ದೇಶದ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರಕಾರ

ವಿಕಸಿತ ಭಾರತದ ಸಂಕಲ್ಪಕ್ಕೆ ಪ್ರಧಾನಮಂತ್ರಿ ಮೋದಿಯವರ ‘ಸಮಗ್ರ, ಸಮತೋಲಿತ, ಜನಪರ ಬಜೆಟ್’ – ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಫೆಬ್ರವರಿ 1ರಂದು ಮಂಡಿಸಿರುವ ಬಜೆಟ್ ರಾಷ್ಟ್ರಕ್ಕೆ ಹೊಸ ಶಕ್ತಿ ಮತ್ತು ಭರವಸೆಯನ್ನು ನೀಡುವ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಗುರಿಯತ್ತ ಕೊಂಡೊಯ್ಯುವ ಸಮಗ್ರ ಮತ್ತು ಸಮತೋಲಿತ, ಜನತಪರ ಬಜೆಟ್ ಇದಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮೋದಿ ಸರ್ಕಾರದ 3ನೇ ಅವಧಿಯ ಈ ಮೊದಲ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ದೇಶದ ಮಧ್ಯಮ ವರ್ಗ, ರೈತಾಪಿ ವರ್ಗ, ಸಣ್ಣ ಉದ್ದಿಮೆದಾರರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಉತ್ತೇಜನಕಾರಿ ಕೊಡುಗೆಗಳನ್ನು ಘೋಷಿಸುವ ಮೂಲಕ ಹೆಚ್ಚಿನ ವರದಾನವಾಗಲಿದೆ. ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಿಸಿದ್ದು, ತೆರಿಗೆದಾರರಿಗೆ 12 ಲಕ್ಷದವರೆಗೆ ವಿನಾಯಿತಿ ನೀಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಯಾರು ಕೂಡ ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ವಿನಾಯಿತಿ ದೊರೆಯಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ, ಈ ತೆರಿಗೆ ಮಿತಿ ಹೆಚ್ಚಳವು ಮಧ್ಯಮ ವರ್ಗದವರು ಹಾಗೂ ವೇತನದಾರರಿಗೆ ದೊಡ್ಡ ಆರ್ಥಿಕ ವರದಾನ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ದೃಷ್ಟಿಕೋನದಿಂದ ಇದೊಂದು ಸಮರ್ಪಕ ಬಜೆಟ್ ಆಗಿದ್ದು, ಬಜೆಟ್‌ನಲ್ಲಿ ಬೃಹತ್ ಹಡಗುಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗಿದ್ದು ಈ ಪಾತ್ರದಲ್ಲಿ ಮಂಗಳೂರು ತನ್ನ ಕೊಡುಗೆಯನ್ನು ನೀಡಬಹುದು ಹಾಗೂ ಈ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಮರುಸ್ಥಾಪಿಸುವ ಅವಕಾಶ ಇದೆ. ಬಜೆಟ್‌ನಲ್ಲಿ ಘೋಷಿಸಲಾದ 25,000 ಕೋಟಿ ರೂಪಾಯಿಗಳ ಕಾರ್ಪಸ್‌ನೊಂದಿಗೆ ಸ್ಥಾಪಿಸಲಾಗುವ ಶಿಪ್‌ಬಿಲ್ಡಿಂಗ್ ಕ್ಲಸ್ಟರ್‌ಗಳು ಮತ್ತು ಮಾರಿಟೈಮ್ ಡೆವಲಪ್‌ಮೆಂಟ್ ಫಂಡಿನ ಪ್ರಯೋಜನಗಳನ್ನು ಪಡೆದುಕೊಳ್ಳಲು ಫಾಲೋ ಅಪ್ ನಡೆಸುವ ಭರವಸೆಯನ್ನು ಸಂಸದರು ನೀಡಿದ್ದಾರೆ.
