ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಹಾಯ ನಿಧಿಗಾಗಿ ಸಂಗೀತ ಕಾರ್ಯಕ್ರಮ

ಮಂಗಳೂರಿನ ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ಕಳೆದ ಹಲವಾರು ವರುಷಗಳಿಂದ “ಗುಣಪಡಿಸು ಮತ್ತು ಸಾಂತ್ವನಗೊಳಿಸು“ ಎಂಬ ಧೈಯದೊಂದಿಗೆ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದೆ. ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರ ಮತ್ತು ಪ್ರೀತಿಯೊಂದಿಗೆ ನೀಡಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಯಾವ ರೋಗಿಯೂ ಹಣವಿಲ್ಲದ ಕಾರಣಕ್ಕೆ ಚಿಕಿತ್ಸೆ ಪಡೆಯಲಾರದೇ ವಂಚಿತರಾಗುವುದನ್ನು ಬಯಸುವುದಿಲ್ಲ. ಅದಕ್ಕಾಗಿಯೇ ಕಳೆದ ಹಣಕಾಸು ವರುಷದಲ್ಲಿ ಸುಮಾರು 102 ಕೋಟಿಯಷ್ಟು ರಿಯಾಯತಿಯನ್ನು ರೋಗಿಗಳ ಚಿಕಿತ್ಸೆಗಾಗಿ ನೀಡಲಾಗಿದೆ.
ಕಿಡ್ನಿಯ ಕಾಯಿಲೆಯು ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಜನರಿಗೆ ಮಾರಕವಾಗಿ ಕಾಡಿದೆ ಇದರ ಚಿಕಿತ್ಸೆಗೆ ಡಯಾಲಿಸಿಸ್ ಉತ್ತಮ ಮಾರ್ಗ. ಡಯಾಲಿಸಿಸ್ ಚಿಕಿತ್ಸೆಯು ಎಲ್ಲರ ಕೈಗೆಟಕುವಂತೆ ಮಾಡುವುದೇ ನಮ್ಮ ಉದ್ದೇಶ. ಸಾಕಷ್ಟು ರಿಯಾಯಿತಿ ನೀಡಿದ ಮೇಲೆಯೂ ಹಲವು ರೋಗಿಗಳಿಗೆ ಡಯಾಲಿಸಿಸ್ ವೆಚ್ಚ ಭರಿಸಲು ಸಾಧ್ಯವಾಗದ ಕಿಡ್ನಿಯ ಕಾಯಿಲೆಯ ವರ್ತುಲದಿಂದ ಹೊರಬರಲಾಗದೆ ಕಷ್ಟ ಅನುಭವಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಇದಕ್ಕಾಗಿ ನಾವು ಡಯಾಲಿಸಿಸ್ ಸಹಾಯ ನಿಧಿಯನ್ನು ಸ್ಥಾಪಿಸಿದ್ದು ಹಲವು ದಾನಿಗಳು ಕೊಡುಗೆ ನೀಡಿದ್ದಾರೆ.
