ಗ್ರಾಮ ಸಭೆ ಕರೆಯಲು ಹೊಸ ನಿಯಮ ರೂಪಿಸಿದ ರಾಜ್ಯ ಸರಕಾರ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಕರೆಯಲು ಸರ್ಕಾರ ಹೊಸ ನಿಯಮ ರೂಪಿಸಿದ್ದು, ಈ ನಿಯಮವನ್ನು ಪಾಲಿಸುವಂತೆ ತಿಳಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿದೆ.
ಪ್ರತಿ ಕಂದಾಯ ಗ್ರಾಮ ಹಾಗೂ ಅದರಡಿಯ ಉಪ ಗ್ರಾಮಗಳ ಗ್ರಾಮ ಸಭೆಯನ್ನು ವರ್ಷದಲ್ಲಿ 4 ಬಾರಿ ಕರೆಯತಕ್ಕದ್ದು ಪರಂತು ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯಡಿಯಲ್ಲಿ ಬರುವ ಕಂದಾಯ ಗ್ರಾಮಗಳಲ್ಲಿ ವಾಸಿಸುವ ಮನೆಗಳು ಕಡಿಮೆ ಇರುವ ಕಾರಣ ಸಮೀಪದಲ್ಲಿರುವ ಮತ್ತೊಂದು ಕಂದಾಯ ಗ್ರಾಮವನ್ನು ಸೇರಿಸಿಕೊಂಡು ಗ್ರಾಮ ಸಭೆಯನ್ನು ನಡೆಸುವುದು.
ಸಾಮಾನ್ಯ ಗ್ರಾಮ ಸಭೆಗಳು ಎಪ್ರಿಲ್ 24 ಮತ್ತು ಅಕ್ಟೋಬರ್ 2ನ್ನು ಹೊರತುಪಡಿಸಿ, ತದನಂತರ ಏಳು ಕೆಲಸದ ದಿನಗಳ ಕಾಲಾವಧಿಯಲ್ಲಿ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭಾ ದಿನಾಂಕಗಳನ್ನು ನಿಗದಿಪಡಿಸತಕ್ಕದ್ದು. ವಿಶೇಷ ಸಭೆಗಳು ಆಗಸ್ಟ್ 15 ಮತ್ತು ಜನವರಿ 26ನ್ನು ಹೊರತುಪಡಿಸಿ, ತದನಂತರ ಏಳು ಕೆಲಸದ ದಿನಗಳ ಕಾಲಾವಧಿಯಲ್ಲಿ ಪ್ರತಿ ಕಂದಾಯ ಗ್ರಾಮದಲ್ಲಿ ವಿಶೇಷ ಗ್ರಾಮ ಸಭಾ ದಿನಾಂಕಗಳನ್ನು ನಿಗದಿಪಡಿಸತಕ್ಕದ್ದು. ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತಿಯ ಅಧ್ಯಕ್ಷರ ಜೊತೆ ಚರ್ಚಿಸಿ, ಗ್ರಾಮ ಸಭೆಗೆ ಅಧಿಕಾರಿಗಳನ್ನು ನಿಯೋಜಿಸತಕ್ಕದ್ದು. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ವಹಿಸತಕ್ಕದ್ದು. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿ ಚುನಾಯಿತನಾದ ಹಿರಿಯ ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸುವುದು.
ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಅನುಪಸ್ಥಿತಿಯಲ್ಲಿ ಗ್ರಾಮ ಸಭೆ ಆಯ್ಕೆ ಮಾಡಿದ ಒಬ್ಬರು ಅಧ್ಯಕ್ಷತೆಯನ್ನು ವಹಿಸುವುದು, ಗ್ರಾಮ ಸಭಾದಲ್ಲಿರುವ ಒಟ್ಟು ಮತದಾರರ ಶೇಕಡಾ 10 ರಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆ ಕೋರಂ ಆಗಿರುತ್ತದೆ. ಸಭೆಗೆ ನಿಗಧಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ, ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಮೂವತ್ತು ನಿಮಿಷಗಳ ಕಾಲಾವಕಾಶವನ್ನು ನೀಡಿ ಕಾಯತಕ್ಕದ್ದು. 30 ನಿಮಿಷದ ನಂತರವೂ ಕೋರಂ ಇಲ್ಲದಿದ್ದರೆ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಸಾರ್ವಜನಿಕ ರಜಾ ದಿನ ಅಲ್ಲದ ಮುಂದಿನ ದಿನಕ್ಕೆ ಅಥವಾ ಮೂರು ಕೆಲಸದ ದಿನದೊಳಗೆ ಮತ್ತೊಂದು ದಿನಾಂಕಕ್ಕೆ ಸಭೆಯನ್ನು ಮುಂದೂಡತಕ್ಕದ್ದು. ಮುಂದೂಡಲ್ಪಟ್ಟ ಸಭೆಗೆ ಕೋರಂ ಅವಶ್ಯಕತೆ ಇರುವುದಿಲ್ಲ. ಒಂದು ವರ್ಷದಲ್ಲಿ ಪ್ರತಿ ಕಂದಾಯ ಗ್ರಾಮದಲ್ಲಿ ಒಂದು ಬಾರಿ ಕರೆಯಲಾಗುವ ವಿಶೇಷ ಮಹಿಳಾ, ಮಕ್ಕಳ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳು ಮತ್ತು ವಿಶೇಷ ಚೇತನರು ಹಾಗೂ ವಿವಿಧ ದುರ್ಬಲ ವರ್ಗಗಳ ಗ್ರಾಮ ಸಭೆಗಳನ್ನು ಪ್ರತ್ಯೇಕವಾಗಿ ಸಮಯ ನಿಗದಿ ಪಡಿಸಿ ಮತ್ತು ಸಭೆ ನಡೆಸಿ, ಚರ್ಚಿಸಿದ ನಿರ್ಣಯಗಳನ್ನು ಯಥಾವತ್ತಾಗಿ ಇಲಾಖೆಗಳು ಕಾರ್ಯಗತಗೊಳಿಸತಕ್ಕದ್ದು.
