ಚುನಾವಣಾ ಪೂರ್ವ ಪ್ರಣಾಳಿಕೆಯ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ – ಜೀವನ್ ಮಾರ್ಟಿಸ್ ಒತ್ತಾಯ

ಪುತ್ತೂರು : ಚುನಾವಣಾ ಪೂರ್ವ ಸರ್ಕಾರದ ಪ್ರಣಾಳಿಕೆಯ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪುತ್ತೂರು ವಿಭಾಗದ ಅಧ್ಯಕ್ಷ ಜೀವನ್ ಸಂತೋಷ್ ಮಾರ್ಟಿಸ್ ಒತ್ತಾಯಿಸಿದ್ದಾರೆ.
ಈ ಕುರಿತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಇವರಿಗೆ ಮನವಿ ನೀಡಿದ್ದು, ಕಳೆದ ಬಾರಿ ತಮ್ಮ ಸರ್ಕಾರ ನೀಡಿದ ಪ್ರಣಾಳಿಕೆ ಭರವಸೆಯಲ್ಲಿ 97ಶೇಕಡಾ ದಷ್ಟು ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿದ್ದು. ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ನೌಕರರ ಮತ್ತು ಅಧಿಕಾರಿಗಳ ಬೇಡಿಕೆಯಂತೆ ಹಾಗೂ ಸರ್ಕಾರದ ಪ್ರಣಾಳಿಕೆ ಭರವಸೆಯಂತೆ ಈ ಬಾರಿ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ 7 ವೇತನ ಆಯೋಗದ ಮಾದರಿಯಲ್ಲಿ ಸರಿ ಸಮಾನ ವೇತನ ನೀಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಪ್ರತಿದಿನ ಒಂದು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ನೀಡಲು ಸರಿಸುಮಾರು 1.15 ಲಕ್ಷ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 40 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುತ್ತಿರುವ ಅವೈಜ್ಞಾನಿಕ ವೇತನ ಪರಿಷ್ಕರಣೆಯಿಂದ ಸಾರಿಗೆ ನೌಕರರು ಬೇಸತ್ತುಕೊಂಡಿದ್ದಾರೆ.
ಬುದ್ದ-ಬಸವಣ್ಣ-ಅಂಬೇಡ್ಕರ್ ವಿಚಾರದಂತೆ ಸಂವಿಧಾನದ ಅಡಿಯಲ್ಲಿ ಬರುವ ಸಮಾನ ಕೆಲಸಕ್ಕೆ, ಸಮಾನ ವೇತನ ಮತ್ತು ಸೌಲಭ್ಯಗಳಿಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಹೋರಾಟ ಮಾಡಿದ ಸಂಧರ್ಭದಲ್ಲಿ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸುವ ಬದಲು ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸುವಂತೆ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತು ಮಾಡಿ ಹೋರಾಟವನ್ನು ಹತ್ತಿಕ್ಕಲಾಗಿತ್ತು. ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ನೀಡುವ ಸಂಧರ್ಭದಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬಸ್ಸುಗಳ ಮತ್ತು ನೌಕರರ ಕೊರತೆ ಇದ್ದರೂ ಸಾರಿಗೆ ನೌಕರರಿಗೆ ಕಷ್ಟವಾದರೂ ಇಷ್ಟ ಪಟ್ಟು ದುಡಿದ ನೌಕರರಿಂದ ಶಕ್ತಿ ಯೋಜನೆಯ ಜನಪ್ರಿಯತೆ ಹೆಚ್ಚಿದೆ.
ಸಾರಿಗೆ ನೌಕರರ ನ್ಯಾಯೋಚಿತ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸಾರಿಗೆ ನೌಕರರ ಬಹು ವರ್ಷಗಳ ಬೇಡಿಕೆ ಈಡೇರಿಸುವಂತೆ ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.