ನಿಮ್ಮ ಸಹಕಾರದಿಂದ ಡಯಾಲಿಸಿಸ್ ಚಿಕಿತ್ಸೆಗೆ ಧನ ಸಹಾಯ ಮಾಡಲು ಸಾಧ್ಯವಿದೆ. ಈ ಉದ್ದೇಶದಿಂದ ಡಯಾಲಿಸಿಸ್ ನಿಧಿಗೆ ಧನ ಸಂಗ್ರಹಿಸುವುದಕ್ಕಾಗಿ ನಾವು ಸಂಗೀತ ರಸ ಸಂಜೆಯನ್ನು ಏರ್ಪಡಿಸಿದ್ದೇವೆ. “ಮೊಗಾಚಿಂ ಲಾರಾಂ” ಖ್ಯಾತಿಯ ಪ್ರಸಿದ್ಧ ಸಂಗೀತಗಾರ ವಿನ್ಸೆಂಟ್ ಫೆರ್ನಾಂಡಿಸ್ ರವರ ತಂಡವು ಇದೇ ಫೆಬ್ರವರಿ 23ರಂದು ಆದಿತ್ಯವಾರ ಸಂಜೆ 5.30 ಗಂಟೆಗೆ ಫಾದರ್ ಮುಲ್ಲರ್ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಸಿಕೊಡಲಿರುವ ಈ ಸಂಗೀತ ಸಂಜೆಗೆ ಒಂದು ಸಾವಿರ ರೂಪಾಯಿಯ ಟಿಕೆಟ್ ದರವನ್ನು ನಿಗದಿ ಪಡಿಸಿದ್ದೇವೆ. ಇದರಿಂದ ಸಂಗ್ರಹವಾದ ಹಣ ನಮ್ಮ ಡಯಾಲಿಸಿಸ್ ನಿಧಿಗೆ ಸೇರಲಿದೆ. ನೀವು ನೀಡುವ ಒಂದು ಸಾವಿರ ರೂಪಾಯಿಯಲ್ಲಿ ಅಮೋಘ ಸಂಗೀತವನ್ನು ಸವಿಯುವ ಅವಕಾಶದ ಜೊತೆಗೆ, ನಿಮ್ಮ ಪ್ರೀತಿಯ ಧನ ಸಹಾಯವು ಹಲವು ರೋಗಿಗಳ ಬಾಳನ್ನು ಬೆಳಗಲಿದೆ. ನಮ್ಮ ಜೊತೆ ಕೈ ಜೋಡಿಸಿದ ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕರಾದ ಅತೀ ವಂದನೀಯ ಫಾದರ್ ರಿಚರ್ಡ್ ಕುವೆಲ್ಲೊ ಮತ್ತು ಆಡಳಿತಾಧಿಕಾರಿ ವಂದನೀಯ ಫಾದರ್ ಅಜಿತ್ ಮಿನೆಜಸ್ ಅವರ ಮುತುವರ್ಜಿಯಿಂದ ನಡೆಯುವ ಈ ಸಮಾರಂಭದಲ್ಲಿ ಕೊಡುಗೈ ದಾನಿಗಳಾದ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ ಹಾಗೂ ಇತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಮಹತ್ತರ ಕಾರ್ಯಕ್ಕೆ ಸಾರ್ವಜನಿಕರ ಹಾಗೂ ಎಲ್ಲ ಸಹೃದಯಿಗಳ ಸಹಯೋಗವನ್ನು ಅಪೇಕ್ಷಿಸುತ್ತೇವೆ. ಈ ಕಾರ್ಯಕ್ರಮಕ್ಕೆ ಪ್ರಧಾನ ಪೋಷಕರು ಮೈಕಲ್ ಡಿಸೋಜ, ಉದ್ಯಮಿ ರೊನಾಲ್ಡ್ ಕುಲಾಸೊ ಹಾಗೂ ಅನೇಕರು ಧನಸಹಾಯವನ್ನು ಮಾಡಿದ್ದಾರೆ. ಅವರೆಲ್ಲರ ಸಹಕಾರದಿಂದ ನಾವು ಒಂದು ಶಾಶ್ವತ ನಿಧಿಯನ್ನು ಪ್ರಾರಂಭಿಸಿ ಬಡರೋಗಿಗಳಿಗೆ ಆದಷ್ಟು ರಿಯಾಯಿತಿ ದರದಲ್ಲಿ ಕಿಡ್ನಿ ಡಯಾಲಿಸ್ ಚಿಕಿತ್ಸೆಯನ್ನು ಕೊಡಲು ಬದ್ಧರಾಗಿದ್ದೇವೆ ಎಂದು ಇಂದು ಫೆಬ್ರವರಿ 18ರಂದು ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಮುಖ್ಯಸ್ಥರಾದ ಅತೀ ವಂದನೀಯ ಫಾದರ್ ರಿಚ್ಚರ್ಡ್ ಕುವೆಲ್ಲೊ ಹೇಳಿದರು. ಪತ್ರಕರ್ತ ಎಲಿಯಾಸ್ ಫೆರ್ನಾಂಡಿಸ್, ಸಂಗೀತಗಾರ ವಿನ್ಸೆಂಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.