ಗ್ರಾಮ ಸಭೆ ಕರೆಯುವ ವಿಧಾನ:
ಗ್ರಾಮ ಸಭೆಯ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಸರ್ಕಾರವು ಅಭಿವೃದ್ಧಿ ಪಡಿಸಿರುವ ತಂತ್ರಾಂಶದ ಮೂಲಕ ನಿರ್ವಹಿಸುವುದು. ಸಭೆಯ ದಿನಾಂಕದಿಂದ ಏಳು ದಿನ ಮುಂಚಿತವಾಗಿ ಗ್ರಾಮ ಸಭಾ ನೋಟಿಸನ್ನು ಹೊರಡಿಸತಕ್ಕದ್ದು. ಮುದ್ರಿತ ಮತ್ತು ವಿದ್ಯುನ್ಮಾನ ಗ್ರಾಮ ಸಭಾ ನೋಟೀಸ್ ಅನ್ನು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರಿಗೆ ತಲುಪಿಸಬೇಕು.
ಗ್ರಾಮ ಸಭಾ ನೋಟೀಸ್ ಅನ್ನು ಗ್ರಾಮ ಪಂಚಾಯಿತಿಯ ಪ್ರಮುಖ ಸ್ಥಳಗಳಲ್ಲಿ ಅಂದರೆ ಜನನಿಬಿಡ ಹಾಗೂ ಮಾರುಕಟ್ಟೆ, ಪ್ರದೇಶಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು ಮತ್ತು ಪ್ರತಿ ಗ್ರಾಮದಲ್ಲಿ ಮತದಾರರ ಒಂದು ಸಾಮಾಜಿಕ ಜಾಲತಾಣ (ಉದಾ: ವ್ಯಾಟ್ಸ್ ಅಪ್ ಗ್ರೂಪ್) ಸೃಜಿಸಿ ಗ್ರಾಮ ಸಭಾ ನೋಟಿಸ್ ಜೊತೆಗೆ ಸಭೆಯ ವಿಷಯ ಸೂಚಿಯನ್ನೂ ಸಹ ಪ್ರಕಟಿಸಬೇಕು.
ಗ್ರಾಮ ಸಭಾ ನೋಟಿಸ್ ಅನ್ನು ಸಂಬಂಧಪಟ್ಟ ಕ್ಷೇತ್ರ ಮಟ್ಟದ ಅನುಷ್ಠಾನ ಇಲಾಖೆಗಳ ಎಲ್ಲಾ ಅಧಿಕಾರಿ / ಸಿಬ್ಬಂದಿಗಳ ಒಂದು ವ್ಯಾಟ್ಸಾಪ್ ಗ್ರೂಪ್ ಅನ್ನು ರಚಿಸಿ, ಗ್ರಾಮ ಸಭಾ ನೋಟೀಸ್ ಜೊತೆಗೆ ಸಭೆಯ ವಿಷಯಸೂಚಿಯನ್ನೂ ಸಹ ವ್ಯಾಟ್ಸಾಪ್ ಗ್ರೂಪ್ ನಲ್ಲಿ ಪ್ರಕಟಿಸಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಂದಾಯ ಗ್ರಾಮಗಳು, ಉಪ ಗ್ರಾಮಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಪ್ರಚಾರ ಮಾಡುವುದು. ಗ್ರಾಮ ಸಭೆಯ ಕರಪತ್ರ/ನೋಟೀಸ್‌ಗಳನ್ನು ಜನಸಾಮಾನ್ಯರಿಗೆ ಗೊತ್ತಾಗುವಂತೆ ಆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವುದು. ಗ್ರಾಮ ಸಭೆಯ ಕರಪತ್ರ/ನೋಟೀಸ್‌ಗಳನ್ನು ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುವಂತೆ ಕ್ರಮ ವಹಿಸುವುದು.
ಗ್ರಾಮ ಸಭೆಯ ಕರಪತ್ರ/ನೋಟೀಸ್ ಅನ್ನು ಮನೆ ಮನೆಗೂ ತಲುಪಿಸುವುದು ಹಾಗೂ ಸಹಿ ಪಡೆಯತಕ್ಕದ್ದು. ಗ್ರಾಮ ಸಭೆಯ ಕರಪತ್ರ/ನೋಟಿಸುಗಳನ್ನು ಗ್ರಾಮ ಪಂಚಾಯತಿಯ ಗ್ರಂಥಾಲಯದ ನೋಟೀಸ್ ಬೋರ್ಡ್, ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮ ಪಂಚಾಯತಿಯಿಂದ ನೋಟೀಸ್ ಬೋರ್ಡ್ ಅನ್ನು ಸಿದ್ಧಪಡಿಸಿ, ಅದರಲ್ಲಿ ಪ್ರದರ್ಶಿಸಲು ಕ್ರಮ ವಹಿಸುವುದು ಹಾಗೂ ಗ್ರಾಮದ ಅಂಗನವಾಡಿ, ಶಾಲೆ, ಹಾಲು ಉತ್ಪಾದಕರ ಸಂಘ ಮತ್ತು ಸ್ವ-ಸಹಾಯ ಮಹಿಳಾ ಸಂಘಗಳ ನೋಟಿಸ್ ಬೋರ್ಡ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಪ್ರದರ್ಶಿಸುವುದು ಮತ್ತು ಮೈಕ್ ಮುಖಾಂತರ ಪ್ರಚಾರ ಮಾಡತಕ್ಕದ್ದು.