April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫೆಬ್ರವರಿ 20ರಂದು ಮಂಗಳೂರಿನಲ್ಲಿ ಉಡುಪಿ – ಕಾಸರಗೋಡು 400ಕೆವಿ ಮತ್ತು ಪಾಲಡ್ಕ-ಕಡಂದಲೆ 400/220 KV ವಿದ್ಯುತ್‌ ಲೈನ್‌ ಯೋಜನೆ ವಿರುದ್ದ “ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆ”

ಕಥೊಲಿಕ್ ಸಭಾ ಮಂಗಳೂರು – ಉಡುಪಿ ನೇತೃತ್ವ; ವಿವಿಧ ಸಂಘಟನೆಗಳ ಸಹಭಾಗಿತ್ವ 

ಮಂಗಳೂರು ಫೆಬ್ರವರಿ 17: ಉಡುಪಿ-ಕಾಸರಗೋಡು 400 KV ವಿದ್ಯುತ್ ಲೈನ್ ಯೋಜನೆ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿಯೆನಿಸಿಕೊಂಡಿರುವ UKTL-ಸ್ಟೆರ್ ಲೈಟ್ ಪವರ್ (Sterlite Power) ಕಂಪನಿಯವರು ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾತ್ಮಕ ಮಾರ್ಗಸೂಚಿಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆನೇ ಕಾನೂನು ಬಾಹಿರ ಕಾರ್ಯ ನಡೆಸುತ್ತಿದ್ದು, ಪ್ರಕೃತಿ ವಿರೋಧಿಯಾಗಲಿರುವ ಇಂತಹ ವಿನಾಶಕಾರೀ ಯೋಜನೆಯ ಪ್ರಸ್ತಾವಿತ ಮಾರ್ಗವನ್ನು ಬದಲಾವಣೆ ಮಾಡಿ ಅ ಅನುಷ್ಠಾನಗೊಳಿಸುವರೇ ಒತ್ತಾಯಿಸಿ  ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.), ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.), ಉಡುಪಿ ಹಾಗೂ ಕಾಸರಗೋಡು 400 KV ಮತ್ತು ಪಾಲಡ್ಕ-ಕಡಂದಲೆ 400/220 KV ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ, ಉಡುಪಿ, ದಕ್ಷಿಣ ಕನ್ನಡ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ  “ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆಯು ಫೆಬ್ರವರಿ 20ರಂದು ಗುರುವಾರ ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜಾ ಪಾನೀರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 20ರಂದು ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ  ಮಂಗಳೂರಿನ ಬಲ್ಮಠದಿಂದ ಮಿನಿ ವಿಧಾನ ಸೌಧದವರೆಗೆ “ಹಕ್ಕೋತ್ತಾಯ ಜಾಥಾ” ನಡೆಸಿ ನಂತರ 11.00 ಗಂಟೆಗೆ “ಬೃಹತ್ ಪ್ರತಿಭಟನಾ ಸಭೆ” ಯನ್ನು ಮಿನಿ ವಿಧಾನ ಸೌಧದ ಎದುರು ನಡೆಯಲಿದ್ದು, ಸುಮಾರು 15 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಜನಾ ಸಂತ್ರಸ್ತರು, ಕೃಷಿಕರು ಹಾಗೂ ರೈತ ಪರ, ಪರಿಸರ ಪರ ಕಾಳಜಿ ಉಳ್ಳ ಸಮಾನ ಮನಸ್ಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಬಂಧುಗಳೆಲ್ಲರನ್ನು ಜೊತೆಯಾಗಿಸಿಕೊಂಡು ಘನ ಸರಕಾರಗಳನ್ನು, ಜನಪ್ರತಿನಿಧಿಗಳನ್ನು, ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ಕಾರ್ಯ ನಡೆಸಲಾಗುವುದು ಎಂದರು.

ರೈತ ಸಂಘ -ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ (ರಿ.) ಕರ್ನಾಟಕ ಪ್ರದೇಶ, ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ, ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ – ಸಂಸ್ಥೆಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಧರ್ಮಕ್ಷೇತ್ರಗಳ ಐ.ಸಿ.ವೈ.ಎಂ. ಸಂಘಟನೆಗಳು ಮತ್ತು ಕಾಸರಗೋಡು ಜಿಲ್ಲೆಯ ಸಂಘಟನೆಗಳು ಹಕ್ಕೊತ್ತಾಯ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪಾಲಡ್ಕ-ಕಡಂದಲೆ 400/220KV KPTCL ವಿದ್ಯುತ್ ಪ್ರಸರಣ ಮಾರ್ಗ (KPTCL) ಕಾಮಗಾರಿಯಲ್ಲಿಯೂ ಸ್ಪಷ್ಟ ಕಾನೂನಾತ್ಮಕ ಮಾನದಂಡಗಳನ್ನು ಗಾಳಿಗೆ ತೂರಿ ದಬ್ಬಾಳಿಕೆ, ಬಲಾತ್ಕಾರ ತಂತ್ರಗಳ ಮೂಲಕ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತಾವಿತ ಯೋಜನೆಗಳ ಬಗ್ಗೆ ಪ್ರಾಥಮಿಕ ಮಾಹಿತಿಗಾಗಿ ಯಾವುದೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನೇ ನಡೆಸದೇ, ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರುಗಳಿಗೆ ಯಾವುದೇ ಕಾನೂನು ಮಾನ್ಯತಾ ನೋಟಿಸು, ತಿಳುವಳಿಕೆ ಪತ್ರಗಳನ್ನು ನೀಡದೆಯೇ, ಭೂಮಾಲಕರುಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ, ಭೂಮಾಲಕರು, ಸಾರ್ವಜನಿಕರು ಮತ್ತು ಯೋಜನಾ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ತೀವ್ರ ವಿರೋಧವನ್ನು ದಿಕ್ಕರಿಸಿ, ಸೌಜನ್ಯ ಮೀರಿ ದಬ್ಬಾಳಿಕೆ ಹಾಗೂ ಅಮಾನವೀಯ ವರ್ತನೆ ಮೂಲಕ ಕಾಮಗಾರಿ ನಡೆಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಫಲವತ್ತಾದ ಕೃಷಿ ಭೂಮಿ, ಸಮೃದ್ಧ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು, ಬೃಹತ್ ಗಾತ್ರದ ವಿವಿಧ ಅಪರೂಪದ ಜಾತಿಯ ಮರಗಳನ್ನೊಳಗೊಂಡ ಸಂರಕ್ಷಿತ ಅರಣ್ಯ ಸಂಪತ್ತನ್ನು ಸರ್ವನಾಶಗೊಳಿಸುವ ಈ ಯೋಜನಾ ಮಾರ್ಗಕ್ಕೆ ನಮ್ಮೆಲ್ಲರ ತೀವ್ರ ವಿರೋಧವಿದ್ದು ಪರ್ಯಾಯ ಮಾರ್ಗಗಳಾದ ಸಮುದ್ರ ಮಾರ್ಗ, ಹೆದ್ದಾರಿ, ಸಾರ್ವಜನಿಕ ರಸ್ತೆ ಅಥವಾ ರೈಲ್ವೆ ಹಳಿ ಪಕ್ಕ, ಇಲ್ಲವೇ ಭೂಗತ ಮಾರ್ಗದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ನಮ್ಮೆಲ್ಲರ ಹಕ್ಕೋತ್ತಾಯ, ಪ್ರತಿಭಟನೆ, ಕಾನೂನು ಹೋರಾಟ ಕಳೆದ 5 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಈಗಲೂ ನಮ್ಮ ಈ ಸ್ಪಷ್ಟ ಬೇಡಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ ಎಂದರು.

