March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೇವಲ 35ರೂಪಾಯಿಗಾಗಿ ನಡೆದ ಕೊಲೆ – 57ವರ್ಷಗಳ ಬಳಿಕ ಆರೋಪಿಯ ಬಂಧನ

ರಾಜಸ್ಥಾನ: ಅಪರಾಧಿಗಳು ಕಾನೂನಿನ ಕೈಯಿಂದ ಎಷ್ಟೇ ಬಚಾವಾಗಲೂ ಯತ್ನಿಸಿದರೂ, ಅಪರಾಧ ಕೃತ್ಯದಲ್ಲಿ ತೊಡಗಿದವರು ಒಂದಲ್ಲಾ ಒಂದು ದಿನ ಕಾನೂನು ಅವರನ್ನು ಹಿಡಿದೇ ಹಿಡಿಯುತ್ತದೆ. ಅದೇ ರೀತಿ ರಾಜಸ್ಥಾನ ಪೊಲೀಸರು 57 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. 1967ರಿಂದಲೂ ತಲೆಮರೆಸಿಕೊಂಡಿದ್ದ ಈ ಆರೋಪಿ, ಹೊಸ ಗುರುತು ಹಾಗೂ ಬದಲಾದ ವೇಷದೊಂದಿಗೆ ರಾಜಧಾನಿ ನವದೆಹಲಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಕೋಟಾದಿಂದ ಪರಾಯಿಯಾಗಿ ದೆಹಲಿಯಲ್ಲಿ ನೆಲೆಸಿದ್ದ: ರಾಜಸ್ಥಾನದ ಕೋಟಾ ಜಿಲ್ಲೆಯ ಸುಕೇತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವತ್ತೇಳು ವರ್ಷಗಳ ಹಿಂದೆ ಅಂದರೆ, 1967ರಲ್ಲಿ ಕೊಲೆಯೊಂದು ನಡೆದಿತ್ತು. ಕೊಲೆಯ ಆರೋಪಿ ಪ್ರಭು ಲಾಲ್, ಆಗ ಕೇವಲ 15 ವರ್ಷದವನಾಗಿದ್ದ. ಕೊಲೆಯ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಜಸ್ಥಾನವನ್ನು ತೊರೆದು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ. ಜೊತೆಗೆ ಅಲ್ಲಿ ತನ್ನ ಗುರುತನ್ನು ಬದಲಾಯಿಸಿಕೊಂಡಿದ್ದ. ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ನೆಲೆಸಿದ ಪ್ರಭುಲಾಲ್‌, ಮನೆ ನಿರ್ಮಾಣ ಕೆಲಸದ ಉದ್ಯೋಗ ಆರಂಭಿಸಿದ್ದು ಮಾತ್ರವಲ್ಲದೆ, ಸರ್ಕಾರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನೂ ಆಗಿದ್ದ.

35 ರೂಪಾಯಿಯ ಜಗಳಕ್ಕೆ ಕೊಲೆ: ಸುಕೇತ್ ಠಾಣಾಧಿಕಾರಿ ಚೋಟು ಲಾಲ್ ಪ್ರಕಾರ, ಪ್ರಭು ಲಾಲ್ 1967ರಲ್ಲಿ ಕೇವಲ 35 ರೂಪಾಯಿ ಹಣದ ಸಲುವಾಗಿ ಭವಾನ ದರ್ಜಿ ಎಂಬ ವ್ಯಕ್ತಿಯನ್ನು ಕೊಲೆಗೈದಿದ್ದ. ಈತ ಭವಾನ ದರ್ಜಿಗೆ 35 ರೂಪಾಯಿಗೆ ತನ್ನ ಸೈಕಲ್‌ಅನ್ನು ಮಾರಿದ್ದ. ಆದರೆ ಕೆಲ ದಿನಗಳ ಬಳಿಕ ಹಣ ಹಿಂದಿರುಗಿಸಿ ಸೈಕಲ್ ಅನ್ನು ಮರಳಿ ಕೇಳಿದ್ದ. ಪರಿಣಾಮ ಇಬ್ಬರ ನಡುವೆ ಜಗಳ ನಡೆದು ಕೋಪದಲ್ಲಿ ಪ್ರಭು ಲಾಲ್, ಭವಾನ ದರ್ಜಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದ.

57 ವರ್ಷದ ಬಳಿಕ ಸಿಕ್ಕಿದ್ದು ಹೇಗೆ: ರಾಜಸ್ಥಾನ ಪೊಲೀಸರು ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಪೊಲೀಸರಿಗೆ ಪ್ರಭು ಲಾಲ್ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಪೊಲೀಸರು ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಹೊಸ ಹೆಸರು, ಹೊಸ ಗುರುತು: ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಭು ಲಾಲ್ ತನ್ನ ಹೆಸರನ್ನು ಮಾತ್ರ ಬದಲಾಯಿಸಿದ್ದು ಮಾತ್ರವಲ್ಲ ತನ್ನ ಹಳ್ಳಿಗೆ ಎಂದಿಗೂ ಹಿಂತಿರುಗಿರಲಿಲ್ಲ. ಯಾರಿಗೂ ತನ್ನ ಬಗ್ಗೆ ಮಾಹಿತಿ ಸಿಗದಂತೆ ಯಾವುದೇ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ 72ನೇ ವಯಸ್ಸಿನಲ್ಲಿ ಅವನು ಸಿಕ್ಕಿಬಿದ್ದ. ಈಗ ಅವನನ್ನು ರಾಜಸ್ಥಾನಕ್ಕೆ ಕರೆತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page