ಬೋಳಿಯಾರಿನಲ್ಲಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಚಿಕಿತ್ಸೆ ಫಲಕಾರಿಯಾಗದೆ ರೋಷನ್ ಮೋರಸ್ ಮೃತ್ಯು

ಉಳ್ಳಾಲದ ಬೋಳಿಯಾರ್ ನಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ಫೆಬ್ರವರಿ 12ರಂದು ರಾತ್ರಿ ಬೋಳಿಯಾರಿನಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಜೇಶ್ವರ ತಾಲೂಕು ವರ್ಕಾಡಿ ಗ್ರಾಮದ ನಲೆಂಗಿ ನಿವಾಸಿ 34ವರ್ಷ ಪ್ರಾಯದ ರೋಷನ್ ಮೋರಸ್ ಮೃತ ಯುವಕ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್. ಈತ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಬೋಳಿಯಾರಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯರು ತಕ್ಷಣ ಮಂಗಳೂರಿನ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಮತ್ತೆ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಫೆಬ್ರವರಿ 13ರಂದು ಗುರುವಾರ ಸಂಜೆ ಸಾವನ್ನಪ್ಪಿದ್ದಾರೆ.
ಮೃತರಿಗೆ ಮದುವೆ ಆಗಿ ನಾಲ್ಕು ವರ್ಷಗಳಾಗಿದ್ದು ಐದು ತಿಂಗಳ ಹೆಣ್ಣು ಮಗುವಿದೆ. ಇವರು ಪತ್ನಿ ಹಾಗೂ ಹೆಣ್ಣು ಮಗುವನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.