ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ

ಮಾಣಿ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಜಂಟಿ ಆಶ್ರಯ
ಮಾಣಿ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಜಂಟಿ ಆಶ್ರಯದಲ್ಲಿ ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಹಾಗೂ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ ಕಾರ್ಮಿಕರ ಹಿತರಕ್ಷಣೆಯ ದೃಷ್ಟಿಯಿಂದ ನಡೆಯುತ್ತಿರುವ ಕಾರ್ಯಕ್ರಮ. ಕಾರ್ಮಿಕರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಈ ರೀತಿಯ ಶಿಬಿರದ ಅಗತ್ಯ ಇದೆ. ವಿಮಾ ಭದ್ರತೆ ಕೂಡ ಸಿಗಲಿದೆ. ಈ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಇದರಿಂದ ಗ್ರಾಮೀಣ ಭಾಗದ ಅಸಂಘಟಿತ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇರುವುದರಿಂದ ಈ ರೀತಿಯ ಶಿಬಿರಗಳನ್ನು ಸಂಘಟಿಸುವ ಅನಿವಾರ್ಯತೆ ಬಂದಿದೆ. ಇದರ ಸದುಪಯೋಗವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಅಧಿಕಾರಿ ವಿಲ್ಮಾ ತಾವ್ರೊ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ತಾಲೂಕು ಕಾರ್ಮಿಕ ನಿರೀಕ್ಷಕಿ ಲವೀನಾ, ಅಸಂಘಟಿತ ಕಾರ್ಮಿಕ ಸಮಿತಿಯ ಪದಾಧಿಕಾರಿಗಳಾದ ಇಸ್ಮಾಯಿಲ್ ನಾಟೆಕಲ್, ಯೋಗೀಶ್, ಹರ್ಷಾದ್, ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ ಪೂಜಾರಿ, ಸದಸ್ಯರಾದ ಇಬ್ರಾಹಿಂ ಕೆ. ಮಾಣಿ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರೀತಿ ಡಿನ್ನಾ ಪಿರೇರಾ, ಅಭಿವೃದ್ಧಿ ಅಧಿಕಾರಿ ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಕುರ್ಲೆತ್ತಿಮಾರು ವಂದಸಿದರು.