“ಮುಮ್ತಾಜ್ ಅಲಿ, ಆಯಿಷಾ ರೆಹಮತ್ ಪರಿಚಯ ನನಗಿಲ್ಲ, ಆದರೂ ಕೇಸಲ್ಲಿ ಫಿಕ್ಸ್ ಮಾಡಿದ್ರು!” -ಶಾಫಿ ನಂದಾವರ ಆರೋಪ

ಮಂಗಳೂರು: “ನಾನು ಹಲವು ವರ್ಷಗಳಿಂದ ಪರವಾನಿಗೆ ಹೊಂದಿದ ಮರಳು ಮತ್ತು ಹಳೆ ವಾಹನಗಳ ಖರೀದಿ ಮತ್ತು ಮಾರಾಟದ ವ್ಯವಹಾರ ಮಾಡುತ್ತಾ ಬಂದಿದ್ದೇನೆ. ಧಾರ್ಮಿಕ ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದೇನೆ. ಧಾರ್ಮಿಕವಾಗಿ ನಂದಾವರ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿಯೂ, ಪ್ರತಿಷ್ಠಿತ ಸಮಸ್ತ ಸಂಘಟನೆ ಅಧೀನದ ಸಜಿಪ ರೇಂಜ್ ಮದ್ರಸಾ ಮೆನೇಜ್ ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಶಂಶುಲ್ ಉಲಮಾ ಎಜ್ಯುಕೇಶನ್ ಟ್ರಸ್ಟ್ (ರಿ.) ನಂದಾವರ ಇದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. 2024 ಅಕ್ಟೋಬರ್ 6ರಂದು ಉದ್ಯಮಿ ಮತ್ತಾಝ್ ಅಲಿ ಅವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಕೂಳೂರು ನದಿಯಲ್ಲಿ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಆಯಿಷಾ ರೆಹಮತ್ ಎಂಬಾಕೆ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದರೆ ಇತರ ಆರೋಪಿಗಳ ಸ್ಥಾನದಲ್ಲಿ ನನ್ನನ್ನೂ ಸೇರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಮೇಲೆ ಬ್ಲಾಕ್ ಮೇಲ್ ಆರೋಪ ಹೊರಿಸಿ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು“ ಎಂದು ಶಾಫಿ ನಂದಾವರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ವ್ಯವಹಾರ ನಿಮಿತ್ತ ನಾನು ಬಾಗಲಕೋಟೆಗೆ ಹೋಗಿ ಅಕ್ಟೋಬರ್ 8ರಂದು ಹಿಂದಕ್ಕೆ ಬರುವಾಗ ಪೊಲೀಸರು ಬಂಧಿಸಿದ್ದರು. ಆದರೆ ಯಾಕೆ ಬಂಧಿಸಲಾಗಿದೆ ಎನ್ನುವ ಮಾಹಿತಿ ನನಗೆ ಇರಲಿಲ್ಲ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದೆ ಠಾಣೆಗೆ ಹೋದ ಬಳಿಕ ಮಮಾಝ್ ಅಲಿ ಅವರ ಆತ್ಮಹತ್ಯೆಗೆ ಆಯಿಷಾ ರೆಹಮತ್‌ಳನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ವಾಸ್ತವವಾಗಿ ನನಗೆ ಮತ್ತಾಝ್ ಅಲಿ ಹಾಗೂ ಆಯಿಷಾ ರೆಹಮತ್ ನವರ ಪರಿಚಯವೇ ಇರಲಿಲ್ಲ. ಅವರನ್ನು ಎಂದಿಗೂ ಭೇಟಿಯಾಗಿದ್ದಾಗಲೀ, ದೂರವಾಣಿ ಕರೆಯನ್ನು ಮಾಡಿದ್ದಾಗಲೀ ಮಾಡಿಲ್ಲ. ನಾನು ಇದುವರೆಗೂ ಯಾರೊಬ್ಬರಿಗೂ ಮೆಸೇಜ್ ಮಾಡಿದ ಉದಾಹರಣೆಯೂ ಇಲ್ಲ. ನಾನು ಇತರರಿಗೆ ಸಹಾಯ ಮಾಡಿದ್ದೇನೆ ಹೊರತು ಯಾರಿಂದಲೂ ಏನನ್ನೂ ಪಡೆದಿಲ್ಲ. ಇದುವರೆಗೆ ಇನ್ನೊಬ್ಬರ ಹಣದಲ್ಲಿ ಚಹಾವನೂ ಕುಡಿದಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಹಾಗಿದ್ದರೂ ನನ್ನ ಮೇಲೆ ಹಣಕ್ಕಾಗಿ ಬ್ಲಾಕ್‌ಮೇಲ್‌ನಂಥಹ ಗಂಭೀರವಾದ ಆರೋಪವನ್ನು ಹೊರಿಸಿ ಜೈಲಿಗೆ ಕಳಿಸಲಾಗಿದ್ದು ನೂರು ದಿನ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಮಾಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಅಪಪ್ರಚಾರವನ್ನು ಮಾಡಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪುರಾವೆ ಇಲ್ಲದೆ ಸುಳ್ಳು ಸುದ್ದಿ ಹರಡಿಸಲಾಗಿದೆ” ಎಂದು ಅಳಲು ಹಂಚಿಕೊಂಡರು.
