ಕರಾವಳಿ ಕರ್ನಾಟಕದಲ್ಲಿ ಮೊದಲ ವೈರ್ ಲೆಸ್ ಪೇಸ್ ಮೇಕರ್ ಅಳವಡಿಕೆ – ಇಂಡಿಯಾನಾ ಆಸ್ಪತ್ರೆ ಆದ್ಯಪ್ರವರ್ತಕ

ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟಿನ ವೈದ್ಯರು ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ, ತಂತಿ ರಹಿತ (ಯಾವುದೇ ವಯರ್ ಇಲ್ಲದೆ ) ಪೇಸ್ ಮೇಕರ್ ನ್ನು ವೃದ್ಧ ಮಹಿಳೆಗೆ ಅಳವಡಿಸಿದ್ದು, ಇದು ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಅಸಾಧಾರಣ ಪ್ರಗತಿಯು ಆಧುನಿಕ, ಸುಧಾರಿತ ಆರೋಗ್ಯ ಸೇವೆಗಳಿಗೆ ಸಂಬಂಧಿಸಿ ಈ ವಲಯದ/ಪ್ರದೇಶದ ಖ್ಯಾತಿಯನ್ನು ಹೆಚ್ಚಿಸಲಿದೆ.
ರೋಗಿ, ವಯಸ್ಸಾದ ಮಹಿಳೆಯಾಗಿದ್ದು, ಹೃದಯ ವೈಫಲ್ಯದಿಂದ ಬಳಲುತ್ತಿದ್ದರು ಮತ್ತು “ಟಾಕಿಬ್ರಾಡಿ ಸಿಂಡ್ರೋಮ್”ಗೆ ತುತ್ತಾಗಿದ್ದರು. ಇದರ ಲಕ್ಷಣ ಎಂದರೆ ಹೃದಯವು ಬಹಳ ವೇಗವಾಗಿ ಬಡಿದುಕೊಳ್ಳುವುದು ಮತ್ತು ಬಹಳ ನಿಧಾನವಾಗಿ ಬಡಿದುಕೊಳ್ಳುವುದು, ಈ ಸ್ಥಿತಿಯು ಹೃದಯ ಬಡಿತದ ಅಸಹಜ ವೇಗ ಮತ್ತು ಅಪಾಯಕಾರಿ ನಿಧಾನಗತಿಯ ಲಯಗಳನ್ನು ಹೊಂದಿರುತ್ತದೆ ಮತ್ತು ನಡುವೆ ಬದಲಾಗುತ್ತಿರುತ್ತದೆ. ಈ ಸಮಸ್ಯೆಯಿಂದಾಗಿ ರೋಗಿಯು ಕಳೆದ ಒಂದು ವರ್ಷದಲ್ಲಿ ಪದೇ ಪದೇ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ವ್ಯಾಪಕ ಸಮಾಲೋಚನೆಯ ನಂತರ, ಅನಿಯಮಿತ ಹೃದಯ ಬಡಿತವನ್ನು ನಿಯಂತ್ರಿಸಲು ರೋಗಿಗೆ ರೇಡಿಯೋಫ್ರೀಕ್ವೆನ್ಸಿ ಅಬ್ಲೇಷನ್ ಅಂದರೆ ಸಣ್ಣ ಕೊಳವೆಯ ಮೂಲಕ ಸಣ್ಣ ಪ್ರಮಾಣದಲ್ಲಿ ಬಿಸಿ/ಉಷ್ಣವನ್ನು ಉಂಟುಮಾಡಿ ಅಸಹಜ ಹೃದಯ ಬಡಿತಕ್ಕೆ ಕಾರಣವಾಗುವ ಅಂಗಾಂಶಗಳನ್ನು ಸುಟ್ಟು ಹಾಕುವ ಚಿಕಿತ್ಸೆ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ಪೇಸ್ ಮೇಕರ್ ಅಳವಡಿಕೆ ಎರಡಕ್ಕೂ ಒಳಗಾಗಲು ಸಲಹೆ ನೀಡಲಾಯಿತು.
