ಹುಲಿಬಂಡಿ, ಧ್ವಜಸ್ತಂಭ ಹಾಗೂ ಮುಂಭಾಗದ ಗೋಪುರ ನಿರ್ಮಾಣಗೊಂಡು 2012ರಲ್ಲಿ ಮಹಾ ಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವ ನೆರವೇರಿತು. ಈ ಕಾರಣಿಕ ಕ್ಷೇತ್ರದ ಬ್ರಹ್ಮಕುಂಭಾಭಿಷೇಕವು ಇದೇ ಫೆಬ್ರವರಿ 9 ರಿಂದ 13ರ ತನಕ ನಡೆಯಲಿದ್ದು, ಇದರ ಅಂಗವಾಗಿ ದೈವಸ್ಥಾನದಲ್ಲಿ ಶಾಶ್ವತವಾದ ಮೇಲ್ಚಾವಣಿ, ಈಗ ಇರುವ ಗೋಪುರಕ್ಕೆ ಹಂಚು ಹೊದಿಕೆ, ದೇವರ ಪ್ರಸಾದ ಕೊಠಡಿ ನಿರ್ಮಾಣ, ಕಾರ್ಯಾಲಯ, ಹೊಸದಾಗಿ ಬಾವಿ ರಚನೆ, ದೈವಸ್ಥಾನದ ಸುತ್ತ ನೆಲಹಾಸು, ಭಕ್ತರ ಅನುಕೂಲಕ್ಕಾಗಿ ಅನ್ನ ಛತ್ರ ಮೊದಲಾದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ. ಇದಕ್ಕೆ ಸುಮಾರು ರೂಪಾಯಿ 1 ಕೋಟಿಗೂ ಮಿಕ್ಕಿ ವೆಚ್ಚವಾಗುವ ಸಾಧ್ಯತೆ ಇದೆ. ಇಷ್ಟು ಮೊತ್ತದ ಕಾಮಗಾರಿಗಳು ನಡೆಯಲಿರುವುದರಿಂದ ಭಕ್ತರು, ಊರ ಹಾಗೂ ಪರವೂರಿನ ದಾನಿಗಳು ಈ ಮಹತ್ಕಾರ್ಯಕ್ಕೆ ಕೈ ಜೋಡಿಸಬೇಕಾಗಿದೆ.
ಈಗಾಗಲೇ ಬ್ರಹ್ಮಕುಂಭಾಭಿಷೇಕ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ಬರೋಡ ನವಶಕ್ತಿ, ಕಾರ್ಯಾಧ್ಯಕ್ಷರಾಗಿ ಸುಮಂತ್ ಕುಮಾರ್ ಜೈನ್ ಎಕ್ಸೆಲ್, ಪ್ರಧಾನ ಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ ಸೇರಿದಂತೆ ಮುಖ್ಯ ಸಮಿತಿ, ವಿವಿಧ ಉಪಸಮಿತಿಯವರು, ಕುವೆಟ್ಟು, ಓಡಿಲ್ನಾಳ, ಪಡಂಗಡಿ, ಸೋಣಂದೂರು, ಮೇಲಂತಬೆಟ್ಟು ಗ್ರಾಮಸ್ಥರು ಊರ ಹಾಗೂ ಪರವೂರ ಭಕ್ತರ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.