ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕನ್ಯಾಡಿ ಶ್ರೀಗಳವರಿಗೆ ಮಹಾಮಂಡೇಶ್ವರ ಮಹೋನ್ನತ ಪದವಿ

ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಉತ್ತರ ಭಾರತದ ನಾಗಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜನವರಿ 31ರಂದು ಜುನಾ ಅಖಾಡದ ಮೂಲಕ ನೆರವೇರಿತು. ಇದು ಕರ್ನಾಟಕಕ್ಕೆ ಒಲಿದ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ.
ಈ ಪದವಿಯನ್ನು ಧಾರ್ಮಿಕ, ಆದ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರಧಾನ ಮಾಡುವುದು ಅಖಾಡದ ವಾಡಿಕೆ. ಈ ಪದವಿಗೆ ಅರ್ಹರಾದವರು ಸ್ವತಂತ್ರ ಪೀಠಾಧೀಶರಾಗಿರಬೇಕಾಗಿದೆ. ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದಲ್ಲಿರುವ ಕ್ಯಾಬಿನೆಟ್ ಸದಸ್ಯರು ಸ್ವಾಮೀಜಿಯವರ ಆಧ್ಯಾತ್ಮಿಕ ಸತ್ಸಂಗವನ್ನು ಪರಿಶೀಲಿಸಿ ಬೈಠಕ್ ನಲ್ಲಿ ಚರ್ಚಿಸಿ ಗೌರವ ಪ್ರಧಾನ ಮಾಡುವುದಾಗಿದೆ. ಶ್ರೀಗಳು ಮುಂದೆ ರಾಷ್ಟ್ರಾದ್ಯಂತ ಧರ್ಮ ಪ್ರಚಾರದ ಜೊತೆಗೆ ಆದ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆ ಉಳ್ಳವರಾಗಿದ್ದಾರೆ ಎಂದು ಪರಿಗಣಿಸಿ ನಾಗಾ ಸಾಧು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿಯನ್ನು ನೀಡಿದೆ.
ಕರ್ನಾಟಕಕ್ಕೆ ಬಂದಿರುವ ಮೊದಲ ಪದವಿ
ದಕ್ಷಿಣ ಭಾರತದಲ್ಲಿ ಮಹಾಮಂಡಲೇಶ್ವರ ಪಟ್ಟ ನೀಡಿದ್ದು ವಿರಳ, ಸ್ವಾಮೀಜಿಯವರ ಪೈಕಿ ಕನ್ಯಾಡಿ ಶ್ರೀರಾಮಕ್ಷೇತ್ರದ ಸದ್ಗುರು ಶ್ರೀಗಳ ಮೂಲಕ ಇದು ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡ ಲೇಶ್ವರ ಪದವಿಯಾಗಿದೆ. ಈ ಪಟ್ಟಾಭಿಷೇಕರಾದ ಧಾರ್ಮಿಕ ಪುರುಷನಿಗೆ ರಾಷ್ಟ್ರದ್ಯಂತ ವಿಶೇಷ ಸೌಲಭ್ಯ ನೀಡಲಾಗುತ್ತದೆ. ವಾರಣಾಸಿಯ ಪಂಚದಶನಾಮ್ ಜುನಾ ಅಖಾಡದಲ್ಲಿರುವ ಸಾಧು ಸಮಾಜದ ಮಹಾಮಂಡಲೇಶ್ವರ ಆಚಾರ್ಯರಾದ ಅವದೇಶಾನಂದ ಗಿರಿ ಮಹಾರಾಜರು ಶುಕ್ರವಾರ ಈ ಪುಣ್ಯ ಕಾರ್ಯದ ಪಟ್ಟಾ ಭಿಷೇಕವನ್ನು ಮಹಾಕುಂಭಮೇಳದಲ್ಲಿ ನಿರ್ವಹಿಸಿದರು.
ಜನವರಿ 31ರಂದು ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಮಹಾಮಂಡಲೇಶ್ವರರಾಗಿ ಕುಂಭಮೇಳ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷರಾದ ಹರಿಗಿರಿ ಮಹಾರಾಜ್, ಜುನಾ ಅಖಾಡ ಉಪಾಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಜುನಾ ಅಖಾಡದ ಉತ್ತರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕೋಶಾಧಿಕಾರಿ ಧೀರಜ್ ಗಿರಿ, ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಟ್ರಸ್ಟೀ ತುಕಾರಾಮ್ ಸಾಲಿಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ಹರ್ಷಿತ್ ಮೊದಲಾದವರು ಉಪಸ್ಥಿತರಿದ್ದರು.