ಈ ಕುರಿತು ಉಭಯ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಶಾಸಕರುಗಳು, ಸಂಸದರುಗಳು, ಜಿಲ್ಲಾಧಿಕಾರಿಗಳು, ಗೌರವಾನ್ವಿತ ರಾಷ್ಟ್ರಪತಿಯವರು, ಮಾನ್ಯ ಪ್ರಧಾನ ಮಂತ್ರಿಯವರು, ಘನತೆವೆತ್ತ ರಾಜ್ಯಪಾಲರು, ಮುಖ್ಯಮಂತ್ರಿಯವರು, ರಾಜ್ಯ ಮತ್ತು ಕೇಂದ್ರದ ಇಂಧನ ಸಚಿವರುಗಳು, ವಿರೋಧ ಪಕ್ಷಗಳ ನಾಯಕರುಗಳಯಾದಿಯಾಗಿ ಈ ಯೋಜನೆಯಿಂದ ಆಗುತ್ತಿರುವ ಮತ್ತು ಮುಂದೆ ಆಗಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ನಮ್ಮ ಸ್ಪಷ್ಟ ವಿರೋಧದ ಹಕ್ಕೋತ್ತಾಯ ಮನವಿಗಳನ್ನು ಹಲವಾರು ಬಾರಿ ಸಲ್ಲಿಸಿ, ನ್ಯಾಯಯುತ ನಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚಿಕೊಂಡಿದ್ದೇವೆ. ಆದರೆ ಈವರೆಗೂ ಯಾರಿಂದಲೂ ಪರಿಣಾಮಕಾರೀ ಸ್ಪಂದನೆ ಶೂನ್ಯವಾಗಿರುವ ಜೊತೆಗೆ ಮತ್ತೆ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಮತ್ತು ರಾಜ್ಯ ಸರಕಾರ, ಉಭಯ ಜಿಲ್ಲಾಡಳಿತ, ಜನಪ್ರತಿನಿದಿಗಳ ಕೃಪಾ ಕಟಾಕ್ಷದಿಂದ UKTL-Sterlite ಕಂಪನಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಹಾಗೂ ಪಾಲಡ್ಕ-ಕಡಂದಲೆ (KPTCL) ಯೋಜನೆಯ ಗುತ್ತಿಗೆದಾರರಿಂದ ದಿನಕ್ಕೊಂದು ಕಡೆ ಸಮಸ್ಯೆಯನ್ನು ನಮ್ಮ ಜನ ಎದುರಿಸುವಂತಾಗಿದೆ ಎಂದರು.

ಈ ಪ್ರಕೃತಿ ವಿರೋಧಿ ಯೋಜನೆಯಿಂದಾಗಲಿರುವ ಜ್ವಲಂತ ಸಮಸ್ಯೆಗಳು :

ಈ ಯೋಜನೆ ಜಾರಿಯಾದಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುಣಚದ ವರೆಗಿನ 27 ಗ್ರಾಮಗಳ ಮತ್ತು ಕಾಸರಗೋಡು ಜಿಲ್ಲೆಯವರೆಗಿನ 115 ಕಿ.ಮೀ. ಉದ್ದ ಮತ್ತು 46 ಮೀಟರ್ ಅಗಲದ ಪ್ರಸ್ತಾವಿತ ಯೋಜನಾ ಮಾರ್ಗಕ್ಕಾಗಿ ನೇರವಾಗಿ 1150 ಎಕರೆ ಸಮೃದ್ಧ ಕೃಷಿ ಭೂಮಿ ಜೊತೆಗೆ ಈ ಲೈನ್ ಇಕ್ಕೆಲಗಳಲ್ಲಿ ಯಾವುದೇ ಮನೆ, ಕೊಟ್ಟಿಗೆ, ಗೋಡೌನ್,ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಿಕೊಳ್ಳಲು ಕೂಡಾ ಅವಕಾಶವಾಗದೆ, ಸುಮಾರು 2300 ಎಕರೆ ಜಮೀನು ಸೇರಿ ಒಟ್ಟು 3450 ಕ್ಕಿಂತ ಹೆಚ್ಚು ಜಮೀನು ಈ ಯೋಜನೆಗೆ ಸರ್ವನಾಶವಾಗಲಿದೆ. ಯೋಜನಾ ವ್ಯಾಪ್ತಿಯ ಸುಮಾರು 2.65 ಲಕ್ಷದಷ್ಟು ಅಡಿಕೆ ಮರ ಗನ್ನು ಬುಡ ಸಮೇತ ಕಡಿದು ಹಾಕಲಾಗುತ್ತದೆ. ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ತೆಂಗಿನ ಮರಗಳ ಮಾರಣ ಹೋಮವಾಗಲಿದೆ. ಸುಮಾರು 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿಗಳು ನಾಶವಾಗಲಿದೆ.

ಸುಮಾರು 1.5 ಲಕ್ಷ ರಬ್ಬರ್ ಮರಗಳು ನೆಲಸಮವಾಗಲಿವೆ. ಸುಮಾರು 25 ಸಾವಿರ ಹಲಸಿನ ಮರ, 28 ಸಾವಿರ ಮಾವಿನ ಮರ 2.5 ಲಕ್ಷಕ್ಕಿಂತ ಹೆಚ್ಚು ಬೃಹತ್ ಗಾತ್ರದ ವಿವಿಧ ಜಾತಿಯ ಕಾಡು ಮರಗಳು ಮತ್ತು ಔಷಧೀಯ ಗುಣವುಳ್ಳ ಸಹಸ್ರಾರು ವೈವಿದ್ಯಮಯ ಅರಣ್ಯ ಸಂಪತ್ತು ನಿರ್ನಾಮವಾಗಲಿದೆ. ಲಕ್ಷಾಂತರ ಸಂಖ್ಯೆಯ ಬಾಳೆ, ಪೇರಳೆ, ಸಪೋಟ ಮುಂತಾದ ತೋಟಗಾರಿಕಾ ಬೆಳೆ ತೋಟಗಳು ಸರ್ವ ನಾಶವಾಗಲಿದೆ. ಬಹುಮುಖ್ಯವಾಗಿ 328 ವಾಸ್ತವ್ಯದ ಮನೆಗಳು, 26 ದೈವಸ್ಥಾನ, 16 ದೇವಸ್ಥಾನ, 8 ಮಸೀದಿ, 14 ಶಾಲೆಗಳು, ಮತ್ತು 13 ಕ್ರೈಸ್ತ ಧರ್ಮದ ಇಗರ್ಜಿ-ಪ್ರಾರ್ಥನಾ ಮಂದಿರಗಳು ಈ ಯೋಜನಾ ಮಾರ್ಗಕ್ಕಾಗಿ ಬಲಿಯಾಗಲಿವೆ. ಇವೆಲ್ಲದರ ಜೊತೆಗೆ ಈ ಪ್ರಾಕೃತಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿರುವ ಕೋಟ್ಯಂತರ ಪಶು-ಪಕ್ಷಿಗಳು, ಜಲಚರ ಜೀವಿಗಳು, ಜೀವ ವೈವಿದ್ಯ ಸಂಕುಲಗಳನ್ನೆಲ್ಲಾ ಸರ್ವ ನಾಶಗೊಳಿಸಲಿದೆ.  ಈ ಯೋಜನೆಯಿಂದ ಹರಿದಾಡಲಿರುವ ಬೃಹತ್ ಪ್ರಮಾಣದ ವಿದ್ಯುತ್ ಶಕ್ತಿಯಿಂದ ಸೃಷ್ಟಿಯಾಗಲಿರುವ ವಿಕಿರಣ, ವಿದ್ಯುತ್ ಕಾಂತೀಯ ಅಲೆಗಳಿಂದ ಜನ, ಜಾನುವಾರುಗಳ ಆರೋಗ್ಯದ ಮೇಲಾಗಲಿರುವ ಕ್ಯಾನ್ಸರ್, ಬಂಜೆತನ ಮುಂತಾದ ಹಲವಾರು ಮಾರಣಾಂತಿಕಾ ಕಾಯಿಲೆಗಳಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಹೆಚ್ಚು ಈ ಬಗ್ಗೆ ಜಾಥಾದಲ್ಲಿ ಆಡಳಿತ ವ್ಯವಸ್ಥೆಯ ಗಮನ ಸೆಳೆಯಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಮಾಜಿ ಕೇಂದ್ರೀಯ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಸುರತ್ಕಲ್ ವಯಲದ ಅಧ್ಯಕ್ಷ ಲೋರೆನ್ಸ್ ಡಿಸೋಜ, ಹೋರಾಟ ಸಮಿತಿ ಸದಸ್ಯರಾದ ವಿಕ್ಟರ್ ಕಡಂದಲೆ, ಚಂದ್ರಹಾಸ ಶೆಟ್ಟಿ, ಕೃಷ್ಣ ಪ್ರಸಾದ್ ತಂತ್ರಿ, ಸಂತ್ರಸ್ಥರಾದ ಆಲ್ಫೋನ್ಸ್ ಡಿಸೋಜ, ಮೊದಲಾದವರು ಉಪಸ್ಥಿತರಿದ್ದರು.

You may also like

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್
News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88

You cannot copy content of this page