ಮಾದಕ ಲಹರಿ ಸಮಾಜಕ್ಕೆ ಮತ್ತು ದೇಶಕ್ಕೆ ಮಾರಕ – ಲಿಮ್ರಾ ಅಧ್ಯಕ್ಷ ಇರ್ಫಾನಿ

ಮಂಗಳೂರು: ಮಾದಕತೆ ವಿರುದ್ದ ದೇರಳಕಟ್ಟೆ ಜಂಕ್ಷನ್ ನಿಂದ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ತನಕ ಸುಮಾರು 17 ಕಿಲೋ ಮೀಟರ್ ಪಾದೆಯಾತ್ರೆ ನಡೆಸಿದ ಲೀಮ್ರಾ ಗ್ರೂಪ್ ಆಫ್ ಕರ್ನಾಟಕ ಮಿನಿ ವಿಧಾನಸೌದದ ಬಳಿ ಸಮಾರೋಪ ಸಭೆ ನಡೆಸಿದರು.
ಮುಖ್ಯ ಅಜೆಂಡಾವನ್ನು ಸಮರ್ಪಿಸುತ್ತಾ ಇರ್ಫಾನಿಯವರು ಸರಕಾರ ಮತ್ತು ಕಾನೂನು ಪಾಲಕರಿಗೆ ಕೆಲವು ಸಂದೇಶಗಳನ್ನು ನೀಡಿದರು. ಸಮಾಜವನ್ನು ಮತ್ತು ಪರಿಸರವನ್ನು ಹಾಗೂ ದೇಶದ ಆಗುಹೋಗುಗಳನ್ನು ಧಾರ್ಮಿಕ ಗುರುಗಳು ವೀಕ್ಷಿಸುತ್ತಿರುತ್ತಾರೆ. ಅಧಿಕಾರಿಗಳು, ರಾಜಕಾರಣಿಗಳು ಎಡವಿದಾಗ ಅವರನ್ನು ತಿದ್ದುವುದು ವಿದ್ವಾಂಸರ ಧಾರ್ಮಿಕ ಮುಖಂಡರುಗಳ ಕರ್ತವ್ಯವಾಗಿದೆ. ಆ ಕರ್ತವ್ಯವನ್ನು ನಾವು ಇಂದು ಪಾಲಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬೀದಿಗೆ ಇಳಿಯಲು ಬಿಡಬೇಡಿ. ಪ್ರತಿಯೊಂದು ವಿಚಾರದಲ್ಲೂ ನ್ಯಾಯಯುತವಾಗಿ ಸಂವಿಧಾನಬದ್ಧವಾಗಿ ಕಾರ್ಯಪ್ರವೃತ್ತರಾಗಿರಿ ಎಂದು ಹಿತೋಪದೇಶವನ್ನು ಮಾಡಿದರು. ರಾಜಕಾರಣಿಗಳನ್ನು ವೇದಿಕೆಯಲ್ಲಿ ಹೋಗಳಿ ಅಟ್ಟಕ್ಕೆ ಏರಿಸುವುದು ವಿದ್ವಾಂಸರ ಲಕ್ಷಣವಲ್ಲ ಎಂದು ಅವರು ಸೇರಿಸಿ ಹೇಳಿದರು.
ಇತ್ತೀಚೆಗೆ ಮಾದಕ ವ್ಯಸನ ಇಡೀ ಸಮಾಜವನ್ನು ಬಲಿ ಪಡೆಯುತ್ತಿದೆ. ದೇಶವನ್ನು ಅಭದ್ರತೆಗೆ ದೂಡುತಿದೆ. ದೇಶದ ಅಭಿವೃದ್ಧಿ ಹಾಗೂ ಯಶಸ್ಸಿಗೆ ಮಾದರಿಯಾಗಬೇಕಾಗಿದ್ದ ಯುವ ಜನತೆ ದೇಶಕ್ಕೆ ಮಾರಕವಾಗಿ ಬೆಳೆಯುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ನುಸುಳಿತ್ತಿರುವ ಈ ಲಹರಿ ಪದಾರ್ಥಗಳನ್ನು ತಡೆಯುವಲ್ಲಿ ಕಾನೂನು ಪಾಲಕರು ಮತ್ತು ಸರ್ಕಾರವು ಯಾಕೆ ವೈಫಲ್ಯವಾಗುತ್ತಿದೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಹೈಸ್ಕೂಲ್ ವಿದ್ಯಾರ್ಥಿಗಳಲ್ಲೂ ಕೂಡ ಈ ಒಂದು ಅಂಟುರೋಗ ಭಯಾನಕವಾಗಿ ಕಾಡುತ್ತಿದೆ. ವಿದ್ಯಾರ್ಥಿನಿಗಳು ಮತ್ತು ಮಹಿಳೆಯರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಜಾಗೃತಿ ವಹಿಸದಿದ್ದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಸರಕಾರವನ್ನು ಆಗ್ರಹಿಸಿದರು.
ಮೋಜು-ಮಸ್ತಿಗಳ ಹೆಸರಲ್ಲಿ ಇದಕ್ಕೆ ಬಲಿಯಾಗುವ ಯುವ ಜನತೆ ಕ್ರಮೇಣ ಶಾರೀರಿಕವಾಗಿ ಮಾನಸಿಕವಾಗಿ ಇದರ ದಾಸರಾಗಿ ಸಮಾಜದಿಂದ ಕಣ್ಮರೆಯಾಗುತ್ತಿದ್ದಾರೆ. ಮಾದಕತೆಯು ಕೇವಲ ನಶೆ ಮಾತ್ರವಲ್ಲ ಹೆಚ್ಐವಿ ಸೋಂಕು ಅದೇ ರೀತಿ ಸಮಾಜದಲ್ಲಿ ಕೋಮು ವೈಶಮ್ಯ ಗಲಭೆಗಳು ಉಂಟಾಗಲು ಮೂಲ ಕಾರಣ ಎಂದರು. ಸರ್ವ ಧರ್ಮೀಯ ಮುಖಂಡರು ಹಾಗೂ ಎಲ್ಲಾ ಪಕ್ಷ ವರ್ಗ ವರ್ಣದ ನಾಯಕರು, ಚಿಂತಕರು, ಸಾಹಿತಿಗಳು ಮತ್ತು ಪೌರ ಪ್ರಮಾಣೀಗಳನ್ನು ಸೇರಿಸಿಕೊಂಡು ಲಿಮ್ರಾ ಎಜು ಗ್ರೂಪ್ ಸಂಘಟಿಸಿದ ಪಾದಾ ಯಾತ್ರೆಯು ಐತಿಹಾಸಿಕವಾಗಿ ದಾಖಲಾಯಿತು. ಇದು ಆಂದೋಲನದ ಭಾಗವಷ್ಟೇ ಎಂದು ಸಾರಿ ಹೇಳುತ್ತಾ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು.