ಕುದುರೆ ಏರಿ ಮದುವೆ ಮಂಟಪಕ್ಕೆ ಬರುತ್ತಿದ್ದಾಗಲೇ ವರನಿಗೆ ಹಾರ್ಟ್ ಅಟ್ಯಾಕ್

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸಹೋದರಿಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಹೃದಯಾಘಾತದಿಂದ ಸಾವನಪ್ಪಿದ್ದ ಸುದ್ದಿ ವೈರಲ್ ಆಗಿತ್ತು, ಇದೀಗ ವರನೊಬ್ಬ ಕುದುರೆ ಏರಿ ಇನ್ನೇನು ಮದುವೆ ಮಂಟಪ ಹತ್ತಿರ ಬರುತ್ತಿರುವ ವೇಳೆ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಮಧ್ಯಪ್ರದೇಶದ ಶಿಯೋಪುರದಲ್ಲಿ ಫೆಬ್ರವರಿ 14ರಂದು ಶುಕ್ರವಾರ ವರದಿಯಾಗಿದೆ.
ಮೃತರನ್ನು ಪ್ರದೀಪ್ ಜಾಟ್ ಎಂದು ಗುರುತಿಸಲಾಗಿದ್ದು, ಇವರು NSUI ನ ಶಿಯೋಪುರ್ ಜಿಲ್ಲೆಯ ಅಧ್ಯಕ್ಷರಾಗಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಯೋಗೇಶ್ ಜಾಟ್ ಅವರ ಸೋದರಳಿಯ. ಮೃತ ಪ್ರದೀಪ್ ಮದುವೆ ಸಂಭ್ರಮದಲ್ಲಿ ಕುದುರೆ ಏರಿ ಮಂಟಪಕ್ಕೆ ಬರುತ್ತಿದ್ದರು, ಇವರ ಸುತ್ತ ಸಂಬಂಧಿಕರು ಸಂತೋಷದಿಂದ ಡ್ಯಾನ್ಸ್ ಮಾಡುತ್ತಿದ್ದರು, ಈ ವೇಳೆ ಏಕಾಏಕಿ ಕುದುರೆಯ ಮೇಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂತೋಷದಲ್ಲಿದ್ದ ಮದುವೆ ಮನೆ ವರನ ಸಾವನಿಂದಾಗಿ ಸಾವಿನ ಮನೆಯಾಗಿ ಬದಲಾಗಿತ್ತು, ಮೆಹಂದಿ ಹಚ್ಚಿಕೊಂಡು ಕುಳಿತಿದ್ದ ವಧು ಪ್ರಜ್ಞೆ ತಪ್ಪಿದ್ದಾಳೆ ಎಂದು ತಿಳಿದು ಬಂದಿದೆ.