“ಯಾವುದೇ ತಪ್ಪು ಮಾಡದಿದ್ದರೂ ಪೊಲೀಸ್ ಠಾಣೆ, ಜೈಲು, ನ್ಯಾಯಾಲಯಕ್ಕೆ ಅಲೆದಾಡುವಂತಾಯಿತು. ಈ ಸಮಯದಲ್ಲಿ ನನ್ನ ಆರೋಗ್ಯವು ತೀರಾ ಹದಗೆಟ್ಟು ಚಿಕಿತ್ಸೆಗೆ ಹಣವಿಲ್ಲದೆ ತುಂಬಾ ಕಷ್ಟಪಡಬೇಕಾಯಿತು. ನನ್ನ ಮೇಲೆ ಮಾಡಿದ ಸುಳ್ಳು ಆರೋಪದಿಂದಾಗಿ ನನಗೆ ಮಾತ್ರವಲ್ಲದೆ ನನ್ನ ಪತ್ನಿ, ನನ್ನ ನಾಲ್ವರು ಹೆಣ್ಮಕ್ಕಳು ಅಪಮಾನ ಎದುರಿಸುವಂತಾಯಿತು. ಶಾಲೆಯಲ್ಲೂ ಸ್ನೇಹಿತರಿಂದ ಮಕ್ಕಳಿಗೆ ಅವಮಾನಕಾರಿಯಾಗಿ ಮಾತುಗಳನ್ನು ಕೇಳಬೇಕಾಯಿತು. ಇದರಿಂದಾಗಿ ಮನೆಯವರು ತಲೆ ಎತ್ತಿ ನಡೆಯದಂತಾಗಿದ್ದು ನಾವು ಜೀವಂತ ಇದ್ದರೂ ಸತ್ತಂತಾಗಿದೆ.
ನಾನು ಪ್ರತಿನಿಧಿಸುತ್ತಿದ್ದ ಧಾರ್ಮಿಕ ಸಂಘಟನೆಯ ಮೇಲೂ ಪ್ರಶ್ನೆ ಏಳುವಂತಾಯಿತು. ಯಾವೊಂದೂ ತಪ್ಪನ್ನು ಮಾಡದಿದ್ದರೂ ನನ್ನ ಮೇಲೇಕೆ ಇಂತಹ ಆರೋಪ ಹೊರಿಸಲಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಈಗಲೂ ಜನರು ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದೇ ಫೆಬ್ರವರಿ 12ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದೆ. ಆದರೆ ನೆಮ್ಮದಿಯ ಜೀವನ ಸಾಗಿಸಲೂ ಸಾಧ್ಯವಾಗುತ್ತಿಲ್ಲ. ಇತರರ ಮೇಲೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡುವುದು ಸುಲಭ. ಆದರೆ ನಂತರ ಅವರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದಕ್ಕೆ ನಾನು ಮತ್ತು ನನ್ನ ಕುಟುಂಬದ ಪರಿಸ್ಥಿತಿ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಂತಹ ಪರಿಸ್ಥಿತಿ ತೇಜೋವಧೆ ಮಾಡುವವರಿಗೆ ಬಂದಾಗ ಅವರಿಗೂ ನಾವು ಸಮಾಜದಲ್ಲಿ ಅನುಭವಿಸಿದ ಯಾತನೆಯ ಅರಿವಾಗುತ್ತದೆ. ಈ ಪ್ರಕರಣ ತನಿಖೆ ನಡೆದು ನ್ಯಾಯ ಸಿಗುವ ವಿಶ್ವಾಸ ನನಗಿದೆ” ಎಂದು ಹೇಳಿದರು.