ಡಾ। ರಾಘವೇಂದ್ರ ಭಟ್ಟ, ಉಪ ಮಹಾ ನಿರ್ದೇಶಕ (ಪಶು ವಿಜ್ಞಾನ) ಅವರಿಗೆ ಪ್ರತಿಷ್ಠಿತ ಡಾ| ಪಿ. ಭಟ್ಟಾಚಾರ್ಯ ಪ್ರಶಸ್ತಿ ಪ್ರದಾನ

ರಾಷ್ಟೀಯ ಕೃಷಿ ವಿಜ್ಞಾನ ಅಕಾಡೆಮಿಯ ವತಿಯಿಂದ ನೀಡಲಾಗುವ ಪ್ರಸಿದ್ಧ ವಿಜ್ಞಾನಿ ಡಾ। ಪಿ. ಭಟ್ಟಾಚಾರ್ಯ ಮೆಮೋರಿಯಲ್ ಪ್ರಶಸ್ತಿಯನ್ನು ಭಾರತೀಯ ಕೃಷಿ ಸಂಶೋಧನೆ ಸಂಸ್ಥೆ, ದೆಹಲಿಯಲ್ಲಿ ಉಪ ಮಹಾ ನಿರ್ದೇಶಕ (ಪಶು ವಿಜ್ಞಾನ) ರಾಗಿ ಕಾರ್ಯನಿರತರಾಗಿರುವ ಡಾ| ರಾಘವೇಂದ್ರ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು. ಡಾ| ಭಟ್ಟ ಅವರು ಈ ಪ್ರಶಸ್ತಿಯನ್ನು ಫೆಬ್ರವರಿ 20ರಂದು ಉತ್ತರಾಖಂಡ್ ನ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರಿಂದ , ಜಿ.ಬಿ. ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಪಂತ್ ನಗರ್ ನಲ್ಲಿ ಆಯೋಜಿತವಾದ 12ನೇ ರಾಷ್ಟೀಯ ಕೃಷಿ ವಿಜ್ಞಾನ ಕಾಂಗ್ರೆಸ್ ನಲ್ಲಿ ಸ್ವೀಕರಿಸಿದರು.
ಡಾ| ಭಟ್ಟ ಅವರು ಪಶು ವಿಜ್ಞಾನ ಕ್ಷೇತ್ರದಲ್ಲಿ ಒಬ್ಬ ಪ್ರಮುಖ ವಿಜ್ಞಾನಿಯಾಗಿದ್ದು, ಬೆಂಗಳೂರಿನ ರಾಷ್ಟೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಗೆ ಒಂದು ದಶಕದ ಕಾಲ ನಿರ್ದೇಶಕರಾಗಿದ್ದು, ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಕಾರಣರಾಗಿದ್ದಾರೆ. ಡಾ| ಭಟ್ಟ ಅವರ ಮುಂಚೂಣಿಯಲ್ಲಿ ಸಂಸ್ಥೆಯು ಜರ್ಮನಿ, ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ದೇಶಗಳ ಹಲವಾರು ಅಂತರ ರಾಷ್ಟೀಯ ವೈಜ್ಞಾನಿಕ ಸಂಸ್ಥೆಗಳೊಡನೆ ಸಹಯೋಗ ಹೊಂದಿ ಅನೇಕ ಪ್ರಮುಖ ಯೋಜನೆಗಳನ್ನು ಸಫಲಪೂರ್ವಕವಾಗಿ ನಿರ್ವಹಿಸಿ ಸಂಸ್ಥೆಯು ವಿಶ್ವ ಮಟ್ಟದಲ್ಲಿ ಹೆಸರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಾ| ಭಟ್ಟ ಅವರು ಇದಕ್ಕೆ ಮುಂಚೆ ತಮ್ಮ ಉತ್ಕೃಷ್ಟ ಸೇವೆಗಾಗಿ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ, ಡಾ| ಭಟ್ಟ ಅವರು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ದೆಹಲಿಯಲ್ಲಿ ಉಪ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.