March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇವರಿಗೆ ಹತ್ತಿರವಾದ ಸಮಾಜ ದೇವಾಡಿಗ ಸಮಾಜ – ಶಾಸಕ ಉಮಾನಾಥ್ ಕೋಟ್ಯಾನ್

ಹಳೆಯಂಗಡಿ ದೇವಾಡಿಗ ಭವನ ಲೋಕಾರ್ಪಣೆ

ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಹಳೆಯಂಗಡಿ ಇದರ ದೇವಾಡಿಗ ಭವನದ ನೆಲ ಅಂತಸ್ತು ಲೋಕಾರ್ಪಣಾ ಸಮಾರಂಭ ಫೆಬ್ರವರಿ 16ರಂದು ಆದಿತ್ಯವಾರ ಬೆಳಗ್ಗೆ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು, “ನಾವೆಲ್ಲರೂ ಹಿಂದೂಗಳು, ಹಿಂದಿನ ಕಾಲದಲ್ಲಿ ಆಯಾ ಕುಲಕಸುಬಿಗೆ ಅನುಗುಣವಾಗಿ ಜಾತಿಗಳನ್ನು ವಿಂಗಡಿಸಲಾಯಿತು. ಅದರಲ್ಲಿ ದೇವರಿಗೆ ಪ್ರಿಯವಾದ ಹತ್ತಿರವಾದ ದೇವಾಡಿಗ ಸಮಾಜ ಕೂಡ ಒಂದು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಒಂದು ಕೋಟಿ ರೂಪಾಯಿ ಅನುದಾನವನ್ನು ಸಂಘದ ಕಟ್ಟಡಕ್ಕೆ ಘೋಷಿಸಲಾಗಿತ್ತು. ಆದರೆ ಈಗಿನ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ಮಂಜೂರಾದ ಹಣ ಬಿಡುಗಡೆಯಾಗದೆ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ನನ್ನ ಶಾಸಕರ ನಿಧಿಯಿಂದ 25 ಲಕ್ಷ ರೂಪಾಯಿ ನೀಡುತ್ತೇನೆ ಮತ್ತು ಸರಕಾರದ ಅನುದಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಲ್ಲಿ ನಿರ್ಮಾವಾಗಿರುವ ಭವ್ಯವಾದ ದೇವಾಡಿಗ ಭವನ ಮುಂದಿನ ದಿನಗಳಲ್ಲಿ ಸಂಪೂರ್ಣಗೊಂಡು ಸಮಾಜದ ಜನರಿಗೆ ಅನುಕೂಲವಾಗುವ ರೀತಿ ಬೆಳೆಯಲಿ. ಇದಕ್ಕಾಗಿ ಶ್ರಮಿಸಿದ ಸಮಾಜದ ಎಲ್ಲರಿಗೂ ಅಭಿನಂದನೆಗಳು” ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತಾಡಿ, “ರಾಜ್ಯದ ಚುಕ್ಕಾಣಿ ಹಿಡಿದಂತಹ ಒಬ್ಬ ನಾಯಕನನ್ನು ಕೊಟ್ಟ ಸಮಾಜ ಇದ್ದರೆ ಅದು ದೇವಾಡಿಗ ಸಮಾಜ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬಡವರ ಶೋಷಣೆ ನಿರಂತರವಾಗಿ ನಡೆಯುತ್ತಿತ್ತು. ಆದರೆ ಸ್ವಾತಂತ್ರ್ಯ ಸಿಕ್ಕ ಬಳಿಕ ಆದ ಸಾಮಾಜಿಕ ಬದಲಾವಣೆಯಲ್ಲಿ ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ವೀರಪ್ಪ ಮೊಯಿಲಿಯಂತ ನಾಯಕರು ರಾಜ್ಯದ ಮುಖ್ಯಮಂತ್ರಿಯಾದರು. MRPL ನಂತಹ ಬೃಹತ್ ಕಂಪೆನಿ ಜಿಲ್ಲೆಗೆ ಅವರ ಕೊಡುಗೆಯಾಗಿದೆ. ಅಷ್ಟೇ ಅಲ್ಲದೆ ಶಿಕ್ಷಣ, ಉದ್ಯಮ, ಕೈಗಾರಿಕಾ ಕ್ಷೇತ್ರದಲ್ಲಿ ಅವರ ಕೊಡುಗೆ ಗಮನಾರ್ಹವಾದುದು” ಎಂದು ಸ್ಮರಿಸಿದರು.

ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಮಾತಾಡಿ, “ದೇವಾಡಿಗ ಸಮಾಜದ ಕನಸು ಇಂದು ಭಾಗಶ ಪೂರ್ಣವಾಗಿದೆ. ಆದರೆ ಇನ್ನುಳಿದ ಕೆಲಸಗಳು ಸುಸೂತ್ರವಾಗಿ ನಡೆದು ಸರಕಾರದ ಅನುದಾನ ದೊರೆತು ಆದಷ್ಟು ಬೇಗನೆ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿ. ಕಟ್ಟಡ ನಿರ್ಮಾಣ ಮಾತ್ರವಲ್ಲದೆ ಸಮಾಜದ ಮಕ್ಕಳ ಶಿಕ್ಷಣಕ್ಕೂ ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸಮಾಜಕ್ಕೆ ಹಣ ಕೊಟ್ಟರೆ ವ್ಯರ್ಥವಾಗುವುದಿಲ್ಲ ಅದರ ಪ್ರತಿಫಲ ನಮಗೆ ಇನ್ನೊಂದು ರೂಪದಲ್ಲಿ ಸಿಕ್ಕೇ ಸಿಗುತ್ತದೆ. ಹೀಗಾಗಿ ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ದಾನ ಮಾಡಿ” ಎಂದು ಕರೆ ನೀಡಿದರು.

ವೇದಿಕೆಯಲ್ಲಿ ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಇದರ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಕೃಷ್ಣ ಹೆಗ್ಡೆ ಮಿಯಾರು, ವಸಂತ್ ಬೆರ್ನಾರ್ಡ್, ರವಿ ಎಸ್. ದೇವಾಡಿಗ ಮಾಜಿ ಅಧ್ಯಕ್ಷರು ಮುಂಬೈ ದೇವಾಡಿಗ ಸಂಘ, ಗ್ರಾಮ ಪಂಚಾಯತ್ ಹಳೆಯಂಗಡಿ ಅಧ್ಯಕ್ಷೆ ಪೂರ್ಣಿಮಾ, ನಾಸಿಕ್ ಹೋಟೆಲ್ ಉದ್ಯಮಿ ರವೀಶ್ ಮೂಲ್ಕಿ, ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷ ಪ್ರವೀಣ್ ನಾರಾಯಣ್‌, ಮಾಜಿ ಅಧ್ಯಕ್ಷ ವಾಸು ದೇವಾಡಿಗ, ಉದ್ಯಮಿ ನಾಗರಾಜ್ ಪಡುಕೋಣೆ, ಕೊಲ್ಲೂರು ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಅಶೋಕ್ ಮೊಯಿಲಿ, ರತ್ನಾಕರ್ ಜಿ.ಎಸ್., ಹಿರಿಯಡ್ಕ ಮೋಹನ್‌ದಾಸ್, ನಿವೃತ್ತ ಪ್ರಾಂಶುಪಾಲ ಬಾಬು ದೇವಾಡಿಗ ಆಂಬ್ಲಮೊಗರು, ಕೆ.ಜೆ. ದೇವಾಡಿಗ, ದೇವಾಡಿಗರ ಸೇವಾ ಸಂಘ ಉಡುಪಿ ಇದರ ಅಧ್ಯಕ್ಷ ಗಣೇಶ್ ದೇವಾಡಿಗ ಅಂಬಲಪಾಡಿ, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ಧನ್, ಯುವವೇದಿಕೆ ಅಧ್ಯಕ್ಷ ಗಣೇಶ್ ದೇವಾಡಿಗ ಪಂಜ, ಕಟ್ಟಡ ಸಮಿತಿಯ ಪರಮೇಶ್ವರ್, ಮೀರಾ ಬಾಯಿ ಕೆ., ವಿಜಯಲಕ್ಷ್ಮಿ ಜನಾರ್ಧನ್, ರಮೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಸಂತಿ ದೇವಾಡಿಗ ಪಡುಮನೆ ಹಾಗೂ ಗಂಗಾ ಡಿ. ದೇವಾಡಿಗ ಪಾವಂಜೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನೇಹಾ ಯಾದವ ದೇವಾಡಿಗ ಹಳೆಯಂಗಡಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಯಾದವ ದೇವಾಡಿಗ ಅತಿಥಿಗಳನ್ನು ಸ್ವಾಗತಿಸಿದರು. ಜನಾರ್ಧನ್ ಪಡುಪಣಂಬೂರು ಪ್ರಾಸ್ತಾವಿಕ ಮಾತನ್ನಾಡಿದರು. ಬೆಳಗ್ಗೆ ಗಣಪತಿ ಹೋಮ, ಪ್ರವೇಶ, ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಮಹಾ ಅನ್ನಸಂತರ್ಪಣೆ ಜರುಗಿತು.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page