ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಪ್ರಯುಕ್ತ ಕೊಂಕಣಿ ವೊವಿಯೊ – ವೇರ್ಸ್ ಕೊಂಕಣಿ ಕ್ರಿಶ್ಚಿಯನ್ ಭಾಶಿಗರ ಮದುವೆ ಹಾಡುಗಳ ಕಾರ್ಯಾಗಾರ

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ ಕೊಂಕಣಿ ವಿಭಾಗ ಮತ್ತು ಕೊಂಕಣಿ ಸಂಘ ಹಾಗೂ CASK ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಪ್ರಯುಕ್ತ ಕೊಂಕಣಿ ವೊವಿಯೊ – ವೇರ್ಸ್ ಕೊಂಕಣಿ ಕ್ರಿಶ್ಚಿಯನ್ ಭಾಶಿಗರ ಮದುವೆ ಹಾಡುಗಳ ಕಾರ್ಯಾಗಾರವನ್ನು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಡಾ. ಆಲ್ವಿನ್ ಡೆಸಾ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರು ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಮಾತೃ ಭಾಷೆ ಕೊಂಕಣೆಯಲ್ಲೇ ಮಾತನಾಡಿ ಉದ್ಘಾಟಿಸಿದರು. ಹಾಗೆಯೇ CASK ಸಂಘದ ಅಧ್ಯಕ್ಷ ರೊನಾಲ್ಡ್ ಗೋಮ್ಸ್ ವೊವಿಯೊ ಹಾಡಿ ತಮ್ಮ ಸಂದೇಶದೊಂದಿಗೆ ವೀಕ್ಷಕರನ್ನು ರಂಜಿಸುತ್ತಾ ಮಾತೃ ಭಾಷೆ ಕೊಂಕಣಿಗೆ ಸೇವೆ ಸಲ್ಲಿಸಲು ತಾನು ಎಂದಿಗೂ ಸಿದ್ಧ ಎಂದು ಸಾರಿದರು. ಈ ಕಾರ್ಯಾಗಾರವನ್ನು ನಡೆಸಿಕೊಡಲು ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಶಿಕ್ಷಕಿ ಹಾಗೂ ಜನಪ್ರಿಯ ನಟಿ ಸಪ್ನ ಕ್ರಾಸ್ತ ಸುಮಾರು 200 ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮುಖಾಂತರ ನಡೆಸಿ ಕೊಟ್ಟರು. ಈ ಕಾರ್ಯಕ್ರಮವನ್ನು ಕೊಂಕಣಿ ವಿಭಾಗದ ಮುಖ್ಯಸ್ಥೆ ಫ್ಲೋರ ಕಾಸ್ತೆಲಿನೊ ಸಂಘಟಿಸಿದ್ದರು.
ವೊವಿಯೊ – ವೇರ್ಸ್ ಕೊಂಕಣಿ ಕ್ರಿಶ್ಚಿಯನ್ ಭಾಶಿಗರಲ್ಲಿ ಅದೂ ಮುಖ್ಯವಾಗಿ ಕರಾವಳಿ ಕೊಂಕಣಿಗ ಜಾನಪದೀಯರಲ್ಲಿ ಪ್ರಮುಖವಾದ ಸಂಸ್ಕೃತಿ. ಈ ಮದುವೆ ಹಾಡುಗಳನ್ನು ಗೋವದಿಂದ ವಲಸೆ ಬರುವಾಗ ತಮ್ಮೊಂದಿಗೆ ಕೊಂಕಣಿಗರು ತಂದು ಬಂದಿದ್ದು, ಇವತ್ತಿಗೂ ಈ ಹಾಡುಗಳು ಮದುವೆ – ರೋಸ್ ಸಂಪ್ರದಾಯದಲ್ಲಿ ಜೀವಂತವಾಗಿವೆ. ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯದರ್ಶಿ ಆಶೆಲ್ ಟೆಲ್ಲಿಸ್ ಸ್ವಾಗತಿಸಿ, ಪರ್ಜಳ್ ಸಂಪಾದಕಿ ಅನ್ವಿತ ಡಿಕೂನ್ಹಾ ವಂದಿಸಿದರು. ವಿಲೋನ ಡಿಕೂನ್ಹಾ ಸುಸೂತ್ರವಾಗಿ ನಡೆಸಿಕೊಟ್ಟರು.