ಕೇಳುವವರಿಲ್ಲದ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಗೆ ಉಸಿರುಗಟ್ಟಿದ ಕರಾವಳಿ ಜನರು – ಹನೀಫ್ ಖಾನ್ ಕೊಡಾಜೆ, ಪ್ರಧಾನ ಕಾರ್ಯದರ್ಶಿ, ಮುಸ್ಲಿಂ ಸಮಾಜ ಬಂಟ್ವಾಳ

ರಾಷ್ಟ್ರೀಯ ಹೆದ್ಧಾರಿ 75ರ ಬಂಟ್ವಾಳ-ಅಡ್ಡಹೊಳೆ ಚತುಷ್ಪತ ರಸ್ತೆ ಕಾಮಗಾರಿಯು ನಿಧಾನವಾಗಿ ಸಾಗುತ್ತಿದೆ. ಅದರಲ್ಲೂ ಬಂಟ್ವಾಳದಿಂದ ಉಪ್ಪಿನಂಗಡಿವರೆಗಿನ ರಸ್ತೆ ಕಾಮಗಾರಿಯು ಅತ್ಯಂತ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನರು ರೋಸಿ ಹೋಗಿದ್ದಾರೆ. ಐದಾರು ವರ್ಷಗಳಿಂದ ಹೆದ್ದಾರಿ ಸಮೀಪದ ಮನೆಯಿರುವವರು, ಪ್ರಯಾಣಿಕರು, ಕಾರ್ಮಿಕರು ನಿತ್ಯ ನಿರಂತರ ಧೂಳು ಸೇವಿಸುತ್ತಾ ಶ್ವಾಸಕೋಶ ಸಂಬಂಧೀ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಂಟ್ವಾಳದಿಂದ ಉಪ್ಪಿನಂಗಡಿ ವರೆಗೆ ಇರುವ ಆಸ್ಪತ್ರೆ, ಕ್ಲಿನಿಕ್ ಗೆ ಪ್ರತಿದಿನ ಬರುವ ಹೆಚ್ಚಿನ ಜನರಲ್ಲಿ ಅಸ್ತಮಾ, ಕೆಮ್ಮು, ಶೀತದಂತಹ ಶ್ವಾಸಕೋಶ ಸಂಬಂಧೀ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಬಹುದು.
ರಸ್ತೆ ನಿರ್ಮಿಸುವಾಗ ಟ್ರಾಫಿಕ್ ನಿಯಂತ್ರಿಸಲು ಪರ್ಯಾಯ ಸರ್ವಿಸ್ ರಸ್ತೆ ಮಾಡಿಕೊಡಬೇಕೆಂದು ಹೆದ್ದಾರಿ ಮಸೂದೆಯಲ್ಲಿ ನಿಯಮ ಇದ್ದರೂ ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಹೊಸ ರಸ್ತೆ ನಿರ್ಮಾಣವಾಗುವವರೆಗೆ ಜನರು ಪ್ರಾಣ ಕೈಯಲ್ಲಿ ಹಿಡಿದು ಕೆಸರು ಗುಂಡಿಯಲ್ಲಿ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯನ್ನು ಇಲ್ಲಿ ನಿರ್ಮಿಸಲಾಗಿದೆ. ಹಿಂದೆ ಕೆಲವೊಂದು ಸಂಘಟನೆಗಳು ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧ ಪ್ರತಿಭಟಿಸಿದಾಗ ಜಿಲ್ಲಾಧಿಕಾರಿಯವರು ಕಾಟಾಚಾರಕ್ಕೆ ಭೇಟಿ ನೀಡಿ ಹೋದವರು ಮತ್ತೆ ಇದರ ಬಗ್ಗೆ ಗಮನ ಹರಿಸಿಲ್ಲ. ಜನಪ್ರತಿನಿಧಿಗಳಂತು ಎಸಿ ಹಾಕಿಕೊಂಡು ಇದೇ ಹೊಂಡ ಗುಂಡಿಯಲ್ಲಿ ತಮ್ಮ ಕಾರಿನಲ್ಲಿ ದಿನ ನಿತ್ಯ ಪ್ರಯಾಣಿಸುತ್ತಿದ್ದರೂ ರಸ್ತೆ ಕಾಮಗಾರಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ಧಾರೆ.
ಪಕ್ಕದ ಕೇರಳದಲ್ಲಿ ಇದೇ ರೀತಿ ದ್ವಿಪಥ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಬದಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಸರಿಯಾದ ಸರ್ವಿಸ್ ರಸ್ತೆ ನಿರ್ಮಿಸಿದ ನಂತರವೇ ಅಲ್ಲಿ ಮುಖ್ಯ ರಸ್ತೆಯ ಕೆಲಸ ಆರಂಭವಾಗುತ್ತದೆ. ಟ್ರಾಫಿಕ್ ಜಾಮ್ ಆಗದಂತೆ ಪೂರ್ವ ತಯಾರಿ ನಡೆಸಲಾಗಿದೆ. ಜನರ ಆರೋಗ್ಯದ ಬಗ್ಗೆ ಗಮನ ನೀಡಲಾಗಿದೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಮಾತ್ರ ಯಾಕೆ ಇಂತಹ ನಿರ್ಲಕ್ಷ್ಯ ಎಂಬುದು ಯಕ್ಷ ಪ್ರಶ್ನೆ. ಜನರಾಗಿಯೇ ಪ್ರಶ್ನಿಸದ ಹೊರತು ಇದು ಸದ್ಯಕ್ಕೆ ಪರಿಹಾರವಾಗುವಂತೆ ಕಾಣುತ್ತಿಲ್ಲ.