ಆದರೆ ರೋಗಿಯಲ್ಲಿದ್ದ ಸೋಂಕು ಮತ್ತು ಸೋಂಕಿಗೆ ಸಂಬಂಧಿಸಿ ದೇಹದ ರಕ್ಷಣಾ/ ರೋಗ ನಿರೋಧಕ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸುವುದರಿಂದ ಉಂಟಾಗುವ ಜೀವಕ್ಕೆ ಹಾನಿಕರವಾದ ಸ್ಥಿತಿ (ಸೆಪ್ಸಿಸ್ನ)ಯಂತಹ ಅಪಾಯದಿಂದಾಗಿ ಸಾಂಪ್ರದಾಯಿಕ ಪೇಸ್ ಮೇಕರ್ ಸೂಕ್ತ ಆಯ್ಕೆಯಾಗಿರಲಿಲ್ಲ. ಸಾಮಾನ್ಯವಾಗಿ, ಪೇಸ್ ಮೇಕರ್ ಗಳನ್ನು ಹೃದಯಕ್ಕೆ ಸಂಪರ್ಕ ಹೊಂದಿದ ಸೂಕ್ಷ್ಮ ತಂತಿಗಳೊಂದಿಗೆ ಅಳವಡಿಸಲಾಗುತ್ತದೆ ಮತ್ತು ಎದೆಯ ಗೋಡೆಯ ಮೇಲೆ ಇರಿಸಲಾಗುತ್ತದೆ. ಈ ಪ್ರಕರಣದಲ್ಲಿ ವಯಸ್ಸಾದ ಈ ಮಹಿಳೆ ಹೊಂದಿದ್ದಂತಹ ಸೋಂಕುಗಳಿಂದ ಪೀಡಿತರಾಗಿರುವ ರೋಗಿಗಳಿಗೆ, ಈ ವ್ಯವಸ್ಥೆ ಪೇಸ್ ಮೇಕರ್ ವೈಫಲ್ಯ ಮತ್ತು ಪುನರಾವರ್ತಿತ /ಮರುಕಳಿಸುವ ಸೋಂಕುಗಳಿಂದಾಗಿ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು. ಈ ಪರಿಸ್ಥಿತಿಗಳ ಮೌಲ್ಯಮಾಪನದ ಬಳಿಕ ಇಂಡಿಯಾನಾ ಆಸ್ಪತ್ರೆಯ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಯೂಸುಫ್ ಕುಂಬ್ಳೆ ನೇತೃತ್ವದಲ್ಲಿ ಡಾ. ಮನೀಶ್ ರೈ (ಎಲೆಕ್ಟ್ರೋಫಿಸಿಯಾಲಜಿಸ್ಟ್), ಡಾ. ಗ್ಯಾರಿ ವಲೇರಿಯನ್ ಪಾಯ್ಸ್ (ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್), ಡಾ. ಸುಖೇನ್ ಶೆಟ್ಟಿ (ಹೃದಯ ಅರಿವಳಿಕೆ ತಜ್ಞ) ಮತ್ತು ಡಾ. ಪ್ರದೀಪ್ ಕೆ.ಜೆ. ಅವರನ್ನೊಳಗೊಂಡ ತಂಡ ತಂತಿ ಇಲ್ಲದ ಪೇಸ್ ಮೇಕರ್ ಅಳವಡಿಕೆಯ ನವೀನ ಅನ್ವೇಷಣೆಯ ಪರಿಹಾರವನ್ನು ಆರಿಸಿಕೊಂಡಿತು.
ಹೃದಯಕ್ಕೆ ಸಂಪರ್ಕ ಹೊಂದಿದ ತಂತಿಗಳು ಅಥವಾ ಲೀಡ್ (ಸೂಕ್ಷ್ಮ ವಯರ್)ಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ಪೇಸ್ ಮೇಕರ್ ಗಳಿಗಿಂತ ಭಿನ್ನವಾಗಿ, ಈ ಪೇಸ್ ಮೇಕರ್ ಯಾವುದೇ ತಂತಿ ಸಂಪರ್ಕಗಳಿಲ್ಲದೆ ನೇರವಾಗಿ ಹೃದಯಕ್ಕೆ ಅಳವಡಿಸಲಾಗುವ ಸಣ್ಣ, ಸ್ವಯಂ-ನಿಯಂತ್ರಣವನ್ನು ಅಳವಡಿಸಿಕೊಂಡಿರುವ ಸ್ವಯಂ ಪರಿಪೂರ್ಣ ಸಾಧನವಾಗಿದೆ. ಇದರ ಅಳವಡಿಕೆ ಪ್ರಕ್ರಿಯೆಯಲ್ಲಿ ಗಾಯದ ಪ್ರಮಾಣ ಅತ್ಯಂತ ಕನಿಷ್ಠತಮ. ಸೊಂಟದ ಮೂಲಕ ಇದನ್ನು ದೇಹದೊಳಗೆ ಕಳುಹಿಸಲಾಗುತ್ತದೆ ಮತ್ತು ತಂತಿಗಳು ಅಥವಾ ಎದೆಯ ಗೋಡೆಯ ಸಂಪರ್ಕಗಳ ಅಗತ್ಯ ಇಲ್ಲ. ಸೋಂಕು ಮತ್ತು ಆರೋಗ್ಯ ತೊಡಕುಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ತಂತಿರಹಿತ ಪೇಸ್ ಮೇಕರ್ ಯಶಸ್ವಿಯಾಗಿ ಅಳವಡಿಸಿದ ನಂತರ, ತಂಡವು ರೋಗಿಯ ಹೃದಯ ಬಡಿತದ ವ್ಯತ್ಯಯವನ್ನು ಪರಿಹರಿಸಲು ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಸಹ ನಡೆಸಿತು.
