March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಜೂರು1.5 ಕೋಟಿ ರೂಪಾಯಿ ವೆಚ್ಚದ “ಮುಸಾಫಿರ್ ಖಾನಾ” ಕಟ್ಟಡ ಉದ್ಘಾಟನೆ

ಪುಣ್ಯಪುರುಷರ ಪವಾಡದಿಂದಲೇ ಹೊರತು ಯುದ್ಧದಿಂದ ಇಸ್ಲಾಂ ನೆಲೆನಿಂತಿಲ್ಲ – ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್

 

ಬೆಳ್ತಂಗಡಿ; ಟಿಪ್ಪು ‌ಸುಲ್ತಾನ್ ಇರಲಿ, ಅಥವಾ ಇನ್ಯಾವುದೇ ಮುಸ್ಲಿಂ ರಾಜರುಗಳೇ ಇರಲಿ, ಅವರ್ಯಾರೂ ಯುದ್ಧ ಸಾರಿ, ಹಣದ ಆಮಿಷ ಒಡ್ಡಿ ಇಲ್ಲಿ ಇಸ್ಲಾಂಗೆ ಒಂದು ಮಗುವನ್ನೂ ಕರೆತಂದಿಲ್ಲ. ಅಲ್ಲಾಹನ ಇಷ್ಟದಾಸರಾದ ಪುಣ್ಯ ಪುರುಷರಾದ ಔಲಿಯಾಗಳ ಅಗಣಿತ ಪವಾಡದ ಶಕ್ತಿಯಿಂದ ಜನರೇ ಇಸ್ಲಾಂ ನತ್ತ ಆಕರ್ಷಿತರಾದುದಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಅಂತಾರಾಷ್ಟ್ರೀಯ ವಿದ್ವಾಂಸ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಅಹ್ಮದ್ ಕಾಂದಪುರಂ ಉಸ್ತಾದ್ ಹೇಳಿದರು.

ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಶ್ರದ್ಧಾ ಕೇಂದ್ರ ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಜನವರಿ 30ರಂದು ನಡೆದ, ಸರಕಾರದ 1.5  ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾದ ಮುಸಾಫಿರ್ ಖಾನಾ (ಯಾತ್ರಿ ನಿವಾಸ) ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಅಜ್ಮೀರ್‌ ಖಾಜಾ ಅವರು ‘ಆನಾಸಾಗರ’ ಕೆರೆಯ ನೀರನ್ನು ತನ್ನ ಅಗಣಿತ ಪವಾಡದ ಮೂಲಕ ಬತ್ತಿಸಿದ ಚರಿತ್ರೆ ಪುನರುಚ್ಚರಿಸಿದ ಸುಲ್ತಾನುಲ್ ಉಲಮಾ ಅವರು, ಇಂತಹಾ ಕೋಟ್ಯಾನುಕೋಟಿ ಔಲಿಯಾಗಳ ಪವಾಡ ಕಂಡು ಭಕ್ತಿ ಮತ್ತು ಧಾರ್ಮಿಕ ಆಕರ್ಷಣೆಯಿಂದಾಗಿ ಜನ ಇಸ್ಲಾಂ ನತ್ತ ಆಕರ್ಷಿತರಾದರು. ಎಂಟು ಶತಮಾನಗಳ ಹಿಂದೆ ಅಂತಹಾ ಪವಾಡ ಪುರುಷರ ತಂಡದಲ್ಲಿದ್ದವರೇ ಈ ಕಾಜೂರು, ಉಳ್ಳಾಲ, ಮುತ್ತುಪ್ಪೇಟೆ, ಏರ್ವಾಡಿ ಮೊದಲಾದೆಡೆ ಅಂತ್ಯವಿಶ್ರಾಂತಿ‌ ಹೊಂದುತ್ತಿರುವ ಔಲಿಯಾಗಳು. ಅವರ ಮೇಲಿನ‌ ನಮ್ಮ ಭಕ್ತಿ ಮತ್ತು ಇಸ್ಲಾಂನ ಪಂಚ ಕಡ್ಡಾಯ ಕರ್ಮ ನಿರ್ವಹಿಸುವ ಮೂಲಕ ನಾವೂ ಅವರ ಇಷ್ಟದಾಸರಾಗಬೇಕು ಎಂದು ಶೈಖುನಾ ಕರೆ ನೀಡಿದರು.

