ರಾಜ್ಯ ಮಾಹಿತಿ ಆಯುಕ್ತರಾಗಿ ಬದ್ರುದ್ದೀನ್ ಮಾಣಿ ನೇಮಕ – ಘನತವೆತ್ತ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು : ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಿರಿಯ ಪತ್ರಕರ್ತ ಬದ್ರುದ್ದೀನ್ ಕೆ. ಮಾಣಿ ಸಹಿತ 8 ಮಂದಿಯನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಶಿತ್ ಮೋಹನ್ ಪ್ರಸಾದ್ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಬದ್ರುದ್ದೀನ್ ಫೆಬ್ರವರಿ 4ರಂದು ಮಂಗಳವಾರ ಘನತವೆತ್ತ ರಾಜ್ಯಪಾಲರಾದ ತಾವರ್ ಚಂದ್ ಗೆಯ್ಲೋಟ್ ರವರಿಂದ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬದ್ರುದ್ದೀನ್ ಅವರು ಕಳೆದ 3 ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ನೀಡಿ ಜನಮನ್ನಣೆಯನ್ನು ಗಳಿಸಿದ್ದರು. 2024ರಿಂದ ಪಬ್ಲಿಕ್ ಟಿವಿಯಲ್ಲಿ ರಾಜಕೀಯ ವಿಭಾಗದಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಮಾಧ್ಯಮ ಕ್ಷೇತ್ರದ ಗಣನೀಯ ಸಾಧನೆಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರೆ.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿ, ಕರ್ನಾಟಕ ಪ್ರೌಢ ಶಾಲೆ ಮಾಣಿ, ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು ಹಾಗೂ ಸೈಂಟ್ ಫಿಲೋಮಿನ ಕಾಲೇಜು ಪುತ್ತೂರು ಇಲ್ಲಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು ಮಾಣಿಯ ನಿವಾಸಿ ಅಬ್ದುಲ್ ಖಾದರ್ ಮತ್ತು ಐಸಮ್ಮಾ ದಂಪತಿಗಳ ಪುತ್ರ ಹಾಗೂ ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಸಾಮಾಜಿಕ ಮುಂದಾಳು ಇಬ್ರಾಹಿಂ ಕೆ. ಮಾಣಿ ಇವರ ಸಹೋದರರಾಗಿದ್ದಾರೆ.