ಟಯರ್ – 2 ನಗರಗಳಲ್ಲಿ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ (ಜೆಸಿಸಿ)ಗಳನ್ನು ಸ್ಥಾಪಿಸಲು ಯೋಜನೆ ರೂಪಿಸುವ ಪ್ರಾಸ್ತಾವನೆಯು ಖುಷಿ ಉಂಟು ಮಾಡಿದೆ. ಮಂಗಳೂರಿನಲ್ಲಿ ಜಿಸಿಸಿಗಳನ್ನು ಸ್ಥಾಪಿಸುವಂತೆ ಕೋರಿ ನಾವು ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವಿ ಬರೆಯಲಾಗಿದ್ದು, ಆದಷ್ಟು ಬೇಗ ಇದರ ಸೌಲಭ್ಯವನ್ನು ಪಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಬಜೆಟ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ಕೂಡ 3ರಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಿರುವುದು ದೇಶದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸಾಲ ಸೌಲಭ್ಯ ಪಡೆಯುವುದಕ್ಕೆ ಅನುಕೂಲ ಉಂಟು ಮಾಡಲಿದೆ. ಎಲ್‌ಇಡಿ ಟಿವಿ, ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್, ಕ್ಯಾನ್ಸರ್ ಔಷಧ, ಚರ್ಮದ ಉತ್ಪನ್ನಗಳು, ಸ್ವದೇಶಿ ಬಟ್ಟೆ ಮುಂತಾದ ಅಗತ್ಯ ವಸ್ತುಗಳ ಬೆಲೆ ಇಳಿಕೆ ಹಾಗೂ ಹೊಸ ಸ್ಟಾರ್ಟ್ ಅಪ್‌ಗಳಿಗೆ ವಿಶೇಷ ನಿಧಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 5 ಲಕ್ಷ ಮಹಿಳೆಯರಿಗೆ ಹೊಸ ಉದ್ಯಮ ಸ್ಥಾಪನೆಗೆ ಯೋಜನೆ ಆರಂಭ. ಅಲ್ಲದೆ ಕೃಷಿ ಕ್ಷೇತ್ರದ ಅಮೂಲಾಗ್ರ ಪ್ರಗತಿಗೆ ಪಿಎಂ ಧನ್ ಧಾನ್ಯ ಕೃಷಿ ಯೋಜನೆ ಎಂಬ ಹೊಸ ಸ್ಕೀಮ್ ಅನ್ನು ಪರಿಚಯಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮ. ಜತೆಗೆ ಮಹಿಳೆಯರು, ದುರ್ಬಲವರ್ಗದವರು, ಕಾರ್ಮಿಕ ವರ್ಗದವರ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಬಡತನ ಶೂನ್ಯಗೊಳಿಸುವ ಸಾಮಾಜಿಕ ಬದ್ಧತೆಯ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ಇನ್ನೊಂದೆಡೆ ದೇಶದ ಬಡವರ್ಗದವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಪಡೆಯುವಲ್ಲಿ ಕ್ಯಾನ್ಸರ್ ಸೇರಿದಂತೆ 36 ಜೀವ ರಕ್ಷಕ ಔಷಧಗಳನ್ನು ಸಂಪೂರ್ಣವಾಗಿ ಸುಂಕ ಮುಕ್ತಗೊಳಿಸಲಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಉಡಾನ್ ಯೋಜನೆಯ ಪ್ರಸ್ತಾವನೆ, ಸ್ಟಾರ್ಟಪ್ ಗಳಿಗೆ 10 ಕೋಟಿಯಿಂದ 20 ಕೋಟಿ ರೂಪಾಯಿವರೆಗೂ ಕಡಿಮೆ ಬಡ್ಡಿಯಲ್ಲಿ ಸಾಲ, ಉದ್ಯಮ ಕ್ಷೇತ್ರದಲ್ಲಿ ಎಸ್ಎಸಿ, ಎಸ್ಟಿ ಹಾಗೂ ಮಹಿಳೆಯರ ಉತ್ತೇಜನಕ್ಕೆ ಹೊಸ ಯೋಜನೆ, ದೇಶದ ಎಲ್ಲ ಜಿಲ್ಲೆಗಳಲ್ಲಿಯೂ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ, ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸೇವೆ ಹೀಗೆ ಪ್ರತಿಯೊಂದು ಆದ್ಯತಾ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹ. ಈ ಹಿನ್ನಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ಈ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ವಿಕಸಿತ ಭಾರತದ ಕನಸನ್ನು ನನಸಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಶ್ಲಾಘಿಸಿದ್ದಾರೆ.