ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಸಂಭ್ರಮದಿಂದ ಚರ್ಚ್ ಸಮುದಾಯ ದಿನ ಆಚರಣೆ

ಒಬ್ಬರು ಎಲ್ಲರಿಗೋಸ್ಕರ, ಎಲ್ಲರೂ ಒಬ್ಬರಿಗೋಸ್ಕರ ಜೀವಿಸುವುದೇ ಕ್ರಿಸ್ತ ಸಮುದಾಯ – ಫಾದರ್ ಆ್ಯಂಡ್ರು ಡಿಸೋಜ ಬೋಂದೆಲ್
ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಚರ್ಚ್ ಸಮುದಾಯ ದಿನವನ್ನು ಫೆಬ್ರವರಿ 2ರಂದು ಭಾನುವಾರ ಸಂಭ್ರಮದಿಂದ ಹಾಗೂ ಸಡಗರದಿಂದ ಆಚರಿಸಲಾಯಿತು. ಚರ್ಚ್ ಕುಟುಂಬದ ಭಕ್ತಾಧಿಗಳಿಗೆ ವರ್ಷವಿಡೀ ದೇವರು ನೀಡಿದ ಆಶೀರ್ವಾದಗಳಿಗೆ ಕೃತಜ್ಞತಾ ಪೂರ್ವಕವಾಗಿ ದಿವ್ಯ ಬಲಿಪೂಜೆಯನ್ನು ನಡೆಸಲಾಯಿತು. ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಬೋಂದೆಲ್ ಸಂತ ಲೋರೆನ್ಸರ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಆ್ಯಂಡ್ರು ಲಿಯೋ ಡಿಸೋಜ ಇವರು ಇತರ ಧರ್ಮಗುರುಗಳೊಂದಿಗೆ ದಿವ್ಯ ಬಲಿಪೂಜೆಯನ್ನು ನಡೆಸಿ ಬಲಿಪೂಜೆಯಲ್ಲಿ ಭಾಗಿಯಾದ ಎಲ್ಲಾ ಭಕ್ತಾಧಿಗಳಿಗೆ ದೇವರ ಆಶೀರ್ವಾದಗಳನ್ನು ನೀಡಿ, ‘ಸಮುದಾಯದ ದಿನವೆಂದರೆ ಎಲ್ಲರೂ ಒಮ್ಮನಸ್ಸಿನಿಂದ ಹಾಗೂ ಜೊತೆಗೂಡಿ ಬಾಳುವುದು. ಪರಸ್ಪರ ಒಬ್ಬರಿಗೊಬ್ಬರು ತಪ್ಪುಗಳನ್ನು ಕ್ಷಮಿಸಿ, ಒಬ್ಬರು ಎಲ್ಲರಿಗೋಸ್ಕರ, ಎಲ್ಲರೂ ಒಬ್ಬರಿಗೋಸ್ಕರ ಜೀವಿಸುವುದೇ ಕ್ರಿಸ್ತ ಸಮುದಾಯದ ಲಕ್ಷಣ. ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟಿನಲ್ಲಿ ಜೀವಿಸಿ ಕ್ರಿಸ್ತನಿಗೆ ಸಾಕ್ಷಿಯಾಗಿ ಬಾಳುವುದೇ ನಿಜವಾದ ಜೀವನ. ಇದು ಪುತ್ತೂರು ಚರ್ಚ್ ನಲ್ಲಿ ಚರ್ಚ್ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಲೋರೆನ್ಸ್ ಮಸ್ಕರೇನ್ಹಸ್ ಇವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಚರ್ಚ್ ಸಮುದಾಯ ದಿನ ಆಚರಣೆಯೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು.