ರಾಜ್ಯ ವಕ್ಫ್ ಮಂಡಳಿ ಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಎನ್.ಕೆ.ಎಮ್. ಶಾಫಿ ಸ‌ಅದಿ ಮತ್ತು ಝೈನುಲ್ ಆಬಿದೀನ್ ಕಾಜೂರು ತಂಙಳ್ ಆಶಯ – ಸ್ವಾಗತ ಭಾಷಣ ಮಾಡಿದರು. ರಾಜ್ಯ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಸಿ. ರೋಡ್ ಹುಸೈನ್ ಸ‌ಅದಿ ಮುಖ್ಯ ಪ್ರಭಾಷಣ ನಡೆಸಿಕೊಟ್ಟರು. ಸಯ್ಯಿದ್ ಮುಖ್ತಾರ್ ತಂಙಳ್ ನೇತೃತ್ವದಲ್ಲಿ ದಿಕ್ರ್ ಹಲ್ಕಾ ಮಜ್ಲಿಸ್ ಮತ್ತು ದುಆ ನಡೆಯಿತು. ಸಯ್ಯಿದ್ ಪಝಲ್ ಜಮಲುಲ್ಲೈಲಿ ತಂಙಳ್ ವಾದಿ ಇರ್ಫಾನ್ ಉದ್ಘಾಟಿಸಿದರು.

ವೇದಿಕೆಯಲ್ಲಿ ಕೇಂದ್ರ ಮುಶಾವರ ಸದಸ್ಯರಾದ ಅಬೂಸ್ವಾಲಿಹ್ ಮದನಿ ಕಿಲ್ಲೂರು ಮತ್ತು ಕೆ.ಯು. ಉಮರ್ ಸಖಾಫಿ ಕಾಜೂರು, ಸಯ್ಯಿದ್ ಎಸ್.ಎಂ. ಕೋಯ ಉಜಿರೆ, ಸಯ್ಯಿದ್ ಗುಲ್ರೇಝ್ ಅಹಮದ್ ರಝ್ವಿ ಬೆಳ್ತಂಗಡಿ, ಡಾ. ಎಮ್‌ಎಸ್‌ಎಮ್ ಝೈನಿ ಕಾಮಿಲ್ ಸಖಾಫಿ, ಮುಹಮ್ಮದ್ ತೌಸೀಫ್ ಸ‌ಅದಿ ಹರೇಕಳ, ಪರಪ್ಪು ಶಂಶೀರ್ ಸಖಾಫಿ ಕಿಲ್ಲೂರು, ಯು.ಕೆ. ಮುಹಮ್ಮದ್ ಹನೀಫ್ ಉಜಿರೆ, ಅಬ್ಬೋನು ಮದ್ದಡ್ಕ, ಅಬ್ದುಲ್‌ ಕರೀಂ ಗೇರುಕಟ್ಟೆ, ಅನ್ಸಾರ್ ಲಾಯಿಲ, ಅಬ್ದುಲ್ ಲೆತೀಫ್ ಅರ್ಲಡ್ಕ, ಅಬ್ದುಲ್ ರಹಿಮಾನ್ ಸಂಕೇಶ, ಸತ್ತಾರ್ ಸಾಹೇಬ್ ಬಂಗಾಡಿ, ಮುತ್ತಲಿಬ್ ಇಂದಬೆಟ್ಟು, ಮಝೀರ್ ಮಠ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಸಾದಿಕ್ ಮಲೆಬೆಟ್ಟು, ಹಾಫಿಲ್ ಹನೀಫ್ ಮಿಸ್ಬಾಹಿ, ಮುಹಮ್ಮದ್ ಸಖಾಫಿ, ಇಬ್ರಾಹಿಂ ಮದನಿ, ಬಿ.ಎ. ಯೂಸುಫ್ ಶರೀಫ್, ಪಿ.ಎ. ಮುಹಮ್ಮದ್, ಅಶ್ರಫ್ ಮಾಸ್ಟರ್ ಮಾಣಿ, ಡಾ. ಇಕ್ಬಾಲ್ ಮಾಚಾರ್ ತೀರ್ಥಹಳ್ಳಿ, ಹನೀಫ್ ಮಲ್ಲೂರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದು ಸಭೆಯನ್ನು ಸಮನ್ವಯಗೊಳಿಸಿದರು. ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು,‌ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್. ಕಮಾಲ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು,‌ ಕಿಲ್ಲೂರು ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ ಭಾಗಿಯಾಗಿದ್ದರು. ಎ.ಪಿ. ಉಸ್ತಾದ್ ಅವರನ್ನು ವಿಶೇಷ ನಿಲುವಂಗಿ ತೊಡಿಸಿ ಸನ್ಮಾನಿಸಲಾಯಿತು. ಅನುದಾನ ಒದಗಿಸಿಕೊಟ್ಟ ಶಾಫಿ ಸ‌ಅದಿ ಬೆಂಗಳೂರು ಮತ್ತು ಕಟ್ಟಡದ ಗುತ್ತಿಗೆದಾರ ವಝೀರ್ ಬಂಗಾಡಿ ಅವರಿಗೆ ಅಭಿನಂದನೆ‌ ಸಲ್ಲಿಸಲಾಯಿತು. ಸ್ಮಾರ್ಟ್ ಎಕ್ಸಾಂನಲ್ಲಿ ಸ್ಥಾನ ಪಡೆದ ಕಾಜೂರು ಮದರಸದ ಇಬ್ಬರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page