ಗ್ರಾಮ ಪಂಚಾಯತ್ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ

ಶಿವಮೊಗ್ಗ ಜಿಲ್ಲೆ ಕುಂಸಿ ಸಮೀಪದ ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ರಘು ಎಂಬವರು ಫೆಬ್ರವರಿ 12ರಂದು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಡೆಯಲು ಮುಂದಾದ ಪಿಡಿಒ ಮಹೇಶ್ ನಾಯ್ಕ ಅವರ ಬಾಯಿಗೂ ವಿಷ ಬಿದ್ದಿದ್ದು, ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಗ್ರಾಮ ಠಾಣಾ ಜಾಗ ಸರ್ವೆ ಆಗಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಆಗಮಿಸಿದ್ದು, ಈ ವೇಳೆ ಪಿಡಿಒ ಮತ್ತು ಪಂಚಾಯತ್ ಸಿಬ್ಬಂದಿ ಸರ್ವೆಗೆ ಮುಂದಾಗಿರುವ ಬಗ್ಗೆ ದಾಖಲೆಗಳನ್ನು ತೋರಿಸಿದ ನಂತರ ಗ್ರಾಮಸ್ಥರು ತೆರಳಿದ್ದಾರೆ.
ಬಳಿಕ ಪಿಡಿಒ ಚೇಂಬರ್ ಗೆ ಬಂದ ಗ್ರಾಮ ಪಂಚಾಯತ್ ಅಧ್ಯಕ್ಷ ರಘು ವಿಷ ಸೇವಿಸಲು ಯತ್ನಿಸಿದ್ದಾರೆ. ವಿಷದ ಬಾಟಲಿ ಕಸಿದುಕೊಳ್ಳಲು ಮುಂದಾದ ವೇಳೆ ಪಿಡಿಒ ಬಾಯಿಗೂ ವಿಷ ಬಿದ್ದಿದೆ ಎನ್ನಲಾಗಿದೆ. ಈ ಬಗ್ಗೆ ಕುಂಸಿ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.