ಬೇಡನ್ ಪೋವೆಲ್ ರವರ ಮೊಮ್ಮಗನಿಂದ ಜಿಲ್ಲಾ ತರಬೇತಿ ಕೇಂದ್ರ ಪಿಲಿಕುಳದಲ್ಲಿ ಯುವ ಶಕ್ತಿ ಕೇಂದ್ರ ಉದ್ಘಾಟನೆ

ಮುಂಬೈನಲ್ಲಿರುವ ಸೀ ಸ್ಕೌಟಿಂಗ್ ಕೇಂದ್ರವನ್ನು ಕರಾವಳಿಯ ಮಂಗಳೂರಿಗೆ ಸ್ಥಳಾಂತರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕದ ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ. ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಯುವ ಶಕ್ತಿ ಕೇಂದ್ರ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಕೌಟ್ ಗೈಡ್ಸ್‌ನಲ್ಲಿ ಸೀ ಸ್ಕೌಟ್ ವಿಭಾಗವೂ ಇದೆ. ಇಲ್ಲಿ ಕರಾವಳಿ ಸಮುದ್ರ ತೀರ ಹಾಗೂ ಸುಸಜ್ಜಿತ ಈ ಯುವ ಶಕ್ತಿ ಕೇಂದ್ರ ಇರುವುದರಿಂದ ಸೀ ಸ್ಕೌಟ್ ಕೇಂದ್ರವನ್ನು ಮುಂಬೈನಿಂದ ಮಂಗಳೂರಿಗೆ ಸ್ಥಳಾಂತರಿಸಲು ಇದು ಸಕಾಲ. ಸೀ ಸ್ಕೌಟ್ ಕೇಂದ್ರ ಇಲ್ಲಿಗೆ ಸ್ಥಳಾಂತರಗೊಂಡರೆ, ಸೀ ಸ್ಕೌಟ್‌ಗೆ ಸಂಬಂಧಿಸಿದ ಎಲ್ಲ ರೀತಿಯ ಚಟುವಟಿಕೆ ನಡೆಸಲು ಸುಲಭವಾಗಲಿದೆ. ಈ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ 7 ಲಕ್ಷ ಸ್ಕೌಟ್ ಗೈಡ್ಸ್‌ಗಳಿದ್ದು, ದೇಶದಲ್ಲಿ ಇವರ ಸಂಖ್ಯೆ ಒಂದು ಕೋಟಿ ಇದೆ. ಇಷ್ಟೇ ಸಂಖ್ಯೆಯಲ್ಲಿ ಎನ್‌ಸಿಸಿ ,ಎನ್‌ಎಸ್‌ಎಸ್ ಮಂದಿ ಇದ್ದಾರೆ. ಕಲೆ, ಸಂಸ್ಕೃತಿ, ಕ್ರೀಡೆಯಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳ ಸಾಧನೆ ಹಿಂದೆ ಡಾ.ಎಂ. ಮೋಹನ ಆಳ್ವರ ಪರಿಶ್ರಮವಿದೆ. ಕರಾವಳಿಯ ಉಡುಪಿ ಮತ್ತು ಕಾರವಾರಗಳಲ್ಲೂ ಸ್ಕೌಟ್ ಭವನ ನಿರ್ಮಾಣವಾಗ ಬೇಕಾಗಿದೆ ಎಂದರು. ಯುವ ಶಕ್ತಿ ಕೇಂದ್ರ ಲೋಕಾರ್ಪಣೆಗೊಳಿಸಿದ ಸ್ಕೌಟ್ ಗೈಡ್ ಸಂಸ್ಥಾಪಕರ ಮರಿ ಮಗನಾದ ಡೇವಿಡ್ ರಾಬರ್ಟ್ ಬೇಡನ್ ಪಾವೆಲ್ ಮಾತನಾಡಿ, ಸ್ಕೌಟ್ ದ್ವೀಪ ಪ್ರದೇಶದಲ್ಲಿ ಆರಂಭವಾದರೂ ಈಗ ಎಲ್ಲ ಕಡೆ ವಿಸ್ತರಿಸಿದೆ. ಪ್ರಪಂಚದ ಯುವ ಶಕ್ತಿಯ ಪ್ರತೀಕವಾಗಿ ಸ್ಕೌಟ್ ಗೈಡ್ ಬೆಳೆದಿದೆ. ಸಹಸ್ರಾರು ವಿದ್ಯಾರ್ಥಿಗಳ ಭಾವನೆಗೆ ಇಲ್ಲಿ ಮನ್ನಣೆ ಸಿಕ್ಕಿದೆ. ಇಂತಹ ಉತ್ತಮ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ನವ ಮೂಡುಬಿದಿರೆಯ ರೂವಾರಿಯಾದ ಡಾ. ಮೋಹನ ಆಳ್ವರ ಮುತುವರ್ಜಿಯಲ್ಲಿ ಇಲ್ಲಿ ವಿಶಾಲ ಸಭಾಂಗಣ ನಿರ್ಮಾಣವಾಗಿದೆ. ಮಿತ ದರದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಬಳಕೆಗೆ ಸಿಗುವಂತಾಗಲಿ ಎಂದರು. ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಮಾತನಾಡಿ, ಡಾ. ಆಳ್ವರು ಕೈಹಾಕದ ಕ್ಷೇತ್ರವಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತರಕ್ಕೆ ಬೆಳೆಸುವಲ್ಲಿ ಡಾ. ಆಳ್ವರ ಪಾತ್ರ ಬಹುಮುಖ್ಯ ಎಂದರು.
ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಹಿಂದೆ ಎನ್‌ಸಿಸಿ ಸೇರಿದರೆ ಶಿಸ್ತು ಎನ್ನುತ್ತಿದ್ದರು. ಈಗ ಸ್ಕೌಟ್ ಗೈಡ್ಸ್ ಸೇರಿದರೂ ಶಿಸ್ತು ಕಾಣಬಹುದು. ಸ್ಕೌಟ್ ಗೈಡ್ ಈಗ ಶಿಕ್ಷಣದ ಭಾಗವಾಗಿದೆ. ಈ ಯುವ ಶಕ್ತಿ ಕೇಂದ್ರಕ್ಕೆ ಅವಶ್ಯವಾದ ಮೊತ್ತ ಬಿಡುಗಡೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ಮಾಜಿ ಸಚಿವರಾದ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಪರಿಸರ ಮತ್ತು ಮೌಲ್ಯಮಾಪನ ಸಮಿತಿ ಅಧ್ಯಕ್ಷರಾದ ಎ.ಎನ್. ಮಹೇಶ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಜನರಲ್ ಸೆಕ್ರೆಟರಿ ಮಿಥುನ್ ರೈ, ರಾಜ್ಯ ಸ್ಕೌಟ್ ಆಯುಕ್ತರಾದ ಎಂ.ಎ. ಖಾಲಿದ್, ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಅಂತರಾಷ್ಟ್ರೀಯ ಉಪ ಆಯುಕ್ತರಾದ ಮಧು ಸೂದನ್ ಅವಲ, ಎಂಆರ್‌ಪಿಎಲ್‌ನ ಸಂಪತ್ ರೈ, ಚಿಕ್ಕ ಮಂಗಳೂರಿನ ಜಿಲ್ಲಾ ಮುಖ್ಯ ಆಯುಕ್ತರಾದ ಷಡಾಕ್ಷರಿ, ಜಿಲ್ಲಾ ಉಪನಿರ್ದೇಶಕರು ಪದವಿ ಪೂರ್ವ ಶ್ರೀಧರ್, ಜಿಲ್ಲಾ ಉಪನಿರ್ದೇಶಕರಾದ (ಆಡಳಿತ) ಗೋವಿಂದ ಮಡಿವಾಳ, ಜಿಲ್ಲಾ ಉಪನಿರ್ದೇಶಕರಾದ (ಅಭಿವೃದ್ದಿ) ರಾಜಲಕ್ಷ್ಮೀ, ಉಡುಪಿಯ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ, ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳದ ನಿರ್ದೇಶಕರಾದ ಡಾ.ಕೆ.ವಿ. ರಾವ್, ಉದ್ಯಮಿಗಳಾದ ಲಕ್ಷ್ಮೀಶ್ ಭಂಡಾರಿ, ಪುಷ್ಪರಾಜ್ ಜೈನ್, ಕಿಶೋರ್ ಆಳ್ವ, ಪ್ರದೀಪ್ ದುರ್ಗ, ರವೀಂದ್ರ ಆಳ್ವ ಮತ್ತಿತರರಿದ್ದರು.
ಸ್ಕೌಟ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರದ ಡಾ. ಮೋಹನ ಆಳ್ವ ಪ್ರಾಸ್ತಾವಿಕದಲ್ಲಿ, ಕಳೆದ ಬಾರಿ ಮೂಡುಬಿದಿರೆಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಜಾಂಬೂರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಆರಂಭವಾಗಿ ನೂರು ವರ್ಷ ಸಲ್ಲುವ ನೆನಪಿಗೆ ಯುವ ಶಕ್ತಿ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದರು. ಈ ಭವನದಲ್ಲಿ 12 ಕೋಟಿ ರೂಪಾಯಿ ವೆಚ್ಚವಾಗಿದ್ದು, ಇದುವರೆಗೆ 2.28 ಕೋಟಿ ರೂಪಾಯಿ ಮಾತ್ರ ಕೈಸೇರಿದೆ. ಉಳಿದ ಮೊತ್ತಕ್ಕೆ ದಾನಿಗಳ ಹಾಗೂ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಬಳಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮುಂದೆ ಬರಬೇಕು. ಈಗಾಗಲೇ ಇದಕ್ಕಾಗಿ ನೆರವು ನೀಡಿದವರನ್ನು ಸ್ಮರಿಸಿದರು. ಈ ಯುವ ಶಕ್ತಿ ಕೇಂದ್ರದಲ್ಲಿ 2,500 ಮಂದಿಯ ಸಾಮರ್ಥ್ಯ ಹೊಂದಿದ್ದು, ಎರಡು ಸಣ್ಣ ಹಾಲ್‌ಗಳಲ್ಲಿ ತಲಾ 500 ಮಂದಿಗೆ ಅವಕಾಶ ಇದೆ. 100 ಶೌಚಾಲಯಗಳಿದ್ದು, ಇದು ಸ್ಕೌಟ್ ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ವಿಶೇಷ ಸಂದರ್ಭಗಳಲ್ಲಿ ಪೊಲೀಸ್, ಮಿಲಿಟರಿ ಪಡೆಗಳ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು, ಉಡುಪಿ, ಚಿಕ್ಕಮಂಗಳೂರು, ಕೊಡಗು, ಕಾರವಾರ, ಬೆಂಗಳೂರು ದಕ್ಷಿಣ, ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ದಳನಾಯಕರುಗಳು ಮತ್ತು ವಿದ್ಯಾರ್ಥಿಗಳು ಒಟ್ಟು 2000 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ರಾಜೇಶ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿರವರು ವಂದನಾರ್ಪಣೆಗೈದರು.