ಪವಿತ್ರ ಶಿಲುಬೆಗೆ ಹಾನಿ – ಕಥೊಲಿಕ್ ಸಭಾ ಉಡುಪಿ ಮತ್ತು ಮಂಗಳೂರು ವತಿಯಿಂದ ಖಂಡನೆ

ಕೇಂದ್ರೀಯ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ಮತ್ತು ಆಲ್ವಿನ್ ಡಿಸೋಜ ಇವರ ನಿಯೋಗದಿಂದ ಘಟನಾ ಸ್ಥಳಕ್ಕೆ ಭೇಟಿ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕುದ್ರುಮಲೆ ಬೆಟ್ಟದ ಖಾಸಗಿ ಸ್ಥಳದಲ್ಲಿ ನಿರ್ಮಿಸಿದ್ದ ಪವಿತ್ರ ಶಿಲುಬೆಯನ್ನು ಅಪರಿಚಿತ ವ್ಯಕ್ತಿಗಳು ಹಾನಿ ಮಾಡಿ ಧ್ವಂಸಗೊಳಿಸಿರುವುದನ್ನು ಕಥೊಲಿಕ್ ಸಭಾ ಉಡುಪಿ ಹಾಗೂ ಮಂಗ್ಳುರ್ ಪ್ರದೇಶ್ ಇದರ ಕೇಂದ್ರೀಯ ಸಮಿತಿಗಳು ಖಂಡಿಸಿವೆ.
ಖಾಸಗಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಶಿಲುಬೆಯನ್ನು ಯಾವುದೋ ದುರುದ್ದೇಶವಿಟ್ಟುಕೊಂಡು ಧ್ವಂಸಗೊಳಿಸಿರುವುದು ಜಿಲ್ಲೆಯ ಶಾಂತಿ ಮತ್ತು ಸೌಹಾರ್ಧತೆಯನ್ನು ಕೆಡಿಸುವ ಹುನ್ನಾರವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಧರ್ಮೀಯರು ಸಾಮರಸ್ಯದಿಂದ ಬದುಕುತ್ತಿದ್ದು ಅದನ್ನು ಕೆಡಿಸುವ ನಿಟ್ಟಿನಲ್ಲಿ ಇಂತಹ ವರ್ತನೆಯನ್ನು ತೋರಿದ್ದಾರೆ.
ಶಿಲುಬೆ ಕ್ರೈಸ್ತ ಸಮುದಾಯದಕ್ಕೆ ಗೌರವ ಹಾಗೂ ಪಾವಿತ್ರ್ಯತೆಯ ಸಂಕೇತವಾಗಿದ್ದು ಘಟನೆಯಿಂದ ಎಲ್ಲಾ ಕ್ರೈಸ್ತ ಸಮುದಾಯದವರ ಭಾವನೆಗಳಿಗೆ ಅಪಾರ ನೋವನ್ನುಂಟುಮಾಡಿದೆ. ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಘಟನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಬಳಿಕ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ್ ಸಂತೋಷ್ ಕರ್ನೆಲಿಯೋ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಇಂದು ಫೆಬ್ರವರಿ 24ರಂದು ಸೋಮವಾರ ಕಥೊಲಿಕ್ ಸಭಾ ಉಡುಪಿ ಮತ್ತು ಮಂಗ್ಳುರ್ ಇವರ ಜಂಟಿ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಆರೋಪಿಗಳ ಕೂಡಲೇ ಬಂಧನವಾಗುವಂತೆ ಪ್ರಾರ್ಥನೆಯನ್ನು ನಡೆಸಲಾಯಿತು. ಭೇಟಿಯ ಸಂದರ್ಭದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ.) ಇದರ ವತಿಯಿಂದ ಕೇಂದ್ರೀಯ ಅಧ್ಯಕ್ಷ ಸಂತೋಷ್ ಕರ್ನೆಲಿಯೋ, ಮಾಜಿ ಅಧ್ಯಕ್ಷ ರೋಬರ್ಟ್ ಮಿನೇಜಸ್, ಕೇಂದ್ರೀಯ ಆಂತರಿಕ ಲೆಕ್ಕ ಪರಿಶೋಧಕ ಶಾಂತಿ ಪಿರೇರಾ, ಉಡುಪಿ ವಲಯ ಅಧ್ಯಕ್ಷ ಲೆಸ್ಲಿ ಕರ್ನೆಲಿಯೋ, ಮೂಡುಬೆಳ್ಳೆ ಘಟಕ ಅಧ್ಯಕ್ಷೆ ಆ್ಯನ್ಸಿಲ್ಲಾ ಡಿಸೋಜ, ಉಡುಪಿ ಘಟಕ ಕಾರ್ಯದರ್ಶಿ ಲೊಯ್ಸೆಟಾ ಕರ್ನೆಲಿಯೋ, ಸದಸ್ಯೆ ರೀಟಾ ಡಿಸೋಜ, ಗುರಿಕಾರ ಫ್ರಾನ್ಸಿಸ್ ಲೋಬೊ, ವಾರ್ಡಿನ ಸದಸ್ಯ ರೋಬರ್ಟ್ ಡಿಸೋಜ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವತಿಯಿಂದ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ ಬಂಟ್ವಾಳ, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ ಮತ್ತು ವಲಯ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜ್ಪೆ ಹಾಗೂ ಲೋರೆನ್ಸ್ ಡಿಸೋಜ ಸುರತ್ಕಲ್ ಉಪಸ್ಥಿತರಿದ್ದರು.