“ಈ ಸಾಧನೆಯು ನಮ್ಮ ಹೃದ್ರೋಗ ಚಿಕಿತ್ಸಾ ತಂಡದ ಅಸಾಧಾರಣ ಸಾಮರ್ಥ್ಯಗಳನ್ನು ಒತ್ತಿಹೇಳುತ್ತದೆ ಮತ್ತು ಮಂಗಳೂರು ಹಾಗೂ ಅದರಾಚೆಗೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ತರುವ ನಮ್ಮ ಆಸ್ಪತ್ರೆಯ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ” ಎಂದು ಡಾ. ಯೂಸುಫ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ. “ಕರಾವಳಿ ಕರ್ನಾಟಕದಲ್ಲಿ ಮೊದಲ ವೈರ್ ಲೆಸ್ ಪೇಸ್ ಮೇಕರ್ ಅಳವಡಿಸುವ ಮೂಲಕ, ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೃದಯ ಮತ್ತು ರಕ್ತನಾಳಗಳಲ್ಲಿ ಉದ್ಭವಿಸುವ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಚಿಕಿತ್ಸೆ ನೀಡಿ ಬಗೆಹರಿಸುವ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯಲ್ಲಿ ಇಂಡಿಯಾನಾ ಆಸ್ಪತ್ರೆಯು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮುಂಚೂಣಿ ಸ್ಥಾನವನ್ನು ಗಳಿಸಿದೆ” ಎನ್ನುತ್ತಾರವರು.
ತಂತಿಗಳಿಲ್ಲದ ಪೇಸ್ ಮೇಕರ್ ಸಾಂಪ್ರದಾಯಿಕ ಪೇಸ್ ಮೇಕರ್ ಗಳಿಗೆ ಶಕ್ತಿಯುತ/ಪರಿಣಾಮಕಾರಿ ಪರ್ಯಾಯವನ್ನು ಒದಗಿಸುತ್ತದೆ, ವಿಶೇಷವಾಗಿ ಹೃದಯ ಬಡಿತ ವೈಪರಿತ್ಯದ ಆರೋಗ್ಯ ಸಮಸ್ಯೆಯಿಂದ (ಅರಿಥ್ಮಿಯಾದಿಂದ) ಬಳಲುತ್ತಿರುವ ರೋಗಿಗಳಿಗೆ ಇದು ವರದಾನದಂತಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದೆ, ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಈ ಚಿಕಿತ್ಸೆಯಲ್ಲಿ ಗಾಯದ ಪ್ರಮಾಣ ಅತ್ಯಂತ ಕಡಿಮೆ. ರೋಗಿಗಳ ಜೀವನ ಗುಣಮಟ್ಟವನ್ನು ಈ ಚಿಕಿತ್ಸೆ ಸುಧಾರಿಸುತ್ತದೆ ಮತ್ತು ಸಾಂಪ್ರದಾಯಿಕ ಸಾಧನಗಳಿಗೆ ಸಂಬಂಧಿಸಿದಂತೆ ಇರುವ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಈ ಅದ್ಭುತ ಕಾರ್ಯವಿಧಾನದೊಂದಿಗೆ, ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಭಾರತದಲ್ಲಿ ಸುಧಾರಿತ ಆಧುನಿಕ ಆರೋಗ್ಯ ಮಧ್ಯಪ್ರವೇಶಗಳ ನಕ್ಷೆಯಲ್ಲಿ ಮಂಗಳೂರಿನ ಸ್ಥಾನವನ್ನು ಗಟ್ಟಿಗೊಳಿಸುತ್ತಲೇ, ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಒದಗಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.