ಪೂಜೆಯ ಬಳಿಕ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನಿವಾಸಿ ಉದ್ಯಮಿ ಹಾಗೂ ಮೂಲತಃ ಪುತ್ತೂರಿನವರಾದ ಮೈಕಲ್ ಡಿಸೋಜ ಉಪಸ್ಥಿತರಿದ್ದು, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಮಕ್ಕಳಿಗೆ, ಯುವಕರಿಗೆ ಹಾಗೂ ಇದನ್ನು ಪ್ರೋತ್ಸಾಹಿಸಲು ಪೋಷಕರಿಗೆ ಕರೆ ನೀಡಿದರು. ಸಮುದಾಯವನ್ನು ಕಟ್ಟಿ ಬೆಳೆಸಬೇಕು, ಆಗ ಮಾತ್ರ ನಮ್ಮ ಸಮುದಾಯ ಒಂದು ಬಲಿಷ್ಠ ಸಮುದಾಯ ಆಗಲು ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಅತಿಥಿ ಗರ್ಡಾಡಿಯ ಸಬಿತಾ ಮೊನಿಸ್ ಮಾತನಾಡಿ, ‘ಮನುಷ್ಯ ಜೀವನವೇ ಒಂದು ಸವಾಲು. ಪ್ರತಿಯೊಂದು ಮಗು ಜೀವನವನ್ನು ಸವಾಲಾಗಿ ಸ್ವೀಕರಿಸಬೇಕೇ ಹೊರತು, ಕಷ್ಟಗಳು ಬಂದಾಗ ಕುಗ್ಗಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಮಕ್ಕಳನ್ನು ಹೆತ್ತವರು ಅತೀಯಾಗಿ ಪ್ರೀತಿಸಿ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆದು, ಜೀವನದ ಮೌಲ್ಯಗಳನ್ನು ಕಲಿಸಲು ಪ್ರೇರೇಪಿಸಬೇಕು ಎಂದು ತನ್ನ ಜೀವನವನ್ನೇ ಉದಾಹರಣೆಯಾಗಿ ನೀಡಿದರು.
ಚರ್ಚ್ ಸಮುದಾಯ ದಿನವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲು ಸಹಕರಿಸಿದ ಎಲ್ಲರಿಗೂ ಹಾಗೂ ದಾನಿಗಳಿಗೆ, ಮಾಯ್ ದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಲೋರೆನ್ಸ್ ಮಸ್ಕರೇನ್ಹಸ್ ಇವರು ಕೃತಜ್ಞತೆಗಳನ್ನು ಸಲ್ಲಿಸಿ ಎಲ್ಲರನ್ನೂ ಸನ್ಮಾನಿಸಿದರು.
ವೇದಿಕೆಯಲ್ಲಿ ವಂದನೀಯ ಫಾದರ್ ಆ್ಯಂಡ್ರು ಡಿಸೋಜ ಬೋಂದೆಲ್, ಪುತ್ತೂರು ಚರ್ಚ್ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಲೋರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂದನೀಯ ಫಾದರ್ ಲೋಹಿತ್ ಅಜಯ್ ಮಸ್ಕರೇನ್ಹಸ್, ವಂದನೀಯ ಫಾದರ್ ಮ್ಯಾಕ್ಸಿಂ ಡಿಸೋಜ, ವಂದನೀಯ ಫಾದರ್ ರಾಯನ್ ಕ್ರಾಸ್ತಾ, ವಂದನೀಯ ಫಾದರ್ ರೂಪೇಶ್ ತಾವ್ರೊ, ವಂದನೀಯ ಫಾದರ್ ಫೆಲಿಕ್ಸ್ ಪಿಂಟೋ ಸೂರಿಕುಮೇರು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ, ಕಾರ್ಯದರ್ಶಿ ಎವ್ಲಿನ್ ಡಿಸೋಜ, ಆಯೋಗಗಳ ಸಂಯೋಜಕ ಜೋನ್ ಡಿಸೋಜ, ಕ್ರೈಸ್ತ ಶಿಕ್ಷಣ ಸಂಯೋಜಕ ಕ್ಲೆಮೆಂಟ್ ಪಿಂಟೊ, ಕ್ರೈಸ್ತ ಸಮುದಾಯ ಸಂಯೋಜಕಿ ಗ್ರೇಸಿ ಡಿಸೋಜ, ಎಲ್ಲಾ ವಾಳೆಯ ಗುರಿಕಾರರು, ಸಂಘಟನೆಗಳ ಅಧ್ಯಕ್ಷರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪುತ್ತೂರು ಚರ್ಚ್ ನ ಭಕ್ತಾಧಿಗಳು ಸಮುದಾಯಕ್ಕೆ ಸಂಬಂಧಪಟ್ಟ ಗೀತೆ, ನೃತ್ಯ ಹಾಗೂ ಕಿರು ನಾಟಕಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಜೆರಾಲ್ಡ್ ಡಿಕೋಸ್ತ ಸ್ವಾಗತಿಸಿ, ಎವ್ಲಿನ್ ಡಿಸೋಜ ಧನ್ಯವಾದವಿತ್ತರು. ಶಿಕ್ಷಕಿ ಫ್ಲಾವಿಯಾ ಆಲ್ಬುಕರ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಭವ್ಯ ಸಮಾರಂಭಕ್ಕೆ ಸಾವಿರಾರು ಭಕ್ತಾಧಿಗಳು ಸಾಕ್ಷಿಯಾದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.