ಯಕ್ಷಭಾರತಿಯ ಯಕ್ಷಗಾನ ಮತ್ತು ಸೇವಾ ಚಟುವಟಿಕೆಗಳಿಗೆ ಸದಾ ಬೆಂಬಲ – ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಉಜಿರೆ ಶ್ರೀ ಜನಾರ್ದನ ಕ್ಷೇತ್ರದ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿರುವ ಯಕ್ಷಭಾರತಿಯ ಕಲಾ ಸೇವೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದು ರಾಜ್ಯದಲ್ಲಿ ಈ ಸಂಸ್ಥೆ ಗುರುತಿಸುವಂತಾಗಲಿಯೆಂದು ಉಜಿರೆಯ ರಾಮಕೃಷ್ಣ ಸಭಾ ಮಂಟಪದಲ್ಲಿ ಜರಗಿದ ಬೆಳ್ತಂಗಡಿ ಕನ್ಯಾಡಿಯ ಯಕ್ಷ ಭಾರತಿಯ ದಶಮಾನೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವಳದ ಆನುವಂಶೀಯ ಆಡಳಿತ ಮೊಕ್ತೇಸರ ಶರತಕೃಷ್ಣ ಪಡುವೆಟ್ಣಾಯ ತಿಳಿಸಿದರು.
ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ : ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಯಕ್ಷ ಭಾರತಿಯ ಹತ್ತು ವರ್ಷಗಳಲ್ಲಿ ನಡೆಸಿದ ಚಟುವಟಿಕೆಗಳ ಸ್ಮರಣ ಸಂಚಿಕೆ ದಶಪರ್ವ ಬಿಡುಗಡೆಗೊಳಿಸಿ ಯಕ್ಷಭಾರತಿಯ ಕಲಾಸೇವೆ ಮತ್ತು ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು. ಸಂಪಾದಕ ದಿವಾಕರ ಆಚಾರ್ಯ ಗೇರುಕಟ್ಟೆ ದಶಪರ್ವದ ಮಾಹಿತಿ ನೀಡಿದರು. ವಿಧಾನಪರಿಷತ್ತಿನ ಶಾಸಕರಾದ ಕೆ. ಪ್ರತಾಪ ಸಿಂಹ ನಾಯಕ್ ಉಜಿರೆ, ಪುರಂದರರಾವ್ ಧರ್ಮಸ್ಥಳ, ಸಂಪತ್ ಸುವರ್ಣ ಬೆಳ್ತಂಗಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಯಕ್ಷ ಭಾರತಿ ಪ್ರಶಸ್ತಿ ಮತ್ತು ಸೇವಾ ಗೌರವ ಪ್ರದಾನ : ಉಚಿತವಾಗಿ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ನಡೆಸುತ್ತಿರುವ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಸ್ಥಾಪಕರಾದ ಸಬ್ಬಣಕೋಡಿ ರಾಮಭಟ್ ಇವರಿಗೆ ಯಕ್ಷ ಭಾರತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿಪತ್ತು ನಿರ್ವಹಣೆಯ ತಂಡಗಳ ಮೂಲಕ ರಾಜ್ಯದ 90 ತಾಲೂಕುಗಳಲ್ಲಿ ಗಣನೀಯ ಸೇವಾ ಕಾರ್ಯ ಮಾಡುತ್ತಿರುವ ಎಸ್.ಕೆ.ಡಿ.ಆರ್.ಡಿ.ಪಿ. ಧರ್ಮಸ್ಥಳ ಶೌರ್ಯ ತಂಡಕ್ಕೆನೀಡಲಾದ ದಶಮಾನೋತ್ಸವ ಸೇವಾ ತಂಡ ಗೌರವವನ್ನು ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್, ಗುರುವಾಯಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ ಜೈನ್ ಇವರಿಗೆ ಯುವ ಸಾಧನಾ ಪುರಸ್ಕಾರ, ನಿವೃತ್ತ ಆರೋಗ್ಯ ಸಹಾಯಕರಾದ ಭುವನೇಶ್ವರಿ ಕುಂಟಿನಿ ಮತ್ತು ದೇವಮ್ಮ ಇವರಿಗೆ ಆರೋಗ್ಯ ಸೇವಾ ಗೌರವ, ಯಕ್ಷ ಭಾರತಿ ಸಂಸ್ಕಾರ ಶಿಕ್ಷಣ ಶಿಬಿರದ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಭಗವದ್ಗೀತೆ ಶ್ಲೋಕಗಳ ಕಂಠಪಾಠ ಸ್ಪರ್ಧೆಯಲ್ಲಿ ಅಪೂರ್ವ ಸಾಧನೆ ಮಾಡಿದ ಕು. ಅದ್ವಿತಿ ರಾವ್ ಇವರಿಗೆ ಬಾಲಸೇವಾ ಗೌರವವನ್ನು ನೀಡಲಾಯಿತು. ಮುಖ್ಯ ಅತಿಥಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ ಶೌರ್ಯ ತಂಡದ ಸ್ವಯಂಸೇವಕರಿಗೆ ಸ್ಪೂರ್ತಿ ನೀಡುವ ಕಾರ್ಯ ಮಾಡಿದ ಯಕ್ಷ ಭಾರತಿಗೆ ಶುಭ ಹಾರೈಸಿದರು. ಯಕ್ಷ ಭಾರತಿ ಪ್ರಶಸ್ತಿ ಸ್ವೀಕರಿಸಿದ ಸಬ್ಬಣಕೋಡಿ ರಾಮಭಟ್ ಮಾತನಾಡಿ ನಾನು ಮೂಲತ: ಬೆಳ್ತಂಗಡಿ ತಾಲೂಕಿನವನೇ ಆಗಿದ್ದು ಈ ಗೌರವವು ಗುರುಗಳಾದ ಪಡ್ರೆ ಚಂದು ಅವರಿಗೆ ಸಮರ್ಪಿತವೆಂದರು. ಸನ್ಮಾನಿತರಾದ ಸುಮಂತ್ ಕುಮಾರ್ ಜೈನ್, ಅದ್ವಿತಿರಾವ್ ಕೃತಜ್ಞತೆ ಸಲ್ಲಿಸಿದರು.
ವಿದ್ಯಾನಿಧಿ ವಿತರಣೆ: ಅಭಿಜಿತ್ ಮುಂಡಾಜೆ, ದ್ವಿತೀಯ ಇಂಜಿನಿಯರಿಂಗ್ ಮತ್ತು ಮೋನಿಷ ನೀರಚಿಲುಮೆ, ದ್ವಿತೀಯ ಪದವಿ ಇವರಿಗೆ ವಿದ್ಯಾನಿಧಿ ವಿತರಿಸಲಾಯಿತು.
ದಿಕ್ಸೂಚಿ ಭಾಷಣ :ಅಂಕಣಕಾರ ಪ್ರಕಾಶ್ ಮಲ್ಪೆ ವಿಕಸಿತ ಭಾರತ ವಿಚಾರದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ ವಿಶ್ವದ ಎಲ್ಲೆಡೆಯಲ್ಲಿಯೂ ಭಾರತೀಯ ಸಂಸ್ಕೃತಿಯ ಹೆಗ್ಗುರುತುಗಳು ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಂಡಿದ್ದು ಜಗತ್ತಿನ ದೇಶಗಳು ಭಾರತ ಮಾತೆಯ ಹಿರಿಮೆಗೆ ತಲೆಬಾಗಿವೆ ಎಂದರು.
ಯಕ್ಷ ಭಾರತೀಯ ಟ್ರಸ್ಟಿಗಳಾದ ಹರೀಶ್ ರಾವ್ ಮುಂಡ್ರುಪ್ಪಾಡಿ, ಹರಿದಾಸ ಗಾಂಭೀರ, ಸುರೇಶ ಕುದ್ರೆಂತ್ತಾಯ, ಶಿತಿಕಂಠ ಭಟ್ ಉಜಿರೆ, ಕೃಷ್ಣ. ಡಿ. ಕನ್ಯಾಡಿ, ಗುರುಪ್ರಸಾದ್ ಉಜಿರೆ, ಕುಸುಮಾಕರ ಕುತ್ತೋಡಿ ಚಂದ್ರಶೇಖರ್ ಆಚಾರ್ಯ, ಸುದರ್ಶನ್ ಕೆ.ವಿ., ಶಶಿಧರ ಕನ್ಯಾಡಿ, ಕೌಸ್ತುಭ ಕನ್ಯಾಡಿ, ಮುರಳಿಧರ ದಾಸ್, ಭವ್ಯಹೊಳ್ಳ, ಯಶೋದರ ಇಂದ್ರ, ನಿವೃತ್ತ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ಮುರಲೀಕೃಷ್ಣ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ ವಂದಿಸಿದರು. ಸಮಿತಿಯ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಸಹಕಾರ್ಯದರ್ಶಿ ಭವ್ಯ ಹೊಳ್ಳ, ಸಂಚಾಲಕ ಮಹೇಶ್ ಕನ್ಯಾಡಿ ಸಹಕರಿಸಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು.
ಯಕ್ಷ ಭಾರತಿ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ರಾಮಾಭಿಯಾನ, ಸಬ್ಬಣಕೋಡಿ ರಾಮ ಭಟ್ ಶಿಷ್ಯರಿಂದ ವೀರ ಬಬ್ರುವಾಹನ ಮತ್ತು ಪ್ರಸಿದ್ಧ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಜರಗಿತು.